ಯಾದಗಿರಿ: ಪ್ರತಿಯೊಬ್ಬ ಮನುಷ್ಯ ಜೀವಿ ಶ್ರದ್ಧೆ, ನಿಷ್ಠೆಯಿಂದ ಬಾಳಬೇಕು. ಪೂಜೆ-ಪ್ರಾರ್ಥನೆಗಳು ನೆರವೇರಿಸುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ ಎಂದು ಶಾಸಕ ನಾಗನಗೌಡ ಕಂದಕೂರ ಹೇಳಿದರು.
ಅಬ್ಬೆತುಮಕೂರು ವಿಶ್ವಾರಾಧ್ಯರ ಮಠದಲ್ಲಿ ನವರಾತ್ರಿ ಉತ್ಸವ ನಿಮಿತ್ತ ಹಮ್ಮಿಕೊಂಡಿದ್ದ 8ನೆಯ ದಿನದ ಶ್ರೀದೇವಿ ಪೂಜಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾಂಸಾರಿಕ ಜಂಜಾಟದಲ್ಲಿ ಸಿಲುಕಿಕೊಂಡು ಮನುಷ್ಯ ತೊಳಲಾಡುತ್ತಾನೆ. ಈ ತಾಕಲಾಟದಿಂದ ಮುಕ್ತಿ ಪಡೆಯಲು ಕ್ಷೇತ್ರಗಳ ದರ್ಶನ, ಮಹಾತ್ಮರ ಆಶೀರ್ವಾದದಿಂದ ಸಾಧ್ಯವಾಗುತ್ತದೆ ಎಂದರು.
ಅಬ್ಬೆತುಮಕೂರಿನಲ್ಲಿ ಭಕ್ತಿ ಭಾವದಿಂದ, ಶ್ರದ್ಧೆ-ನಿಷ್ಠೆಗಳಿಂದ ನವರಾತ್ರಿ ಉತ್ಸವ ಆಚರಿಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ. ಈ ಉತ್ಸವದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಜೀವನದಲ್ಲಿ ಖಂಡಿತವಾಗಿಯೂ ಒಳ್ಳೆಯದಾಗುತ್ತದೆಯೆಂದು ಹೇಳಿದರು.
ಮಠದ ಪೀಠಾಧಿಪತಿ ಡಾ| ಗಂಗಾಧರ ಸ್ವಾಮಿಗಳು ಆಶೀರ್ವಚನ ನೀಡಿ, ಕೊರೊನಾ ಸಂಕಟದ ಸಂದರ್ಭದಲ್ಲಿ ಎಲ್ಲರೂ ಆತಂಕಕ್ಕೆ ಒಳಗಾಗಿದ್ದಾರೆ. ಈ ಆತಂಕದಿಂದ ದೂರವಾಗಿ, ಮನುಕುಲಕ್ಕೆ ಒಳಿತಾಗಲಿಯೆಂದು ಹಾರೈಸಿ ದೇವಿ ಮೂರ್ತಿಗೆ ಪೂಜೆ ನೆರವೇರಿಸಲಾಗುತ್ತಿದೆ. ವಿಶ್ವಾರಾಧ್ಯರು ದೇವಿಯ ಆರಾಧಕರಾಗಿದ್ದರು. ದೇವಿ ಆರಾಧನೆಯಿಂದ ಅಷ್ಟ ಸಿದ್ಧಿಗಳನ್ನ ಸಂಪಾದಿಸಿಕೊಂಡ ಮಹಾ ಮಹಿಮರಾಗಿದ್ದರು. ಅಂತಹ ಪುಣ್ಯದ ಕ್ಷೇತ್ರದಲ್ಲಿ ಲೋಕ ಕಲ್ಯಾಣ ಬಯಸಿ, ದುಷ್ಟ ಶಿಕ್ಷಣ, ಶಿಷ್ಯ ರಕ್ಷಣೆಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ, ಡಾ| ಎಸ್.ಬಿ ಕಾಮರೆಡ್ಡಿ, ಚನ್ನಪ್ಪಗೌಡ ಮೋಸಂಬಿ, ಡಾ| ಸುಭಾಶ್ಚಂದ್ರ ಕೌಲಗಿ, ಶಾಂತರೆಡ್ಡಿ ದೇಸಾಯಿ, ಎಸ್.ಬಿ ಪಾಟೀಲ್ ಸೇರಿದಂತೆ ಇತರರಿದ್ದರು. ಮಲ್ಲಿಕಾರ್ಜುನ ಶಾಸ್ತ್ರಿ ಐನಾಪೂರ ದೇವಿ ಪಾರಾಯಣ ಮಾಡಿದರು. ಬಸವರಾಜ ಶಾಸ್ತ್ರಿ ಎಲೆಕೂಡಗಿ ವಿಶೇಷ ಪೂಜೆ ನೆರವೇರಿಸಿದರು. ಮಹಾಮಂಗಳಾರತಿ ನಂತರ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಜರುಗಿತು. ತರುವಾಯ ವಿವಿಧ ಗ್ರಾಮಗಳ ಕಲಾವಿದರಿಂದ ಚೌಡಕಿ ಹಾಡು, ಕಣಿ ಹಲಗೆ, ಡೊಳ್ಳು ಕುಣಿತ, ಕೋಲಾಟ ನೆರೆದ ಭಕ್ತರ ಮನರಂಜಿಸಿದವು.