Advertisement

ಬ್ಯಾಂಕ್‌ಗಳ ವಿಲೀನ: ವೇಗ ಕಳೆದುಕೊಂಡ ಕಾರ್ಯವೈಖರಿ!

01:02 AM Oct 13, 2020 | mahesh |

ಉಡುಪಿ: ಬ್ಯಾಂಕ್‌ಗಳ ವಿಲೀನದಿಂದ ಗ್ರಾಹಕ ಸ್ನೇಹಿ ಸಂವಹನ ನಡೆದು ವ್ಯವಹಾರ ಸುಲಲಿತವಾದೀತು ಎಂದು ನಂಬಿದ್ದ ಗ್ರಾಹಕರು ತಮ್ಮ ಖಾತೆಯಿಂದಲೇ ದುಡ್ಡು ತೆಗೆಯಲು, ವರ್ಗಾಯಿಸಲು ಪ್ರತಿನಿತ್ಯ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

Advertisement

ವಿಲೀನಗೊಂಡ ಬ್ಯಾಂಕ್‌ಗಳ ಗ್ರಾಹಕರು ಒಂದೆಡೆ ಬರುತ್ತಿರುವುದರಿಂದ ಸಹಜವಾಗಿ ಬ್ಯಾಂಕ್‌ಗಳ ಎದುರು ಸರದಿ ಸಾಲು ದಿನನಿತ್ಯ ಕಂಡುಬರುತ್ತಿದೆ. ಹಣ ವರ್ಗಾವಣೆ, ಖಾತೆ ನೋಂದಣಿ, ಪಾಸ್‌ಬುಕ್‌ ಬದಲಾವಣೆ, ಚೆಕ್‌ಬುಕ್‌ ಪಡೆಯುವುದು, ಎಟಿಎಂ ಕಾರ್ಡ್‌ ಪಡೆಯುವುದು ಸಹಿತ ಗ್ರಾಹಕರು ತಮ್ಮ ಅಮೂಲ್ಯ ಸಮಯವನ್ನು ಬ್ಯಾಂಕ್‌ನಲ್ಲಿ ವ್ಯಯ ಮಾಡಬೇಕಾದ ಸಂದರ್ಭ ಎದುರಾಗಿದೆ. ಈ ನಡುವೆ ಸರ್ವರ್‌ ಸಮಸ್ಯೆ ಕಂಡುಬಂದರೆ ತೊಂದರೆ ಮತ್ತಷ್ಟು ಬಿಗಡಾಯಿಸುತ್ತದೆ. ಇದು ಕೇವಲ ಒಂದು ಬ್ಯಾಂಕಿನ ಕಥೆಯಲ್ಲ. ವಿಲೀನಗೊಂಡ ಎಲ್ಲ ಬ್ಯಾಂಕುಗಳ ವ್ಯಥೆ. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜನಿಸಿ, ಸ್ಥಳೀಯರೊಂದಿಗೆ ಬೆರೆತು, ಬೆಳೆದು ಒಂದು ಹಂತಕ್ಕೆ ಜೀವನಾಡಿಯಾಗಿ ಬೆಳೆದಿದ್ದ ಬ್ಯಾಂಕ್‌ಗಳ ಗ್ರಾಹಕರು ವ್ಯವಹಾರ ನಡೆಸದೆ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ನೂರಾರು ಸಮಸ್ಯೆ
ಸಿಂಡಿಕೇಟ್‌ ಬ್ಯಾಂಕ್‌ ಕೆನರಾ ಬ್ಯಾಂಕಿನೊಂದಿಗೆ, ವಿಜಯ ಬ್ಯಾಂಕ್‌ ಬ್ಯಾಂಕ್‌ ಆಫ್ ಬರೋಡಾದೊಂದಿದೆ ಹಾಗೂ ಕಾರ್ಪೊರೇಷನ್‌ ಬ್ಯಾಂಕ್‌ ಯೂನಿಯನ್‌ ಬ್ಯಾಂಕ್‌ ಆಫ್ ಇಂಡಿಯಾದೊಂದಿಗೆ ವಿಲೀನವಾಗಿದ್ದವು. ದೌರ್ಭಾಗ್ಯವೆಂದರೆ ಸಿಂಡಿಕೇಟ್‌, ಕಾರ್ಪೊರೇಷನ್‌ ಮತ್ತು ವಿಜಯ ಬ್ಯಾಂಕಿನ ಗ್ರಾಹಕರ ಖಾತೆಗಳು ಇನ್ನೂ ಸ್ಥಿರವಾಗಿಲ್ಲ. ಪ್ರತಿ ನಿತ್ಯ ನೂರಾರು ಸಮಸ್ಯೆಗಳು ಎದುರಾಗುತ್ತಿವೆ. ಹಿರಿಯ ನಾಗರಿಕರಂತೂ ತಮ್ಮ ಪಿಂಚಣಿಯನ್ನು ಪಡೆಯಲು ಹೆಣಗಾಡುತ್ತಿದ್ದಾರೆ.

ವ್ಯವಹಾರ-ಆರೋಗ್ಯ ತೊಡಕು
ಆರೋಗ್ಯ ಹಿತದೃಷ್ಟಿಯಿಂದ ಬ್ಯಾಂಕ್‌ಗಳಿಗೆ ಬಾರದೆ ವ್ಯವಹಾರ ಮಾಡಲು ಇಚ್ಛಿಸುವ ಅನೇಕ ಗ್ರಾಹಕರು ಇದೀಗ ತಮ್ಮ ಖಾತೆಯ ವ್ಯವಹಾರದ ತೊಡಕಿನಿಂದಾಗಿ ತಮ್ಮ ಸಂಬಂಧ ಪಟ್ಟ ಖಾತೆಗಳತ್ತ ಬರಲೇಬೇಕಾಗಿದೆ. ಹೆಮ್ಮಾರಿಯಂತೆ ಕಾಡುತ್ತಿರುವ ಕೊರೊನಾದಿಂದ ರಕ್ಷಿಸಿಕೊಳ್ಳಲು ಇದರಿಂದ ಕಷ್ಟವಾಗುತ್ತಿದೆ. ಇನ್ನು ವಿವಿಧ ಬ್ಯಾಂಕ್‌ಗಳಲ್ಲಿ ವ್ಯವಹಾರ ನಡೆಸುವವರಿಗೆ ಮೊಬೈಲ್‌ ನಂಬರ್‌ ಗೊಂದಲ ತಲೆನೋವಾಗಿದೆ. ವಿಜಯ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್ ಬರೋಡಾದಲ್ಲಿ ಖಾತೆಗಳನ್ನು ಹೊಂದಿರುವ ಗ್ರಾಹಕರು ಆನ್‌ಲೈನ್‌ ವ್ಯವಹಾರ ನಡೆಸುವಾಗ ಅವರಿಗೆ “ನಿಮ್ಮ ಮೊಬೈಲ್‌ ನಂಬರ್‌ ಇತರ ಖಾತೆಗಳೊಂದಿಗೂ ಜೋಡಣೆಯಾಗಿದೆ’ ಎಂದು ಉತ್ತರ ಬರುತ್ತಿದೆ. ಇದರಿಂದ ತಮ್ಮ ಯಾವುದೇ ಹಣಕಾಸಿನ ವ್ಯವಹಾರ ನಡೆಸಲು ಸಾಧ್ಯವಾಗುತ್ತಿಲ್ಲವೆಂದು ಬ್ಯಾಂಕಿನ ಗ್ರಾಹಕ ಕಿರಣ್‌ ಕುಮಾರ್‌ ನೋವು ಹಂಚಿಕೊಂಡಿದ್ದಾರೆ.

ಬ್ಯಾಂಕ್‌ ವಿಲೀನವಾಗುವ ಮುನ್ನ ಸಿಬಂದಿ ಹಾಗೂ ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯವಿತ್ತು. ಆದರೆ ಈಗ ಅದು ಇಲ್ಲದಂತಾಗಿದೆ. ವಿಲೀನಗೊಂಡ ಅನಂತರ ಬ್ಯಾಂಕ್‌ ಕೆಲಸ ಕಾರ್ಯಗಳೂ ವಿಳಂಬವಾಗುತ್ತಿವೆ. ಎಲ್ಲ ಬ್ಯಾಂಕ್‌ಗಳಲ್ಲಿಯೂ ತ್ವರಿತಗತಿಯಲ್ಲಿ ಕೆಲಸವಾಗಲು ಹೆಚ್ಚುವರಿ ಸಿಬಂದಿ ನೇಮಕ ಮಾಡಿದರೆ ಉತ್ತಮ.
– ಪ್ರೀತಮ್‌ ಶೆಟ್ಟಿ ,ಗ್ರಾಹಕರು

Advertisement

ಬ್ಯಾಂಕ್‌ಗಳ ವಿಲೀನದಿಂದ ಗ್ರಾಹಕರಿಗೆ ಯಾವುದೇ ಸಮಸ್ಯೆ ಉಂಟಾಗಿಲ್ಲ. ಮೊಬೈಲ್‌ ಸಂಖ್ಯೆ ಜೋಡಣೆ ಸಹಿತ ಗ್ರಾಹಕರ ಎಲ್ಲ ದಾಖಲೆಗಳು ಯಥಾಸ್ಥಿತಿಯಲ್ಲಿಯೇ ಮುಂದುವರಿಯುತ್ತವೆ. ಕೆಲವೊಂದು ಬಾರಿ ನೆಟ್‌ವರ್ಕ್‌ ಸಮಸ್ಯೆಯಿಂದ ಕೆಲವರಿಗೆ ತೊಂದರೆ ಉಂಟಾಗಿರಬಹುದು. ಇಂತಹ ಸಮಸ್ಯೆ ಎದುರಾದಾಗ ಕೂಡಲೇ ದುರಸ್ತಿ ಮಾಡಿ ಗ್ರಾಹಕರಿಗೆ ಸೇವೆ ನೀಡಲಾಗುತ್ತದೆ.
– ರವಿ, ಕ್ಷೇತ್ರೀಯ ಪ್ರಬಂಧಕರು, ಬ್ಯಾಂಕ್‌ ಆಫ್ ಬರೋಡ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next