ನವದೆಹಲಿ: ಈ ಬಾರಿಯ ದಸರಾ ಮತ್ತು ನವರಾತ್ರಿ ಹಬ್ಬದ ಸೀಸನ್ ನಲ್ಲಿ ವಿಶ್ವದ ನಂಬರ್ ವನ್ ಐಶಾರಾಮಿ ಕಾರು ತಯಾರಿಕಾ ಕಂಪನಿಯಾದ ಮರ್ಸಿಡಿಸ್ ಬೆಂಜ್ ಭಾರತದಲ್ಲಿ ಬರೋಬ್ಬರಿ 200ಕ್ಕೂ ಅಧಿಕ ಕಾರುಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದೆ.
ಪ್ರಸಕ್ತ ಸಾಲಿನ ದಸರಾ ಮತ್ತು ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮುಂಬೈ ಮತ್ತು ಗುಜರಾತ್ ನ ಗ್ರಾಹಕರು ಮರ್ಸಿಡಿಸ್ ಬೆಂಜ್ ಕಾರುಗಳನ್ನು ಖರೀದಿಸುವ ಮೂಲಕ ಕಳೆದ ವರ್ಷದ ಮಾರಾಟವನ್ನು ಮೀರಿಸಿದೆ ಎಂದು ಜರ್ಮನ್ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್ ಬೆಂಜ್ ಮಾಹಿತಿ ನೀಡಿದೆ.
ವಾಣಿಜ್ಯ ನಗರಿ ಮುಂಬೈಯಲ್ಲಿಯೇ 125 ಮರ್ಸಿಡಿಸ್ ಬೆಂಜ್ ಕಾರುಗಳನ್ನು ಖರೀದಿಸಿದ್ದು, ಗುಜರಾತ್ 74 ಕಾರುಗಳನ್ನು ರಿಜಿಸ್ಟರ್ಡ್ ಮಾಡಿಕೊಂಡಿರುವುದಾಗಿ ತಿಳಿಸಿದೆ. ವೈದ್ಯರು, ಸಿಎ(ಚಾರ್ಟರ್ಡ್ ಅಕೌಂಟೆಂಟ್ಸ್), ವಕೀಲರು ಹಾಗೂ ಉದ್ಯಮಿಗಳು ಐಶಾರಾಮಿ ಮರ್ಸಿಡಿಸ್ ಬೆಂಜ್ ಕಾರುಗಳನ್ನು ಖರೀದಿಸಿದ ಗ್ರಾಹಕರ ಪಟ್ಟಿಯಲ್ಲಿದ್ದಾರೆ ಎಂದು ವಿವರಿಸಿದೆ.
ಮರ್ಸಿಡಿಸ್ ಬೆಂಜ್ ಇಂಡಿಯಾ ಘಟಕದ ಸಿಇಒ, ಆಡಳಿತ ನಿರ್ದೇಶಕ ಮಾರ್ಟಿನ್ ಶ್ಶೆವೆಂಕ್ ಈ ಬಗ್ಗೆ ಮಾತನಾಡಿ, ಗ್ರಾಹಕರ ಪ್ರೀತಿ, ವಿಶ್ವಾಸದಿಂದ ಈ ಬಾರಿ ಮುಂಬೈ ಮತ್ತು ಗುಜರಾತ್ ನ ಗ್ರಾಹಕರು 200ಕ್ಕೂ ಅಧಿಕ ಮರ್ಸಿಡಿಸ್ ಬೆಂಜ್ ಕಾರುಗಳನ್ನು ಖರೀದಿಸಿದ್ದಾರೆ. 2018ಕ್ಕೆ ಹೋಲಿಸಿದರೆ ಈ ವರ್ಷದ ಮಾರಾಟದಲ್ಲಿ ಹೆಚ್ಚಳ ಕಂಡಿದೆ ಎಂದು ಹೇಳಿದರು.
ಭಾರತದಲ್ಲಿ ವಿವಿಧ ಶ್ರೇಣಿಯ ಮರ್ಸಿಡಿಸ್ ಬೆಂಜ್ ಕಾರುಗಳು ಮಾರಾಟವಾಗುತ್ತಿದ್ದು, ಆರಂಭಿಕ ಬೆಲೆ 29.90 ಲಕ್ಷ ರೂಪಾಯಿ. ಮರ್ಸಿಡಿಸ್ ಬೆಂಜ್ ಎ ಕ್ಲಾಸ್ ಕಾರಿನ ಬೆಲೆ 2 ಕೋಟಿ 73 ಲಕ್ಷ ರೂಪಾಯಿ. ಹೀಗೆ 31.72 ಲಕ್ಷ, 2.55 ಕೋಟಿ ಸೇರಿದಂತೆ ಲಕ್ಷಾಂತರ ರೂ,ನಿಂದ ಕೋಟ್ಯಂತರ ರೂಪಾಯಿ ಬೆಲೆ ಮರ್ಸಿಡಿಸ್ ಬೆಂಜ್ ಕಾರುಗಳದ್ದಾಗಿದೆ.