ಬೆಳಗಾವಿ: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಎಂಇಎಸ್‌ನ ಮಾಜಿ ಶಾಸಕ ಸಂಭಾಜಿ ಪಾಟೀಲ (68) ಅವರು ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ.
ಕಳೆದ ಎಡರು ವರ್ಷಗಳಿಂದ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ಸಂಭಾಜಿ ಪಾಟೀಲ, ಆಗಾಗ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಓರ್ವ ಪುತ್ರ ಕಳೆದ ತಿಂಗಳ ಹಿಂದೆಯಷ್ಟೆ ಬೆಂಗಳೂರಿನಲ್ಲಿ ನಡೆದ ರೈಲು ಅಪಘಾತದಲ್ಲಿ ನಿಧನ ಹೊಂದಿದ್ದರು.
ಇನ್ನೊಂಡೆದೆ, ಇವರ ಸೊಸೆ ಮಹಾರಾಷ್ಟ್ರದಲ್ಲಿ ಕೌಟುಂಬಿಕ ಕಲಹದಿಂದ ಮಾಜಿ ಶಾಸಕರ ವಿರುದ್ಧವೇ ದೂರು ದಾಖಲಿಸಿದ್ದರು. ಒಂದೆಡೆ ಮಗನ ಅಗಲಿಕೆ, ಇನ್ನೊಂದೆಡೆ ಕೌಟಂಬಿಕ ಕಲಹದಿಂದ ಸಂಭಾಜಿ ಪಾಟೀಲ ತೀವ್ರ ನೊಂದಿದ್ದರು.
ಬೆಳಗಾವಿ ಮಹಾನಗರ ಪಾಲಿಕೆಗೆ ನಾಲ್ಕು ಬಾರಿ ಮೇಯರ್ ಆಗಿದ್ದ ಸಂಭಾಜಿ ಪಾಟೀಲ, ಬೆಳಗಾವಿ ಗಡಿ ವಿಷಯದಲ್ಲಿ ಮುಂಚೂಣಿಯಲ್ಲಿದ್ದರು. ಮರಾಠಿ ಭಾಷಿಕರನ್ನು ಸೆಳೆಯಲು ಕನ್ನಡಿಗರ ವಿರುದ್ಧ ಆಗಾಗ ಹೇಳಿಕೆಗಳನ್ನು ನೀಡಿ ವಿವಾದಕ್ಕೀಡಾಗುತ್ತಿದ್ದರು.
ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದಾಗ ಚಳಿಗಾಲದ ಅಧಿವೇಶನದ ವೇಳೆ ಕನ್ನಡಿಗರ ಶವಯಾತ್ರೆಗೆ ನಾಲ್ವರು ಎಂಇಎಸ್ ಶಾಸಕರ ಅಗತ್ಯವಿದೆ ಎಂಬ ಅವರ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು. ಸಂಭಾಜಿ ಪಾಟೀಲ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.