ಉಳ್ಳಾಲ: ದೈವದ ನೇಮ ಆಗುವ ಗದ್ದೆಯಲ್ಲಿ ಕಸ-ಕಡ್ಡಿ, ತ್ಯಾಜ್ಯರಾಶಿಯನ್ನು ಕಂಡು ಕೆಂಡಾಮಂಡಲವಾದ ವೈದ್ಯನಾಥ ದೈವ ಕಸ ತೆಗೆದು ಶುಚಿಗೊಳಿಸಿದಿದ್ದಲ್ಲಿ ವಲಸರಿ ಹೊರಡೋಲ್ಲವೆಂದು ಆಕ್ರೋಶದಿಂದ ನುಡಿದ ಘಟನೆ ಮಂಗಳೂರು ಹೊರವಲಯದ ಕನೀರುತೋಟದಲ್ಲಿ ನಡೆದಿದೆ.
ತೊಕ್ಕೊಟ್ಟು ಕುಂಪಲ ಬಳಿಯ ಕನೀರುತೋಟದಲ್ಲಿ ಮಲಯಾಳ ಚಾಮುಂಡಿ ದೈವದ ಕಟ್ಟೆ ಜಾತ್ರೆ ಬುಧವಾರ ನಡೆದಿತ್ತು. ರಾತ್ರಿ ಇಲ್ಲಿ ವೈದ್ಯನಾಥ ದೈವದ ನೇಮ ಹಾಗೂ ವಲಸರಿ ಸೇವೆಯಿತ್ತು. ಆವೇಶವಾಗಿ ಅಣಿಯೇರಿ ನೇಮ ನಡೆದು ಇನ್ನೇನು ವಲಸರಿ ಹೊರಡಬೇಕು ಎನ್ನುವಾಗ ವೈದ್ಯನಾಥ ದೈವವು ಆಡಳಿತ ಮಂಡಳಿಯ ಮೇಲೆ ಕೆಂಡಾಮಂಡಲವಾಗಿದೆ.
ನೇಮ ನಡೆಯುವ ಗದ್ದೆಯಲ್ಲಿ ತ್ಯಾಜ್ಯದ ರಾಶಿಯೇ ಇದಕ್ಕೆ ಕಾರಣ. “”ಇದೇನು ವಲಸರಿ ಗದ್ದೆಯೋ, ಸಂತೆಗದ್ದೆಯೋ? ಎಂದು ಆಡಳಿತ ಮಂಡಳಿಯಲ್ಲಿ ಪ್ರಶ್ನಿ ಸಿದ್ದು, ನಾನು ಎಂಜಲು ತುಳಿದು ಹೋಗಬೇಕೇ? ತ್ಯಾಜ್ಯ ತೆಗೆಯದೆ, ದೀಪದ ದಳಿಯಲ್ಲಿ ಇರುವ ಸಂತೆ ತೆಗೆಯದೆ ವಲಸರಿ ಇಳಿಯೋಲ್ಲ” ಎಂದು ದೈದ್ಯನಾಥ ದೈವ ಕೋಪಾವೇಶದಲ್ಲಿ ನುಡಿದಿದೆ.
ಕನೀರುತೋಟದಲ್ಲಿ ಇಕ್ಕಟ್ಟಾದ ಗದ್ದೆಯಲ್ಲಿ ಜಾತ್ರೆ ನಡೆಯುತ್ತಿದ್ದು, ಇರುವ ಗದ್ದೆಯಲ್ಲೇ ಸಂತೆ ಆಂಗಡಿಗಳು ಪ್ರತೀ ವರ್ಷ ವ್ಯಾಪಾರ ನಡೆಸುತ್ತಿದ್ದು, ಗದ್ದೆಯಲ್ಲಿ ಐಸ್ಕ್ರೀಂ ಕಪ್ ಸೇರಿದಂತೆ ಕಸವನ್ನು ಎಲ್ಲೆಂದರಲ್ಲಿ ಎಸೆಯಲಾಗಿತ್ತು.
ಕಾರ್ಯಕರ್ತರು ತತ್ಕ್ಷಣ ಕಸವನ್ನು ತೆಗೆದಿದ್ದು, ದೀಪ ದಳಿ ಬಳಿ ಹಾಕಲಾಗಿದ್ದ ಸಂತೆ ಅಂಗಡಿಗಳನ್ನು ಬದಿಗೆ ಸರಿಸಲಾಯಿತು. ಬಳಿಕ ಜಾತ್ರೆ ನಡೆಯಿತು.