Advertisement

ಎಂಇಎಸ್‌ ಕರಾಳ ದಿನ ರ್ಯಾಲಿಯಲ್ಲಿ ಕಲ್ಲು ತೂರಾಟ: ಲಘು ಲಾಠಿ ಪ್ರಹಾರ

06:00 AM Nov 02, 2018 | |

ಬೆಳಗಾವಿ: ರಾಜ್ಯೋತ್ಸವ ವಿರೋಧಿಸಿ ಮಹಾರಾಷ್ಟ್ರ ಏಕೀಕರಣ ಸಮಿತಿ ಹಮ್ಮಿಕೊಂಡಿದ್ದ ಕರಾಳ ದಿನಾಚರಣೆ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. 

Advertisement

ಗೋವಾವೇಸ್‌ ಬಸವೇಶ್ವರ ವೃತ್ತದಲ್ಲಿ ಕಲ್ಲು ತೂರಾಟ ನಡೆಸಲಾಯಿತು. ಅಲ್ಲಿಂದ ಅನತಿ ದೂರದಲ್ಲಿ ಕನ್ನಡ ಧ್ವಜ ಹಿಡಿದು ನಿಂತಿದ್ದ ಕನ್ನಡಿಗರ ವಿರುದ್ಧ ಎಂಇಎಸ್‌ ಕಾರ್ಯಕರ್ತರು ಘೋಷಣೆ ಕೂಗುತ್ತಾ ಏಕಾಏಕಿ ಹಲ್ಲೆ ನಡೆಸಲು ಮುಂದಾಗುತ್ತಿದ್ದಂತೆ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ನಂತರ ಕಿಡಿಗೇಡಿಗಳು ಪಟಾಕಿ ಮದ್ದು ಸಿಡಿಸಿ ಪೊಲೀಸರ ವಾಹನಗಳ
ಮೇಲೆ ಎಸೆದರು. ಆಗ ಮತ್ತೂಮ್ಮೆ ಪೊಲೀಸರು ಲಾಠಿ ಬೀಸಿ ಗುಂಪು ಚದುರಿಸಿದರು. ಈ ವೇಳೆ, ವೃತ್ತದ ಬಳಿ ನಿಂತಿದ್ದ ಪೊಲೀಸ್‌ ವಾಹನದ ಮೇಲೆ 2-3 ಕಲ್ಲುಗಳು ಬಿದ್ದವು. ಈ ಮಧ್ಯೆ, ಕರಾಳ ದಿನದ ಅಂಗವಾಗಿ ಬೆಳಗ್ಗೆ ನಗರದ ಮಹಾದ್ವಾರ ರಸ್ತೆಯ ಸಂಭಾಜಿ ಉದ್ಯಾನದಿಂದ ಆರಂಭವಾದ ರ್ಯಾಲಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕರ್ನಾಟಕ ಸರಕಾರದ ವಿರುದ್ಧ ಘೋಷಣೆ ಕೂಗುತ್ತ, ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲೇಬೇಕು ಎಂದು ಘೋಷಣೆ ಕೂಗುತ್ತ ರ್ಯಾಲಿಯಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದರು. 
ಮಹಾರಾಷ್ಟ್ರದ ಕೊಲ್ಲಾಪುರ ಶಿವಸೇನೆ ಮುಖಂಡ ವಿಜಯ ದೇವಣೆ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಬಳಿಕ, ಮರಾಠಾ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವವರೆಗೆ ನಾವು ಸುಮ್ಮನಿರುವುದಿಲ್ಲ ಎಂದು ನಾಯಕರು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಸಂಭಾಜಿ ಪಾಟೀಲ ಸೇರಿದಂತೆ ಪ್ರಮುಖರು ಗೈರಾಗಿದ್ದರಿಂದ ಕರಾಳ ದಿನ ಕಳಾಹೀನವಾಗಿ ಕಂಡು ಬಂತು. ಪ್ರತಿ ವರ್ಷ ಕರಾಳ ದಿನಾಚರಣೆಯಲ್ಲಿ ಮರಾಠಿಯ ಮೇಯರ್‌-ಉಪಮೇಯರ್‌ ಭಾಗಿಯಾಗುತ್ತಿದ್ದರು. ಈ ಸಲ ಮೇಯರ್‌ ಕನ್ನಡಿಗರಾಗಿದ್ದು, ಅದ್ದೂರಿ ರಾಜ್ಯೋತ್ಸವಕ್ಕೆ ಮೆರಗು ಬಂದಿದೆ. ಆದರೆ ಉಪಮೇಯರ್‌ ಮಧುಶ್ರೀ ಮರಾಠಿ ಭಾಷಿಕರಾಗಿದ್ದು, ಬೆಳಗ್ಗೆ ಪಾಲಿಕೆಯಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂತರ ನಡೆದ ಕರಾಳ ದಿನಾಚರಣೆ ರ್ಯಾಲಿಯಲ್ಲೂ
ಭಾಗಿಯಾಗಿ ಚರ್ಚೆಗೆ ಕಾರಣರಾದರು.

ಬೆಳಗಾವಿಯ ಗಡಿ ಹೋರಾಟಕ್ಕೆ 60 ವರ್ಷಗಳೇ ಗತಿಸಿವೆ. ಆದರೆ, ಇನ್ನೂ ಇಲ್ಲಿಯ ಮರಾಠಿ ಭಾಷಿಕರಿಗೆ ನ್ಯಾಯ ಸಿಗುತ್ತಿಲ್ಲ. ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಸೇರಿಸಲು ಪ್ರಯತ್ನಿಸಬೇಕು. ಕರ್ನಾಟಕದಲ್ಲಿರುವ ಮರಾಠಿಗರಿಗೆ ತೊಂದರೆ ಕೊಟ್ಟರೆ ಮಹಾ ರಾಷ್ಟ್ರದಲ್ಲಿರುವ ಕನ್ನಡಿಗರಿಗೆ ತೊಂದರೆ ನೀಡಬೇಕಾಗುತ್ತದೆ. ಈ ಸರ್ಕಾರ ಮರಾಠಿಗರನ್ನು ರಕ್ಷಿಸದಿದ್ದರೆ ಅಲ್ಲಿಯ ಕನ್ನಡಿಗರಿಗೆ ನಾವೂ ತೊಂದರೆ ನೀಡುತ್ತೇವೆ.
● ವಿಜಯ ದೇವಣೆ, ಕೊಲ್ಲಾಪುರ ಶಿವಸೇನೆ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next