ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಂಗಳೂರು ವಿದ್ಯುತ್ ವಿದ್ಯುತ್ ಸರಬರಾಜು ಕಂಪೆನಿ (ಮೆಸ್ಕಾಂ) ಗ್ರಾಹಕ ಸ್ನೇಹಿ ಸೇವೆ ನೀಡುವಂತೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮೆಸ್ಕಾಂ ಅಧ್ಯಕ್ಷ ಪಂಕಜ್ ಕುಮಾರ್ ಪಾಂಡೆ ಸೂಚಿಸಿದರು.
ಅವರು ಮೆಸ್ಕಾಂ ಸ್ಥಾಪನೆಗೊಂಡು 21 ವರ್ಷಗಳು ಪೂರ್ಣಗೊಂಡು ಬೆಂಗಳೂರಿನ ಕಾವೇರಿ ಭವನದಲ್ಲಿ ಜರಗಿದ 100ನೇ ನಿರ್ದೇಶಕ ಮಂಡಳಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವ್ಯವಸ್ಥಾಪಕ ನಿರ್ದೇಶಕಿ ಡಿ. ಪದ್ಮಾವತಿ ಮಾತನಾಡಿ, ಮೆಸ್ಕಾಂ ದೇಶದಲ್ಲಿಯೇ ಅತ್ಯುತ್ತಮ ವಿದ್ಯುಚ್ಚಕ್ತಿ ಸರಬರಾಜು ಕಂಪೆನಿಗಳಲ್ಲೊಂದಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ನಿರ್ವಹಣೆ ತೋರುತ್ತಿದೆ. ಮೆಸ್ಕಾಂನ ಸೇವೆಗಳನ್ನು ಮತ್ತಷ್ಟು ಉತ್ತಮಗೊಳಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ವಿದ್ಯುತ್ಛಕ್ತಿ ಪೂರೈಕೆ, ವಿದ್ಯುತ್ ನಷ್ಟ ತಡೆಗಟ್ಟುವಿಕೆ, ವಿದ್ಯುತ್ ಪರಿವರ್ತಕಗಳ ದುರಸ್ತಿ, ಹಾಳಾದ ಪರಿವರ್ತಕಗಳ ಬದಲಾವಣೆ ಕುರಿತಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.
ಮೆಸ್ಕಾಂನ ತಾಂತ್ರಿಕ ನಿರ್ದೇಶಕ ಎಚ್.ಜಿ. ರಮೇಶ್, ನಿರ್ದೇಶಕರಾದ ಡಾ| ಎಂ.ಟಿ. ರೆಜು, ಅಪರ್ಣಾ ಪಾವಟೆ, ಜಿ. ಶೀಲಾ, ವಿ. ಕೃಷ್ಣಪ್ಪ, ಆರ್.ಎಚ್, ಲಕ್ಷ್ಮೀಪತಿ, ಕೆ. ಶಿವಣ್ಣ, ಮುಖ್ಯ ಆರ್ಥಿಕ ಅಧಿಕಾರಿ ಬಿ. ಜಗದೀಶ್ ಉಪಸ್ಥಿತರಿದ್ದರು.
ಮೆಸ್ಕಾಂನ ಕಂಪೆನಿ ಕಾರ್ಯದರ್ಶಿ ಪ್ರಭಾತ್ ಮ.ಜೋಶಿ ಸ್ವಾಗತಿಸಿದರು.