Advertisement

ಇಂದು ಮೇರಿ-ನಿಖತ್‌ ಬಾಕ್ಸಿಂಗ್‌ ಫೈನಲ್‌

10:01 AM Dec 29, 2019 | sudhir |

ಹೊಸದಿಲ್ಲಿ: ಆರು ಬಾರಿಯ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ ಮೇರಿ ಕೋಮ್‌ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್‌ ಅರ್ಹತಾ ಟ್ರಯಲ್ಸ್‌ ಫೈನಲ್‌ನಲ್ಲಿ ಶನಿವಾರ ನಿಖತ್‌ ಜರೀನ್‌ ಅವರನ್ನು ಎದುರಿಸಲಿದ್ದಾರೆ. 51 ಕೆಜಿ ವಿಭಾಗದ ಕುತೂಹಲ ಕೆರಳಿಸಿರುವ ಈ ಪಂದ್ಯ ವೀಕ್ಷಿಸಲು ದೇಶದ ಕ್ರೀಡಾ ಪ್ರೇಮಿಗಳು ತುದಿಗಾಲಲ್ಲಿ ನಿಂತಿದ್ದಾರೆ.

Advertisement

ಶುಕ್ರವಾರ ರಾಷ್ಟ್ರೀಯ ಆಯ್ಕೆ ಟ್ರಯಲ್ಸ್‌ನ ಮೊದಲ ಪಂದ್ಯದಲ್ಲಿ ಮಾಜಿ ವಿಶ್ವ ಕಿರಿಯರ ಚಾಂಪಿಯನ್‌ ನಿಖತ್‌ ಜರೀನ್‌ ಹಾಲಿ ರಾಷ್ಟ್ರೀಯ ಚಾಂಪಿಯನ್‌ ಜ್ಯೋತಿ ಗುಲಿಯಾ ಅವರನ್ನು ಸೋಲಿಸಿದರು. ಮತ್ತೂಂದು ಪಂದ್ಯದಲ್ಲಿ ಅನುಭವಿ ಬಾಕ್ಸರ್‌, ಒಲಿಂಪಿಯನ್‌ ಮೇರಿ ಕೋಮ್‌ ಎದುರಾಳಿ ರಿತು ಗ್ರೆವಾಲ್‌ ಅವರನ್ನು ಮಣಿಸುವ ಮೂಲಕ ಫೈನಲ್‌ ಹಂತ ಪ್ರವೇಶಿಸಿದರು.

ಕುತೂಹಲ ಕೆರಳಿಸಿದ ಫೈನಲ್‌
ಇಬ್ಬರ ನಡುವಿನ ಫೈನಲ್‌ ಪಂದ್ಯ ಶನಿವಾರ ಹೊಸದಿಲ್ಲಿಯಲ್ಲಿ ನಡೆಯಲಿದೆ. ಇಲ್ಲಿನ ವಿಜೇತರು ಒಲಿಂಪಿಕ್ಸ್‌ ಅರ್ಹತಾ ಕೂಟಕ್ಕೆ ಅರ್ಹತೆ ಪಡೆದು ಕೊಳ್ಳಲಿದ್ದಾರೆ. ಹೀಗಾಗಿ ಈ ಪಂದ್ಯ ಇಬ್ಬರಿಗೂ ಮಹತ್ವದ್ದಾಗಿದೆ.

“ನನಗ್ಯಾವುದೇ ಒತ್ತಡವಿಲ್ಲ. ಸುಲಭವಾಗಿ ಪಂದ್ಯ ಗೆಲ್ಲುವುದನ್ನು ಎದುರು ನೋಡುತ್ತಿದ್ದೇನೆ. ಜಯಕ್ಕಾಗಿ ಶೇ. 100ರಷ್ಟು ಪ್ರಯತ್ನವನ್ನು ಮಾಡಲಿದ್ದೇನೆ. ಮೇರಿ ಎದುರು ಹೋರಾಡುವುದಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದೇನೆ’ ಎಂದು ಜರೀನ್‌ ತಿಳಿಸಿದ್ದಾರೆ.

ಮೇರಿ ಆಯ್ಕೆ ಪ್ರಶ್ನಿಸಿದ್ದ ನಿಖತ್‌ ಜರೀನ್‌
ಒಲಿಂಪಿಕ್ಸ್‌ ಅರ್ಹತಾ ಕೂಟಕ್ಕೆ ಮೇರಿ ಕೋಮ್‌ ಅವರನ್ನು ಭಾರತೀಯ ಬಾಕ್ಸಿಂಗ್‌ ಸಂಸ್ಥೆ ನೇರ ಆಯ್ಕೆ ಮಾಡಿತ್ತು. ಇದೇ 51 ಕೆಜಿ ವಿಭಾಗದ ಮತ್ತೋರ್ವ ಸ್ಪರ್ಧಿಯಾಗಿದ್ದ ನಿಖತ್‌ ಜರೀನ್‌ ಇದನ್ನು ಪ್ರಶ್ನೆ ಮಾಡಿದ್ದರು. ಆಯ್ಕೆ ಟ್ರಯಲ್ಸ್‌ ನಡೆಸದೇ ಯಾವ ಆಧಾರದಲ್ಲಿ ಮೇರಿ ಕೋಮ್‌ಗೆ ಅರ್ಹತೆ ನೀಡಿದ್ದೀರಿ ಎಂದು ಬಹಿರಂಗವಾಗಿ ನಿಖತ್‌ ಪ್ರಶ್ನಿಸಿದ್ದರು. ಇದು ಇಬ್ಬರೂ ಆಟಗಾರ್ತಿಯರ ನಡುವೆ ಮುಸುಕಿನ ಗುದ್ದಾಟಕ್ಕೆ ಕಾರಣವಾಯಿತು.

Advertisement

“ನಿಖತ್‌ ಜರೀನ್‌ ಹಲವು ದೇಶಿ ಕೂಟಗಳಲ್ಲಿ ನನ್ನೆದುರು ಸೋಲುಂಡಿದ್ದಾರೆ. ಹೀಗಿದ್ದರೂ ಮತ್ತೂಮ್ಮೆ ಹೋರಾಟಕ್ಕೆ ಇಳಿಯುತ್ತಿದ್ದಾರೆ’ ಎಂಬುದು ಮೇರಿ ಪ್ರತಿಕ್ರಿಯೆಯಾಗಿತ್ತು. ಅಂತಿಮವಾಗಿ ವಿಷಯ ಕ್ರೀಡಾ ಸಚಿವಾಲಯದ ತನಕ ತಲುಪಿತ್ತು. ಪರೀಕ್ಷಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಕ್ರೀಡಾ ಸಚಿವ ರಿಜಿಜು ಸೂಚಿಸಿದ್ದರು. ಅಂತಿಮವಾಗಿ ಒತ್ತಡಕ್ಕೆ ಮಣಿದ ಭಾರತೀಯ ಬಾಕ್ಸಿಂಗ್‌ ಸಂಸ್ಥೆ ಆಯ್ಕೆ ಟ್ರಯಲ್ಸ್‌ ನಡೆಸಲು ಮುಂದಾಯಿತು.

Advertisement

Udayavani is now on Telegram. Click here to join our channel and stay updated with the latest news.

Next