Advertisement

ಮಾನಸಿಕ ಆರೋಗ್ಯಕ್ಕೆ ಹಾನಿ ನಿರಾಶಾವಾದ ಬೇಡ

03:50 AM Jul 24, 2020 | Hari Prasad |

ಕಳೆದ ಡಿಸೆಂಬರ್‌ನಲ್ಲಿ ಚೀನದ ವುಹಾನ್‌ನಲ್ಲಿ ಆರಂಭವಾಗಿ ಜಗತ್ತಿನಾದ್ಯಂತ ವ್ಯಾಪಿಸಿದ ಕೋವಿಡ್‌-19ನ ಹಾವಳಿಯು ಈಗಲೂ ನಿಲ್ಲುವ ಸೂಚನೆ ತೋರಿಸುತ್ತಲೇ ಇಲ್ಲ.

Advertisement

ಜಗತ್ತಿನ ಜನರ ದೈಹಿಕ ಆರೋಗ್ಯಕ್ಕೆ, ಆರ್ಥಿಕತೆಗೆ, ಸಾಮಾಜಿಕ ಸಮತೋಲನಕ್ಕೆ ಪೆಟ್ಟು ನೀಡಿರುವ ಈ ವೈರಸ್‌ ಈಗ ಮಾನಸಿಕ ಆರೋಗ್ಯದ ಮೇಲೂ ಅಪಾರ ಒತ್ತಡ ಸೃಷ್ಟಿಸಲಾರಂಭಿಸಿದೆ.

ಆದಾಗ್ಯೂ ರೋಗದ ಬಗ್ಗೆ ಆರಂಭಿಕ ಸಮಯದಲ್ಲಿ ಇದ್ದಂಥ ತಪ್ಪು ಕಲ್ಪನೆಗಳು ಈಗ ಇಲ್ಲ. ಈಗ ಜನರಿಗೆ ರೋಗ ಮಾರಣಾಂತಿಕವಲ್ಲ ಎನ್ನುವುದು ಅರಿವಾಗಿರುವುದರಿಂದ ರೋಗದ ಬಗ್ಗೆ ಇದ್ದ ಅನಗತ್ಯ ಭಯ, ಊಹಾಪೋಹಗಳು ಕಡಿಮೆಯಾಗಿದೆ. ಆದರೆ, ಕೋವಿಡ್‌- 19 ಬೇರೆಯದ್ದೇ ರೀತಿಯಲ್ಲಿ ಮಾನಸಿಕ ಆರೋಗ್ಯಕ್ಕೆ ತೊಂದರೆಯುಂಟುಮಾಡುತ್ತಿದೆ.

ದೇಶಗಳ ಆರ್ಥಿಕ ಚಕ್ರದ ವೇಗ ಬಹುಪಾಲು ತಗ್ಗಿಬಿಟ್ಟಿದೆ. ತತ್ಪರಿಣಾಮವಾಗಿ ಭವಿಷ್ಯದ ಬಗ್ಗೆ ಬಹುದೊಡ್ಡ ಪ್ರಶ್ನಾರ್ಥಕ ಚಿಹ್ನೆ ಜನರೆದುರು ಕಾಣಿಸಿಕೊಂಡಿದೆ. ಹಾಗೆಂದು ಆರ್ಥಿಕತೆ ಸಂಪೂರ್ಣ ನೆಲ ಕಚ್ಚಿದೆ ಎಂದೇನೂ ಅರ್ಥವಲ್ಲ.

ಆದಕ್ಕೆ ಮರುವೇಗ ಕೊಡುವ ಪ್ರಯತ್ನಗಳೂ ಭರದಿಂದ ಸಾಗಿವೆ. ಈ ನಿಟ್ಟಿನಲ್ಲಿ ಭಾರತದಲ್ಲೂ ಪ್ರಯತ್ನ ವೇಗಪಡೆದಿದೆ. ಆದರೆ ಕೋವಿಡ್ 19 ಒಟ್ಟಾರೆಯಾಗಿ ಸೃಷ್ಟಿಸಿರುವ ಅನಿಶ್ಚಿತತೆ, ಜನರ ಓಡಾಟ-ಒಡನಾಟದ ರೀತಿ, ಬದುಕಿನ ಶೈಲಿಯಲ್ಲಿ ಮಾಡಿರುವ ಪಲ್ಲಟ ಬೃಹತ್ತಾದದ್ದು.

Advertisement

ಇದನ್ನು ಈಗ ತಜ್ಞರು ಹೊಸ ಸಹಜತೆ ಎಂದು ಕರೆಯಲಾರಂಭಿಸಿದ್ದಾರೆ. ಆದರೆ ಈ ಬದಲಾವಣೆಗೆ ಹೊಂದಿಕೊಳ್ಳಲು ಜನರಿಗೆ ಕಷ್ಟವಾಗುತ್ತಿದೆ. ಹಿರಿಯರೆಂದಷ್ಟೇ ಅಲ್ಲ, ಮಕ್ಕಳಿಗೂ ಇವೆಲ್ಲ ಬಿಕ್ಕಟ್ಟಿನ ಸಂಗತಿಗಳೇ. ವಿದ್ಯಾರ್ಥಿಗಳ ವಿಚಾರಕ್ಕೆ ಬಂದರೆ, ಆಟ-ಪಾಠದಲ್ಲಿ ಸೃಷ್ಟಿಯಾಗಿರುವ ಏರುಪೇರಿನಿಂದಾಗಿ ಅವರ ಮನದ ಮೇಲೂ ಒತ್ತಡ ಬೀಳಲಾರಂಭಿಸಿದೆ.

ಇನ್ನು ಕಳೆದ ಕೆಲವು ತಿಂಗಳುಗಳಿಂದ ಜಗತ್ತಿನಾದ್ಯಂತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ ಎಂಬ ವರದಿಗಳು ಬರಲಾರಂಭಿಸಿವೆ. ಇವನ್ನೆಲ್ಲ ನೋಡಿದಾಗ, ಈ ಸಾಂಕ್ರಾಮಿಕವು ಮನುಷ್ಯನ ಮಾನಸಿಕ ಆರೋಗ್ಯದ ಮೇಲೆ, ಸಂಬಂಧಗಳ ಮೇಲೆ ದೊಡ್ಡ ಗಾಯ ಮಾಡುತ್ತಿದೆ ಎನ್ನುವುದು ಅರಿವಾಗುತ್ತದೆ.

ಆದಾಗ್ಯೂ, ಯಾವುದೇ ಬದಲಾವಣೆಯಿರಲಿ ಅದಕ್ಕೆ ಒಗ್ಗಿಕೊಳ್ಳಲು ಮನಸ್ಸು ಮೊದಲು ನಿರಾಕರಿಸುತ್ತದೆ, ಪ್ರತಿರೋಧ ಒಡ್ಡುತ್ತದೆ ಎನ್ನುತ್ತದೆ ಮನಃಶ್ಯಾಸ್ತ್ರ. ಹಾಗೆಂದು ಕೋವಿಡ್‌ ಸಮಸ್ಯೆ ಶಾಶ್ವತವಾಗಿ ಇರಲಿದೆ ಎಂದೇನೂ ಅರ್ಥವಲ್ಲ. ಈಗ ಸೃಷ್ಟಿಯಾಗಿರುವ ಬಿಕ್ಕಟ್ಟಂತೂ ನಿಸ್ಸಂಶಯವಾಗಿಯೂ ಮುಂದಿನ ದಿನಗಳಲ್ಲಿ ಬಗೆಹರಿಯಲಿದೆ.

ಹೀಗಾಗಿ, ಪ್ರಪಂಚವೇ ಮುಳುಗಿಹೋಗುತ್ತಿದೆ ಎಂಬ ನಿರಾಶಾವಾದ ಖಂಡಿತ ಬೇಡ. ಎಂಥ ಕ್ಲಿಷ್ಟ ಸಮಯದಲ್ಲೂ ಬದುಕುವ ಮಾರ್ಗವನ್ನು ಕಂಡುಕೊಳ್ಳುವುದು, ಸಂತೋಷವನ್ನು ದಕ್ಕಿಸಿಕೊಳ್ಳುವುದು ಮನುಷ್ಯನ ಬಹುದೊಡ್ಡ ಶಕ್ತಿ. ಈ ಶಕ್ತಿಯನ್ನು ನಾವು ಮರೆಯದಿರೋಣ. ನಮ್ಮ ಸುತ್ತಲಿರುವವರೂ ಖನ್ನತೆಯತ್ತ ಮುಖ ಮಾಡದಂತೆ ಜಾಗೃತಿ ವಹಿಸೋಣ. ಕತ್ತಲು ಕಳೆದು ಬೆಳಕು ಬಂದೇ ಬರುತ್ತದೆ ಎನ್ನುವುದು ನೆನಪಿರಲಿ. ನಿರಾಶಾವಾದಿಗಳಾಗದಿರಿ.

Advertisement

Udayavani is now on Telegram. Click here to join our channel and stay updated with the latest news.

Next