Advertisement

ಮಾನಸಿಕ ಅನಾರೋಗ್ಯ: ಆರೈಕೆದಾರರ ಹೊರೆ ಮತ್ತು ಅದರ ನಿರ್ವಹಣೆ

12:30 AM Mar 03, 2019 | |

ಮುಂದುವರಿದುದು- ಆರೈಕೆದಾರರ ಹೊರೆಗೆ ಯಾವುದು ಕಾರಣವಾಗುತ್ತದೆ?
ಆರೈಕೆ ಒದಗಿಸುವವರು ರೋಗಿಯ ಆರೈಕೆಯಲ್ಲಿ ಎಷ್ಟು ವ್ಯಸ್ತರಾಗಿರುತ್ತಾರೆ ಎಂದರೆ, ಅದರ ನಡುವೆ ಅವರು ತಮ್ಮ ಭಾವನಾತ್ಮಕ, ದೈಹಿಕ ಮತ್ತು ಆಧ್ಯಾತ್ಮಿಕ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿಬಿಡುತ್ತಾರೆ. ಆರೈಕೆದಾರರ ಮೇಲೆ ಹೊರೆ ವೃದ್ಧಿಯಾಗುವುದಕ್ಕೆ ಕಾರಣವಾಗುವ ಅಂಶಗಳೆಂದರೆ;
– ಅವಾಸ್ತವಿಕ ನಿರೀಕ್ಷೆಗಳು: ಅನೇಕ ಆರೈಕೆದಾರರು ತಮ್ಮ ಪಾಲ್ಗೊಳ್ಳುವಿಕೆಯಿಂದ ರೋಗಿಯ ಆರೋಗ್ಯ ಮತ್ತು ಸಂತೋಷದಲ್ಲಿ ಧನಾತ್ಮಕ ಬದಲಾವಣೆ ಉಂಟಾಗಬೇಕು ಎಂದು ನಿರೀಕ್ಷಿಸುತ್ತಾರೆ. ಆದರೆ ತೀವ್ರ ಮಾನಸಿಕ ಅಸ್ವಾಸ್ಥ್ಯದಿಂದ ಬಳಲುತ್ತಿರುವ ರೋಗಿಯಲ್ಲಿ ಇದು ಅವಾಸ್ತವಿಕ ನಿರೀಕ್ಷೆಯಾಗಿರಬಹುದು. ತೀವ್ರತರಹದ ಅನಾರೋಗ್ಯದಿಂದಾಗಿ ರೋಗಿಯು ಆರೈಕೆದಾರ ನಿರೀಕ್ಷಿಸಿದ ಮಟ್ಟವನ್ನು ತಲುಪದೆ ಇರಬಹುದು.
– ಗುರಿ ಮೀರಿದ ಬೇಡಿಕೆಗಳು: ಆರೈಕೆ ಒದಗಿಸುವುದು ತಮ್ಮ ಸಂಪೂರ್ಣ ಜವಾಬ್ದಾರಿ ಎಂಬುದಾಗಿ ಭಾವಿಸುತ್ತ ಕೆಲವು ಆರೈಕೆದಾರರು ತಮ್ಮ ಮೇಲೆಯೇ ಗುರಿ ಮೀರಿದ ಬೇಡಿಕೆಗಳನ್ನು ಹೇರಿಕೊಳ್ಳುತ್ತಾರೆ. ಬಹುತೇಕ ಬಾರಿ ಕುಟುಂಬದ ಇತರ ಸದಸ್ಯರ ಸಹಾಯ ಪಡೆಯದೆ ಆರೈಕೆದಾರರು ರೋಗಿಯ ಸಂಪೂರ್ಣ ಆರೈಕೆಯನ್ನು ತಾವೊಬ್ಬರೇ ನಿಭಾಯಿಸುತ್ತಾರೆ.
– ಸಂಪನ್ಮೂಲಗಳ ಕೊರತೆ: ಆರೈಕೆದಾರರ ಮೇಲೆ ಹೊರೆ ಹೆಚ್ಚುವುದಕ್ಕೆ ಇನ್ನೊಂದು ಕಾರಣ ಆರ್ಥಿಕ ಸಂಪನ್ಮೂಲದ ಕೊರತೆ. ಆರ್ಥಿಕ ಸಂಪನ್ಮೂಲದ ಕೊರತೆ ಇದ್ದಾಗ ಔಷಧ ಮತ್ತು ಚಿಕಿತ್ಸೆಗಳ ಲಭ್ಯತೆ ಕಡಿಮೆಯಾಗುವುದರಿಂದ ರೋಗಿಯ ಸ್ಥಿತಿ ಉಲ್ಬಣಿಸಬಹುದು.
– ಆರೈಕೆಯ ಕೌಶಲಗಳ ಕೊರತೆ: ರೋಗಿಯ ಅನಾರೋಗ್ಯ ಸ್ಥಿತಿಯನ್ನು ನಿಭಾಯಿಸುವುದಕ್ಕೆ ಅಗತ್ಯವಾದ ಆರೈಕೆ ಕೌಶಲಗಳ ಕೊರತೆಯಿಂದಲೂ ಆರೈಕೆದಾರರ ಮೇಲಿನ ಹೊರೆ ಹೆಚ್ಚಬಹುದು. ಪ್ರತೀ ಅನಾರೋಗ್ಯವನ್ನೂ ಆರೈಕೆ ಮಾಡುವುದಕ್ಕೆ ಅದಕ್ಕೇ ಮೀಸಲಾದ ಕೌಶಲಗಳು ಅಗತ್ಯವಾಗಿರುತ್ತವೆ. ಉದಾಹರಣೆಗೆ, ಡಿಮೆನ್ಶಿಯಾದಿಂದ ಬಳಲುತ್ತಿರುವ ರೋಗಿಯನ್ನು ಆರೈಕೆ ಮಾಡುವುದಕ್ಕೆ ಬೇಕಾಗಿರುವ ಕೌಶಲವು ಸ್ಕಿಝೊಫ್ರೀನಿಯಾಕ್ಕೆ ಒಳಗಾಗಿರುವ ರೋಗಿಯನ್ನು ನೋಡಿಕೊಳ್ಳುವ ಕೌಶಲದಿಂದ ಭಿನ್ನವಾಗಿರುತ್ತದೆ. 
– ಇತರ ಅಂಶಗಳು: ಅನೇಕ ಆರೈಕೆದಾರರು ತಮ್ಮ ಶಕ್ತಿಸಾಮರ್ಥ್ಯ ಕುಂದಿರುವುದನ್ನು ಅಥವಾ ರೋಗಿಯ ಆರೈಕೆ ಮಾಡಲಾಗದ ಸ್ಥಿತಿ ಮುಟ್ಟಿರುವುದನ್ನು ಅರಿತುಕೊಳ್ಳುವುದಿಲ್ಲ. ಇದರಿಂದ ರೋಗಿಯನ್ನು ಪರಿಣಾಮಕಾರಿಯಾಗಿ ನೋಡಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಆರೈಕೆದಾರರೇ ಅನಾರೋಗ್ಯಕ್ಕೆ ತುತ್ತಾಗಬಹುದು.
– ಸ್ವಯಂ ಆರೋಗ್ಯವನ್ನು ನಿರ್ಲಕ್ಷಿಸುವುದು: ರೋಗಿಯ ಆರೈಕೆ ನಡೆಸುವ ಪ್ರಕ್ರಿಯೆಯಲ್ಲಿ ಆರೈಕೆದಾರರು ತಮ್ಮ ಆರೋಗ್ಯವನ್ನು ಮರೆತುಬಿಡುವ ಸಾಧ್ಯತೆ ಇರುತ್ತದೆ. ರೋಗಿಯ ಆರೈಕೆಯಿಂದ ಆರೈಕೆದಾರರ ನಿದ್ದೆ ಮತ್ತು ಆಹಾರ ಸೇವಿಸುವ ಸಮಯದ ಮೇಲೆ ಪರಿಣಾಮ ಉಂಟಾಗುತ್ತದೆ. ಇದರಿಂದ ಅವರ ರೋಗ ನಿರೋಧಕ ಶಕ್ತಿಯ ಮೇಲೆ ದುಷ್ಪರಿಣಾಮ ಉಂಟಾಗಿ ಅವರು ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. 

Advertisement

ಆರೈಕೆದಾರರ ಹೊರೆಯ ನಿರ್ವಹಣೆ
1. ನಿಮ್ಮ ಪ್ರೀತಿಪಾತ್ರರ ಕಾಯಿಲೆಯ ಬಗ್ಗೆ ವಾಸ್ತವ ದೃಷ್ಟಿ ಹೊಂದಿರಿ: ನಿಮ್ಮ ಅರಿವನ್ನು ವಿಸ್ತರಿಸಿಕೊಳ್ಳಿ. ನೀವು ಆ ಕಾಯಿಲೆಯ ಬಗ್ಗೆ ಹೆಚ್ಚು ತಿಳಿದುಕೊಂಡಷ್ಟು ನಿಮಗೆ ನಿಮ್ಮ ಪ್ರೀತಿಪಾತ್ರರನ್ನು ಚೆನ್ನಾಗಿ ನೋಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ರೋಗಿಯನ್ನು ಕಾಡುತ್ತಿರುವ ಕಾಯಿಲೆಯ ಬಗ್ಗೆ ಹೆಚ್ಚು ತಿಳಿದುಕೊಂಡಷ್ಟು ವಾಸ್ತವಿಕ ನಿರೀಕ್ಷೆಗಳನ್ನು ಹೊಂದಿರುವುದಕ್ಕೆ ನಿಮಗೆ ಸಾಧ್ಯವಾಗುತ್ತದೆ. 
2. ಇತರರನ್ನೂ ಸೇರಿಸಿಕೊಳ್ಳಿ: ತೀವ್ರ ಮಾನಸಿಕ ಅಸ್ವಾಸ್ಥ್ಯ ಹೊಂದಿರುವ ರೋಗಿಗಳ ಆರೈಕೆಗೆ ದಿನಪೂರ್ತಿ ನಿಗಾ ಬೇಕಾಗುತ್ತದೆ. ಹೀಗಾಗಿ ಕುಟುಂಬದ ಇತರರನ್ನೂ ಆರೈಕೆಯಲ್ಲಿ ಭಾಗಿಗಳನ್ನಾಗಿಸುವ ಕೌಶಲವನ್ನು ಆರೈಕೆದಾರರು ಬೆಳೆಸಿಕೊಳ್ಳಬೇಕು. ರೋಗಿಯನ್ನು ವಾಕಿಂಗ್‌ಗೆ ಕರೆದೊಯ್ಯುವುದು ಸಣ್ಣಪುಟ್ಟ ಮನೆಗೆಲಸಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಜವಾಬ್ದಾರಿಗಳನ್ನು ಕುಟುಂಬದ ಇತರ ಸದಸ್ಯರಿಗೆ ವಹಿಸಬಹುದು. ಇದಲ್ಲದೆ, ಯಾವುದೇ ತುರ್ತು ಸಂದರ್ಭಗಳಲ್ಲಿ ಕುಟುಂಬದ ಇತರ ಸದಸ್ಯರು ಮತ್ತು ಸ್ನೇಹಿತರ ನೆರವನ್ನು ಪಡೆಯಬಹುದು.
3. ವೃತ್ತಿಪರರ ಜತೆಗೆ ಸಮಾಲೋಚಿಸಿ: ಆರೈಕೆದಾರರು ತಮ್ಮ ಪ್ರೀತಿಪಾತ್ರರ ಅನಾರೋಗ್ಯದ ಬಗ್ಗೆ ಮಾತನಾಡುತ್ತಾರೆ. ಮನಶಾÏಸ್ತ್ರಜ್ಞರು, ಮನಶಾÏಸ್ತ್ರಜ್ಞ ಸಾಮಾಜಿಕ ಕಾರ್ಯಕರ್ತರು ಅಥವಾ ಮನೋವೈದ್ಯರಂತಹ ಮಾನಸಿಕ ಆರೋಗ್ಯ ವೃತ್ತಿಪರರು ಅನೇಕ ವಿಧದ ದೈಹಿಕ ಮತ್ತು ಭಾವನಾತ್ಮಕ ವಿಚಾರಗಳ ಕಾರ್ಯನಿರ್ವಹಿಸುವವರ ಜತೆಗೆ ಆಪ್ತ ಸಮಾಲೋಚನೆ ನಡೆಸಲು ತರಬೇತಿ ಹೊಂದಿರುತ್ತಾರೆ. ಆರೈಕೆದಾರರು ತಮ್ಮ ಹೊರೆಯನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಇಂತಹ ಪರಿಣತರ ಸಹಾಯವನ್ನು ಪಡೆಯಬೇಕು. 
4. ಡೇಕೇರ್‌ ಅಥವಾ ಪುನರ್ವಸತಿ ಕೇಂದ್ರಗಳ ಉಪಯೋಗ ಪಡೆಯಿರಿ: ಹೊರೆಯನ್ನು ನಿಭಾಯಿಸುವ ಇನ್ನೊಂದು ಪರಿಣಾಮಕಾರಿ ಮಾರ್ಗವೆಂದರೆ, ರೋಗಿಯನ್ನು ಡೇಕೇರ್‌ ಕೇಂದ್ರಕ್ಕೆ ಕಳುಹಿಸುವುದು ಅಥವಾ ನಿಗದಿತ ಅವಧಿಗೆ ಮನೋವೈದ್ಯಕೀಯ ಪುನರ್ವಸತಿ ಕೇಂದ್ರಕ್ಕೆ ದಾಖಲಿಸುವುದು. ತೀವ್ರ ತರಹದ ಮಾನಸಿಕ ಅನಾರೋಗ್ಯವುಳ್ಳ ರೋಗಿಗಳನ್ನು ಕಿರು ಅವಧಿಗೆ ದಾಖಲಿಸಿ ಆರೈಕೆ ಮಾಡುವ ಸೇವೆಯನ್ನು ಬಹುತೇಕ ಪುನರ್ವಸತಿ ಕೇಂದ್ರಗಳು ಒದಗಿಸುತ್ತವೆ. 
5. ಸರಕಾರಿ ಕಲ್ಯಾಣ ಕಾರ್ಯಕ್ರಮಗಳ ಉಪಯೋಗ ಪಡೆಯಿರಿ: ಮಾನಸಿಕ ಅನಾರೋಗ್ಯವುಳ್ಳ ರೋಗಿಗಳು ಮತ್ತು ಅವರನ್ನು ನೋಡಿಕೊಳ್ಳುವವರಿಗಾಗಿ ಅನೇಕ ಸರಕಾರಿ ಕಲ್ಯಾಣ ಕಾರ್ಯಕ್ರಮಗಳು ಲಭ್ಯವಿವೆ. ಕಲ್ಯಾಣ ಕಾರ್ಯಕ್ರಮಗಳ ಮಾಸಿಕ ಆರ್ಥಿಕ ಸಹಾಯದಂತಹ ಯೋಜನೆಗಳು ಆರೈಕೆದಾರರ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬಲ್ಲವು.

– ಮುಂದುವರಿಯುವುದು

Advertisement

Udayavani is now on Telegram. Click here to join our channel and stay updated with the latest news.

Next