ಬೆಳಗಾವಿ: ಆಂತರಿಕವಾಗಿ ಶೇಖರಣೆಯಾಗಿರುವ ಪಂಚವಿಕಾರಗಳಿಂದ ಮಾನಸಿಕ ಸ್ಥಿರತೆ ಕಡಿಮೆಯಾಗಿದೆ. ಪ್ರತಿ ಸಿಗ್ನಲ್ ದೀಪದ ಕೆಳಗೆ ಒಂದೆರಡು ನಿಮಿಷ ಪರಮಾತ್ಮನ ನೆನಪು ಮಾಡಿದಾಗ ಮಾನಸಿಕ ಸ್ಥಿರತೆಗೆ ಅನುಕೂಲವಾಗುತ್ತದೆ. ಮಾನಸಿಕ ಸ್ಥಿರತೆ ರಸ್ತೆ ಸುರಕ್ಷತೆಗೆ ಆಧಾರ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಬೆಳಗಾವಿ ಉಪವಲಯ ಸಂಚಾಲಕಿ ರಾಜಯೋಗಿನಿ ಬಿ.ಕೆ. ಅಂಬಿಕಾ ಹೇಳಿದರು.
ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಬುಧವಾರ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ 75 ಬೈಕ್‌ಗಳ ರ್ಯಾಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಡಿಸಿಪಿ ಪಿ.ವಿ. ಸ್ನೇಹಾ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ನಾಗರಿಕ ನಿಯಮಗಳು ಪಾಲನೆಯಾಗಬೇಕು. ಪಠ್ಯಪುಸ್ತಕಗಳಲ್ಲಿಯೂ ಸಂಚಾರ ನಿಯಮ ಪಾಲನೆ ವಿಷಯ ಸೇರಿಸಬೇಕು. ಅಂತಃಕರಣ ಶುದ್ಧಿಯಿಂದ ಅಪಘಾತಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯ. ರಸ್ತೆ ನಿಯಮ ಇರುವುದು ನಾಗರಿಕ ಸುರಕ್ಷತೆಗಾಗಿ. ಪೊಲೀಸರಿಗೆ ನೀಡುವ ಸಹಕಾರ ಉತ್ತಮ ನಗರ ನಿರ್ಮಾಣಕ್ಕೆ ಆಧಾರ ಎಂದರು.
ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಕ ಪಿ.ವೈ. ನಾಯಕ್ ಮಾತನಾಡಿ, ನಾಗರಿಕ ಸಂಸ್ಕೃತಿ, ಸದ್ಭಾವನೆಗಳು ಸುಗಮ ಜೀವನಕ್ಕೆ ಆಧಾರ. ಮನಸ್ಸಿನ ಏಕಾಗ್ರತೆಯಿಂದ ಗಡಿಬಿಡಿ ಜೀವನಕ್ಕೆ ತಡೆ ನೀಡುತ್ತದೆ. ರಸ್ತೆ ಸುರಕ್ಷತೆಯಿಂದ ಅಪಘಾತ ನಿಯಂತ್ರಣಕ್ಕೆ ಬ್ರಹ್ಮಕುಮಾರಿಯರ ಕೊಡುಗೆ ದೊಡ್ಡದು ಎಂದರು.
ಭಾರತೀಯ ಜೀವ ವಿಮಾ ನಿಗಮದ ಹಿರಿಯ ವಿಭಾಗಾಧಿಕಾರಿ ಅಜಿತ್ ವಾರಕೇರಿ ಮಾತನಾಡಿ, ಬೇರೆಯವರಿಗೆ ಹೇಳುವ ಬದಲು ಪ್ರತಿ ಕುಟುಂಬದಲ್ಲಿ ಬದಲಾವಣೆಯಾದರೆ ಜಗತ್ತು ಬದಲಾಗಲು ಸಾಧ್ಯ. ಭವಿಷ್ಯಕ್ಕಾಗಿ ವಿಮೆ ಪಾಲಿಸಿ ಹೊಂದುವುದರಿಂದ ಅನೇಕ ಸಮಸ್ಯೆ ನಿವಾರಣೆಯಾಗುತ್ತವೆ ಎಂದರು.
ರಾಜಯೋಗಿನಿ ಬಿ.ಕೆ. ಮೀರಾಜಿ ಹಾಗೂ ಬಿ.ಕೆ. ಸುಲೋಚನಾ ಮಾತನಾಡಿ, ರಾಜಯೋಗ ಅಭ್ಯಾಸ ಶ್ರೇಷ್ಠ ಹಾಗೂ ಸುರಕ್ಷತಾ ಜೀವನಕ್ಕೆ ಆಧಾರ. ಮುಂದೆ ಬರಲಿರುವ ಸುವರ್ಣ ಯುಗದಲ್ಲಿ ಅಪಘಾತ ಮುಕ್ತ ಪ್ರಪಂಚವಾಗಲಿದೆ ಎಂದರು.
ಬಿ.ಕೆ. ಪ್ರತಿಭಾ ಪ್ರಾಸ್ತಾವಿಕ ಭಾಷಣ ಮಾಡಿದರು. ರ್ಯಾಲಿಯು ಮಹಾಂತೇಶ ನಗರ, ಚನ್ನಮ್ಮ ವೃತ್ತ, ಶಾಸ್ತ್ರಿ ನಗರ, ಶಹಾಪುರ, ಭಾಗ್ಯನಗರ, ಅನಗೋಳ, ಚನ್ನಮ್ಮನಗರ, ಟಿಳಕವಾಡಿ, ವಿಜಯನಗರ, ಹನುಮಾನನಗರ, ಶಾಹೂನಗರ, ರಾಮತೀರ್ಥನಗರ ಭಾಗಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿತು. ಕಾರ್ಯಕ್ರಮದಲ್ಲಿ ಬಿಕೆ ವಿದ್ಯಾ, ಬಿಕೆ ಮಹಾದೇವಿ, ಬಿಕೆ ರೂಪ, ಬಿಕೆ ಮೀನಾಕ್ಷಿ, ಬಿಕೆ ದತ್ತಾತ್ರೇಯ, ಬಿಕೆ ಮನೋಹರ, ಬಿಕೆ ರಾಜೇಂದ್ರ ಗೋಟಡಕಿ ಇತರರಿದ್ದರು.