Advertisement

 ಮೆಸ್ಕಾಂ ಜನಸಂಪರ್ಕ ಸಭೆ

02:51 PM Nov 08, 2017 | |

ಸುಳ್ಯ: ಪ್ರಸ್ತುತ ಸುಳ್ಯ-ಪುತ್ತೂರು 33 ಕೆವಿ ವಿದ್ಯುತ್‌ ತಂತಿ ಬದಲಾವಣೆ ಕಾಮಗಾರಿಗಾಗಿ ವಾರಕ್ಕೆರಡು ಬಾರಿ ವಿದ್ಯುತ್‌ ಸ್ಥಗಿತಗೊಳಿಸಲಾಗುತ್ತಿದೆ. ಪೂರ್ತಿ ಕಾಮಗಾರಿ ನಿರ್ವಹಿಸಲು ಇನ್ನೂ 12 ದಿನಗಳ ಅಗತ್ಯವಿದ್ದು, ವಾರಕ್ಕೆ ಕನಿಷ್ಠ ಮೂರ್‍ನಾಲ್ಕು ಬಾರಿ ವಿದ್ಯುತ್‌ ಸ್ಥಗಿತಗೊಳಿಸಿದರೆ ಡಿಸೆಂಬರ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಮೆಸ್ಕಾಂನ ಅಧೀಕ್ಷಕ ಎಂಜಿನಿಯರ್‌ ಮಂಜಪ್ಪ ತಿಳಿಸಿದರು.

Advertisement

ಮಂಗಳವಾರ ಸುಳ್ಯ ತಾ.ಪಂ. ಸಭಾಂಗಣದಲ್ಲಿ ಜರಗಿದ ಮೆಸ್ಕಾಂ ಸುಳ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ತಾ|ಗೆ 110 ಕೆವಿ ವಿದ್ಯುತ್‌ ಅಗತ್ಯವಿದೆ. ಪ್ರಸ್ತುತ 33 ಕೆವಿ ಲಭ್ಯವಿದ್ದು, ಇದರಲ್ಲಿ ಹಳೆಯ ತಂತಿಗಳ ಬದಲಾವಣೆ ಕಾರ್ಯ 4 ತಂಡಗಳಿಂದ ಸಮಾರೋಪಾದಿಯಲ್ಲಿ ನಿರ್ವಹಿಸಲಾಗುತ್ತಿದೆ. ಹಳೆಯ ಲೈನ್‌ನಲ್ಲಿ ತಾ|ಗೆ 17 ಕೆವಿಯಷ್ಟು ಪೂರೈಕೆಯಾಗುತ್ತದೆ. ಉಳಿದಂತೆ ಸೋರಿಕೆಯಾಗುತ್ತದೆ. ಹೊಸ ತಂತಿಗಳ ಜೋಡಣೆಯಿಂದಾಗಿ ಪೂರೈಕೆ ಮಟ್ಟ 7 ಕೆವಿಯಷ್ಟು ಹೆಚ್ಚಲಿದೆ. ಇದರಿಂದ ಈಗ ಇರುವ ತೊಂದರೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಬಹುದು ಎಂದರು.

ವಿದ್ಯುತ್‌ ಸೋರಿಕೆ ತಡೆಗೆ ಕ್ರಮ
ಈಗ ವಿದ್ಯುತ್‌ ಗ್ರಾಹಕ ಸಂಖ್ಯೆ ಹೆಚ್ಚಿದೆ. ಹಳೆಯ ಪರಿವರ್ತಕಗಳು, ವಾಹಕಗಳಲ್ಲಿ ಹೆಚ್ಚು ವಿದ್ಯುತ್‌ ಸೋರಿಕೆಯಾಗುವುದನ್ನು ತಡೆಗಟ್ಟಲು ಇಲಾಖೆ ಪ್ರಯತ್ನಿಸುತ್ತಿದೆ. ಹಿಂದೆ ನಗರಪ್ರದೇಶಗಳನ್ನು ಗುರಿಯಾಗಿಸಿ
ಕೊಂಡಿದ್ದು, ಈಗ ಗ್ರಾಮಾಂತರ ಭಾಗಗಳತ್ತ ಕಾರ್ಯಪ್ರವೃತ್ತವಾಗುತ್ತಿದೆ. ಈ ಮೂಲಕ ಗ್ರಾಹಕರ ಮನೆ-ಮನ ತಲುಪುವ ಯೋಜನೆ ಯತ್ತ ಮುಂದಾಗಿದೆ ಎಂದರು.

ಪುಸ್ತಕಗಳಿಗೆ ಸಹಿ ಹಾಕಬೇಕು
ಕೆಳ ಹಂತದ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಲು ಭೇಟಿ ನೀಡಿ ನಿಗದಿತ ಸ್ಥಳದಲ್ಲಿ ದಾಖಲಾತಿ ಪುಸ್ತಕಗಳಿಗೆ ಸಹಿ ಹಾಕಬೇಕು. ತಾ|ನ ಎಸ್‌ಸಿ, ಎಸ್‌ಟಿ ಅನುದಾನ ಸದುಪಯೋಗಿಸಬೇಕು. ಅದಕ್ಕಾಗಿ ಅಗತ್ಯವಿರುವ ಕಾಲನಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ತಾಲೂಕಿನ ಪಂ.ಗಳಿಂದ ಇಲಾಖೆಗೆ ಮನವಿ ನೀಡಿದರೆ ಕಲ್ಪಿಸಲು ಸಹಾಯವಾಗಲಿದೆ ಎಂದರು.

Advertisement

ಸಬ್‌ಡಿವಿಜನ್‌ಗೆ ಸೂಕ್ತ ಕಟ್ಟಡ
ಮೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರ ನಾರಾಯಣ ಪೂಜಾರಿ ಮಾತನಾಡಿ, ಸುಬ್ರಹ್ಮಣ್ಯದಲ್ಲಿ ಸಬ್‌ಡಿವಿಜನ್‌ ಕಚೇರಿಗೆ ಸೂಕ್ತ ಕಟ್ಟಡವಿಲ್ಲ. ಬಾಡಿಗೆ ಸಮಸ್ಯೆ ಇದೆ. ದೇಗುಲದವರು ಬಾಡಿಗೆ ನೀಡಲು ಮುಂದಾಗಿದ್ದಾರೆ. 1,500 ಚ.ಅಡಿಯ ಕೊಠಡಿ ಅಗತ್ಯ. ಎಲ್ಲೂ ಸರಿಯಾಗದಿದ್ದರೆ ಅಂತಿಮವಾಗಿ ಪರ್ವತಮುಖಿಯಲ್ಲಿ ಆರಂಭಿಸಲಾಗುವುದು ಎಂದರು.

ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲ: ಆರೋಪ 
ಸುಬ್ರಹ್ಮಣ್ಯದಲ್ಲಿ 15 ಸಾವಿರ ರೂ.ಗೆ ಬಾಡಿಗೆ ಕಟ್ಟಡಗಳು ಲಭ್ಯವಿವೆ. ಆದರೆ ಮೆಸ್ಕಾಂ ಅಧಿಕಾರಿಗಳು ವಿನಾಕಾರಣ ಕಚೇರಿ ಆರಂಭಿಸಲು ಆಸಕ್ತಿ ವಹಿಸುತ್ತಿಲ್ಲ ಎಂದು ವಿಪಕ್ಷ ನಾಯಕ ಅಶೋಕ್‌ ನೆಕ್ರಾಜೆ ಪ್ರತಿಕ್ರಿಯಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಸಮಿತಿ ಕೂಡ ಕೊಠಡಿ ನೀಡಲು ಮುಂದಾಗಿದೆ. ಅದೂ ಅಲ್ಲದೇ ಸುಬ್ರಹ್ಮಣ್ಯ, ಕುಮಾರಧಾರಾ ಮೊದಲಾದೆಡೆ 1,300 ಚದರ ಅಡಿಯ ಕಟ್ಟಡಗಳಿವೆ. ಕುಂಬ್ರದಲ್ಲಿ 25 ಸಾವಿರ ರೂಪಾಯಿ ಬಾಡಿಗೆ ನೀಡುತ್ತಿರುವ ಇಲಾಖೆಗೆ ಸುಬ್ರಹ್ಮಣ್ಯದಲ್ಲಿ ಕನಿಷ್ಠ 15 ಸಾವಿರ ರೂಪಾಯಿ ನೀಡಿ ಕಚೇರಿ ಆರಂಭಿಸಲು ಹಿಂದೆ ಮುಂದು ನೋಡುತ್ತಿರುವುದು ಸರಿಯಲ್ಲ. ಉದ್ದೇಶಪೂರ್ವಕವಾಗಿಯೇ ವಿಳಂಬ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವರ ಸೂಚನೆ
ಸುಬ್ರಹ್ಮಣ್ಯದಲ್ಲಿ ಸಬ್‌ಡಿವಿಜನ್‌ ಕಚೇರಿಯನ್ನು ಶೀಘ್ರ ಕಾರ್ಯಾ ರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸೋಮವಾರ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ವೇಳೆ ವಿಪಕ್ಷ ನಾಯಕ ಅಶೋಕ್‌ ನೆಕ್ರಾಜೆ, ಸಚಿವರ ಗಮನ ಸೆಳೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next