ಖಾರ್ಗೋನ್ : ಮಾನಸಿಕ ಅಸ್ವಸ್ಥೆಯೋರ್ವಳನ್ನು ದರದರನೇ ಎಳೆದು ಆಸ್ಪತ್ರೆಯಿಂದ ಹೊರಗೆ ಹಾಕಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಫೆ.18 ರಂದು ಈ ಘಟನೆ ನಡೆದಿದ್ದು, ಅಮಾನವೀಯತೆಯಿಂದ ವರ್ತಿಸಿರುವ ಸೆಕ್ಯೂರಿಟಿ ಗಾರ್ಡ್ ಹಾಗೂ ಸರ್ಕಾರಿ ಜಿಲ್ಲಾಸ್ಪತ್ರೆಯ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಘಟನೆ ಕುರಿತು ವೈರಲ್ ಆಗಿರುವ ಫೋಟೊದಲ್ಲಿ ಸೆಕ್ಯೂರಿಟಿ ಗಾರ್ಡ್, ಮಾನಸಿಕ ಅಸ್ವಸ್ಥೆಯ ಕೈ ಹಿಡಿದು ಎಳೆದು ಗೇಟ್ ಹೊರಗೆ ಹಾಕಿದ್ದಾನೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಅನುರಾಗ್ ಪಿ. ಆಕೆಯನ್ನು ಹುಡುಕಿ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ವೈದ್ಯರು ಹೇಳುವುದೇನು ?
ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಡಾಕ್ಟರ್ ವರ್ಮಾ, ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಆ ಮಹಿಳೆ ನಮ್ಮ ಆಸ್ಪತ್ರೆಗೆ ಬಂದು ಸಿಬ್ಬಂದಿ ಹಾಗೂ ಆಸ್ಪತ್ರೆಯಲ್ಲಿದ್ದವರತ್ತ ಕಲ್ಲು ತೂರಿದಳು. ಸೆಕ್ಯೂರಿಟಿ ಗಾರ್ಡ್ ಅವಳನ್ನು ಹೊರಹಾಕಲು ಪ್ರಯತ್ನಿಸಿದ. ಆದರೆ, ಗೇಟ್ ಬಳಿಯೇ ಕುಳಿತ ಅವಳು, ಆಸ್ಪತ್ರೆಗೆ ಬರುವ-ಹೋಗುವ ಜನರಿಗೆ ಕೆಟ್ಟದಾಗಿ ನಿಂದಿಸಲು ಶುರು ಮಾಡಿದಳು. ಇದೇ ವೇಳೆ ಆ್ಯಂಬುಲೆನ್ಸ್ ಆಸ್ಪತ್ರೆ ಒಳಗೆ ಬರುತ್ತಿದ್ದರಿಂದ ಆಕೆಯನ್ನು ಸೆಕ್ಯೂರಿಟಿ ಅಲ್ಲಿಂದ ಹೊರಹಾಕಿದ್ದಾನೆ ಎಂದಿದ್ದಾರೆ.
ಇನ್ನು ರೋಗಿಯ ಜತೆ ಸೆಕ್ಯೂರಿಟಿ ಗಾರ್ಡ್ ಅಮಾನವೀಯ ವರ್ತನೆ ಖಂಡಿಸಿರುವ ವರ್ಮಾ, ಆತನನ್ನು ಕೆಲಸದಿಂದ ತೆಗೆದು ಹಾಕಿದ್ದೇವೆ. ಜತೆಗೆ ಆ ಮಹಿಳೆಯನ್ನು ಹುಡುಕುವ ಕಾರ್ಯ ಮಾಡುತ್ತಿದ್ದೇವೆ. ಒಂದು ವೇಳೆ ಅವಳು ಸಿಕ್ಕರೆ ನಮ್ಮ ಆಸ್ಪತ್ರೆಯಲ್ಲಿ ಮನೋವೈದ್ಯರಿಲ್ಲದ ಕಾರಣ ಇಂದೋರ್ ಗೆ ಕಳುಹಿಸುವುದಾಗಿ ಹೇಳಿದ್ದಾರೆ.