ಮಾದನಹಿಪ್ಪರಗಿ: ನಿಂಬಾಳ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿಂಬಾಳದ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಒಂದು ಸಾವಿರ ಕೂಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಬಿಸಿಲಿಗೆ ಬಸವಳಿಯುತ್ತಿದ್ದಾರೆ.
ಏಪ್ರಿಲ್ 13ರಿಂದ ಕೆರೆ ಹೂಳೆತ್ತುವ ಕಾಮಗಾರಿ ಆರಂಭಿಸಲಾಗಿದೆ. ಮುಂಜಾನೆ 9ರಿಂದ 11 ಗಂಟೆ ವರೆಗೆ, ಮಧ್ಯಾಹ್ನ 2ರಿಂದ 5 ಗಂಟೆ ವರೆಗೆ ಕೆಲಸ ನಡೆಯಬೇಕೆಂಬ ನಿಯಮ ಸರ್ಕಾರದ್ದು. ಇದರಿಂದ ಕೂಲಿಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ಗ್ರಾಮದಿಂದ 2 ಕಿ.ಮೀ ದೂರದ ಕೆರೆಯಲ್ಲಿ ಕೆಲಸ ಮಾಡಿ ಪುನಃ ಮಧ್ಯಾಹ್ನದ ಉರಿ ಬಿಸಿಲಲ್ಲಿ ಕೆಲಸಕ್ಕೆ ಬರುತ್ತಿರುವುದರಿಂದ ಬಿಸಿಲಲ್ಲಿ ಬಸವಳಿಯುತ್ತಿದ್ದಾರೆ. ಕೆಳಗೆ ಸುಡುವ ನೆಲವಾದರೆ ಮೇಲೆ ನೆತ್ತಿ ಸುಡುವ ಸೂರ್ಯ, ನಡುವೆ ಬಿಸಿಲಿನ ಜಳಕ್ಕೆ ಜನ ತತ್ತರಿಸುತ್ತಿದ್ದಾರೆ.
ಒಂದು ಸಾವಿರ ಕೂಲಿ ಕಾರ್ಮಿಕರು ಇದ್ದು, ಪ್ರತಿ 20 ಜನರಿಗೆ ಒಬ್ಬ ಕಾಯಕ ಬಂಧು ಇದ್ದಾರೆ. ಕೆರೆಯ ಮಣ್ಣನ್ನು ಹೊರಗೆ ಚೆಲ್ಲಲು ಟ್ರ್ಯಾಕ್ಟರ್‌ಗಳು ಸಾಕಾಗುತ್ತಿಲ್ಲ. ಈ ಕಾಮಗಾರಿಯಲ್ಲಿ ಬಹಳಷ್ಟು ವಯೋವೃದ್ಧರು, ಅಂಗವಿಕಲರು ಕಾರ್ಯನಿರ್ವಹಿಸುತ್ತಿದ್ದರು. ಸರ್ಕಾರ ನಿಯಮ ಬದಲಾಯಿಸಿದರೆ ಮುಂಜಾನೆ ಬೇಗ ಕೆಲಸ ಆರಂಭಿಸಿ 12 ಗಂಟೆಯೊಳಗೆ ಮನೆ ಸೇರಬಹುದು. ಬಿಸಿಲಿನ ತಾಪದಿಂದ ಎಲ್ಲರೂ ಪಾರಾಗಬಹುದು ಎಂದು ಗ್ರಾಮ ಪಂಚಾಯಿತಿ ಸದಸ್ಯ ಲಕ್ಷ್ಮಣ ತಳಕೇರಿ ಹೇಳುತ್ತಾರೆ.
“ನನಗೆ 75 ವಯಸ್ಸು, ಈಗ ಯಾರ್ ಕೆಲಸ ಕೊಡಲ್ಲಾರಿ, ವಯಸ್ಸಾಗ್ಯಾದ. ಯಾರೂ ಆಸರೆ ಇಲ್ಲದ್ದಕ್ಕ ಕೆಲಸಕ್ಕೆ ಬಂದಿನ್ರೀ. ಸರ್ಕಾರದ ಕೆಲಸ ಸ್ವಲ್ಪ ಕಡಿಮಿ ಹಚ್ಚತಾರ’. -ಈರಮ್ಮ ಮಲ್ಲಪ್ಪ ಕಟ್ಟಮನಿ, ಕಾರ್ಮಿಕಳು
ಸರ್ಕಾರದ ನಿಯಮಗಳಂತೆ ಕಾಮಗಾರಿಗಳನ್ನು ಆರಂಭಿಸಲಾಗಿದೆ. ಒಬ್ಬರಿಗೆ 309ರೂ. ಕೂಲಿ ನೀಡಲಾಗುತ್ತಿದೆ. ಇಬ್ಬರು ಕಾರ್ಮಿಕರು ಸೇರಿ ಎಂಟು ಅಡಿ ಉದ್ದದ ಎರಡು ಅಡಿ ಆಳದಷ್ಟು ಮಣ್ಣು ಅಗೆಯಲು ತಿಳಿಸಲಾಗಿದೆ. ಕಾಯಕ ಬಂಧುಗಳು ಬೆಳಗ್ಗೆ ಮತ್ತು ಸಂಜೆ ಹಾಜರಾತಿ ಪಡೆಯುತ್ತಾರೆ. ಅಂಗವಿಕರಿಗೆ, ವಯಸ್ಸಾದವರಿಗೆ ಕೆಲಸದಲ್ಲಿ ಶೇ.30 ರಿಯಾಯ್ತಿ ಇದೆ.
-ಓದಲಿಂಗ ಸಿ.ಕೆ, ಪಿಡಿಒ, ನಿಂಬಾಳ
ಕಾರ್ಮಿಕರಿಗಾಗಿ ಕುಡಿಯುವ ನೀರು ಮತ್ತು ನೆರಳಿನ ವ್ಯವಸ್ಥೆ ಮಾಡಲಾಗುವುದು. ಕಾಯಕ ಬಂಧುಗಳು ಕಟ್ಟುನಿಟ್ಟಾಗಿ ಕಾರ್ಮಿಕರಿಗೆ ಮೂಲ ಸೌಲಭ್ಯ ಒದಗಿಸಲು ತಿಳಿಸಲಾಗಿದೆ. ಕೆಲಸದ ಸ್ಥಳದಲ್ಲಿ ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇಡಲಾಗಿದೆ. ಕೆರೆ ಹೂಳೆತ್ತುಲು ಸಾವಿರ ಜನ ಬಂದಿರುವುದರಿಂದ ಮಣ್ಣನ್ನು ಮೇಲೆತ್ತುವ ಕೆಲಸ ಭರದಿಂದ ಸಾಗುತ್ತಿದೆ.
-ಯಲ್ಲಾಬಾಯಿ ಮಲಕಣ್ಣ ಹಾವಳಕರ್, ಗ್ರಾಪಂ ಅಧ್ಯಕ್ಷೆ, ನಿಂಬಾಳ
-ಪರಮೇಶ್ವರ ಭೂಸನೂರ