Advertisement

ಪುಸ್ತಕಗಳ ರಾಶಿ ಕಂಡಾಗ ಆ ಶಾರದೆಯ ನೆನಪಾಗುತ್ತೆ…

03:49 PM May 30, 2019 | keerthan |

ಮಂಗಳೂರಿನ ಯುನಿವರ್ಸಿಟಿ ಕಾಲೇಜಿನಲ್ಲಿ ಬಿ.ಎಸ್ಸಿ ಕೊನೆಯ ವರ್ಷ ಓದುತ್ತಿದ್ದೆ. ನನ್ನ ಮನೆ ಕೇರಳದ ಞಕಾಸರಗೋಡಿನಲ್ಲಿತ್ತು. ಬೆಳಗ್ಗಿನ ರೈಲಿಗೆ ಕಾಲೇಜಿಗೆ ಬಂದು ಸಂಜೆಯ ರೈಲಿಗೆ ತಿರುಗಿ ಮನೆಗೆ ಹೋಗುತ್ತಿದ್ದೆ. ಕೆಲವು ಸಲ ಪ್ರಾಕ್ಟಿಕಲ್‌ ಕ್ಲಾಸ್‌ಗಳಿಂದಾಗಿ ಕೊನೆಯ ರೈಲು ಹಿಡಿದು ಮನೆಗೆ ಹೋಗುವಾಗ ಸಂಜೆ ಏಳು ಗಂಟೆ ದಾಟುತ್ತಿತ್ತು. ಇನ್ನೂ ದೊಡ್ಡ ಕಷ್ಟವಾಗುತ್ತಿದ್ದುದು ಕೇರಳದಲ್ಲಿ ಕೋಮು ಜಗಳದಿಂದ ಇದ್ದಕ್ಕಿದ್ದಂತೆ ಹರತಾಳಗಳು ನಡೆದಾಗ. ಅಂಗಡಿಗಳು ಬಾಗಿಲು ಮುಚ್ಚಿ, ಬಸ್‌ ಸಂಚಾರ ಸ್ಥಗಿತವಾಗಿ, ಬಸ್‌ ನಿಲ್ದಾಣಗಳು ಬಿಕೋ ಅನ್ನುವಾಗ ನನ್ನಂಥ ಗಡಿನಾಡ ಕನ್ನಡಿಗರ ಪರದಾಟ ಹೇಳತೀರದು.

Advertisement

ರೈಲು ಸಂಚಾರವೇನೋ ಇರುತ್ತದೆ. ಆದರೆ, ಞರೈಲ್ವೇ ಸ್ಟೇಷನ್‌ನಿಂದ ಅರ್ಧ ಗಂಟೆ ಬಸ್‌ ಪ್ರಯಾಣ ಮಾಡಬೇಕಲ್ಲ? ಕ್ಲಾಸ್‌ ಮುಗಿಯುವಾಗ ಕತ್ತಲಾಗುತ್ತಿತ್ತು. ಹಾಗಂತ ಕಾಲೇಜಿಗೆ ರಜೆ ಮಾಡುವ ಹಾಗೂ ಇರಲಿಲ್ಲ. ಯಾಕಂದ್ರೆ, ಪ್ರಾಕ್ಟಿಕಲ್‌ ಕ್ಲಾಸ್‌ಗಳು ಮಿಸ್‌ ಆದರೆ, ಓದಿಕೊಳ್ಳುವುದು ಕಷ್ಟವಾಗುತ್ತಿತ್ತು.

ಅದೊಂದು ದಿನ ಕೆಮಿಸ್ಟ್ರಿ ಪ್ರಾಕ್ಟಿಕಲ್‌ ಕ್ಲಾಸ್‌ ಮುಗಿಸಿ ಹೊರಡುವಾಗ ಗಂಟೆ ಐದೂವರೆ. ಮಂಗಳೂರಿನಿಂದ ಉಪ್ಪಳಕ್ಕೆ ಹೋಗುವ ರೈಲು ಆರು ಗಂಟೆಗಿತ್ತು. ಲ್ಯಾಬ್‌ನಿಂದ ಹೊರಡುವಾಗ ಅಟೆಂಡರ್‌ ಜತ್ತಪ್ಪ, “ಕೇರಳದಲ್ಲಿ ಹರತಾಳ್‌
ಅಂತೆ. ಯಾರೋ ಯಾರಿಗೋ ಕಾಸರಗೋಡಲ್ಲಿ ಚೂರಿ ಹಾಕಿ¨ªಾರೆ. ಗುಂಪು ಘರ್ಷಣೆ ಶುರುವಾಗಿದೆ’ ಅಂತ ಹೇಳಿದರು. ಆಯ್ತಲ್ಲ ಕತೆ, ಎಲ್ಲಿ ಹೋಗೋದು ಅಂಥ ಸಮಯದಲ್ಲಿ? ರೈಲಿನಲ್ಲಿ ಉಪ್ಪಳವನ್ನೇನೋ ತಲುಪಬಹುದು.
ಆದರೆ, ಅಲ್ಲಿಂದ ಬಸ್‌ ಹಿಡಿದು ಮನಗೆ ಹೋಗೋದು ಹೇಗೆ?

ಏನಾದರಾಗಲಿ ಅಂತ ಧೈರ್ಯ ಮಾಡಿ ಕಾಲೇಜಿನಿಂದ ಹೊರಗೆ ಬರುವಾಗ, ಕನ್ನಡ ವಿಭಾಗದ ಜಲಜಾಕ್ಷಿ ಮೇಡಂ ಎದುರಿಗೆ ಸಿಕ್ಕರು. ಅವರು ಕನ್ನಡ ವಿಭಾಗದ ಮುಖ್ಯಸ್ಥರು ಮತ್ತು ನನ್ನ ಕನ್ನಡ ಗುರುಗಳು. “ಏನಮ್ಮಾ ಲೇಟು? ರೈಲು ಹೋಯ್ತಾ? ಈ ಕಡೆ ಏನು ಬಸ್‌ಗಾ?’ ಎಂದು ಕೇಳಿದರು. ಆಗ ನಾನು, “ಮೇಡಂ, ಕೇರಳ ಬಂದ್‌ ಅಂತೆ’ ಅಂದೆ. “ಓ ಹಾಗಾ ವಿಷ್ಯ, ಮತ್ತೆ ಈಗ ನೀನು ಉಪ್ಪಳದಿಂದ ಮನೆಗೆ ಹೋಗೋದು ಹೇಗೆ?’ ಅಂತ ಕೇಳಿದ್ರು. ಅವರಲ್ಲಿ ಹೇಳಿಕೊಳ್ಳಲು ಹಿಂಜರಿಕೆಯಾಗಿ, “ಗೊತ್ತಿಲ್ಲ ಮೇಡಂ’ ಎಂದಷ್ಟೇ
ಹೇಳಿ ಸುಮ್ಮನಾದೆ.

“ಹಾಗಿದ್ರೆ ಒಂದು ಕೆಲಸ ಮಾಡು. ನಮ್ಮ ಮನೆಗೆ ಬಾ. ಇಂಥ ಟೈಮಲ್ಲಿ ರಿಸ್ಕ್ ಯಾಕೆ ತಗೋತಿ? ಮನೆಗೆ ಫೋನ್‌ ಮಾಡಿ ವಿಷಯ ತಿಳಿಸಿದರಾಯ್ತು’ ಎಂದರು. ಏನು ಮಾಡುವುದು, ಒಬ್ಬಳೇ ಹೇಗೆ ಹೋಗುವುದು ಅಂತ ತೋಚದೆ ಉಸಿರು ಬಿಗಿ ಹಿಡಿದಿದ್ದ ನಾನು ನಿರಾಳವಾದೆ. ಹೋದ ಜೀವ ವಾಪಸ್‌ ಬಂದಂತಾಯಿತು ಮನೆಗೆ ಬಂದ ವಿದ್ಯಾರ್ಥಿನಿಯನ್ನು ಅವತ್ತು ಅವರು ಮಗಳಂತೆಯೇ ನೋಡಿಕೊಂಡರು. ರಾತ್ರಿ ಊಟಕ್ಕೆ ಪಾಯಸ ಮಾಡಿ ಬಡಿಸಿದರು. ಮೇಡಂ ಬಳಿಯಿದ್ದ ಪುಸ್ತಕದ ಸಂಗ್ರಹ ಕಂಡು ಬೆರಗಾಗಿ¨ªೆ. ನಾನೂ ಮುಂದೆ ಅಂಥದ್ದೊಂದು ಲೈಬ್ರರಿ ಮಾಡಬೇಕು, ಒಳ್ಳೆಯ ಪುಸ್ತಕಗಳನ್ನು ಓದಬೇಕು ಅಂತ ಆಗಲೇ ನಿರ್ಧರಿಸಿದ್ದು. ಮರುದಿನ ಕಾಲೇಜಿಗೆ ಹೊರಟಾಗ ಅವರು ತಮ್ಮ ಮಗಳ ಹೊಸ ಬಟ್ಟೆಯೊಂದನ್ನು ಕೊಟ್ಟು, “ಇದನ್ನು ಹಾಕಿಕೊಳ್ಳಮ್ಮ. ನಿನ್ನೆಯದು ಕೊಳೆ ಆಗಿದೆ ಅಲ್ವಾ?’ ಅಂತ ಪ್ರೀತಿ ತೋರಿದಾಗ ನಾನು ಮೂಕಳಾಗಿದ್ದೆ.

Advertisement

ಆ ಘಟನೆ ಇವತ್ತಿಗೂ ನನ್ನ ಮನಃಪಟಲದಲ್ಲಿ ಅಚ್ಚಾಗಿ ಉಳಿದಿದೆ. ಯಾರ ಮೇಲೂ ಯಾವತ್ತಿಗೂ ರೇಗದ, ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದ ಜಲಜಾಕ್ಷಿ ಮೇಡಂರ ವಿದ್ಯಾರ್ಥಿನಿ ನಾನು ಅಂತ ಈಗಲೂ ಹೆಮ್ಮೆಪಡುತ್ತೇನೆ. ಹತ್ತು ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದಾಗಿ ಅವರನ್ನು ಕಳೆದುಕೊಂಡರೂ, ನನ್ನಂಥ ನೂರಾರು ಮಕ್ಕಳ ನೆನಪಿನಲ್ಲಿ ಅವರು ಇಂದಿಗೂ  ಜೀವಂತವಾಗಿದ್ದಾರೆ. ಯಾರ ಮನೆಯಲ್ಲಿ ಪುಸ್ತಕಗಳ ಸಂಗ್ರಹವನ್ನು ನೋಡಿದರೂ, ಅವರು ನೆನಪಾಗುತ್ತಾರೆ.

“ಒಂದು ಕೆಲಸ ಮಾಡು. ನಮ್ಮ ಮನೆಗೆ ಬಾ. ಇಂಥ ಟೈಮಲ್ಲಿ ರಿಸ್ಕ್ ಯಾಕೆ ತಗೋತಿ? ಮನೆಗೆ ಫೋನ್‌ ಮಾಡಿ ವಿಷಯ ತಿಳಿಸಿದರಾಯ್ತು’ ಎಂದರು ಮೇಡಂ. ಏನು ಮಾಡುವುದು, ಒಬ್ಬಳೇ ಊರಿಗೆ ಹೇಗೆ ಹೋಗುವುದು ಅಂತ ತೋಚದೆ ಉಸಿರು ಬಿಗಿ ಹಿಡಿದಿದ್ದ ನಾನು ನಿರಾಳವಾದೆ…

 ರಜನಿ ಭಟ್‌, ಮಾಳಪ್ಪಮಕ್ಕಿಮನೆ

Advertisement

Udayavani is now on Telegram. Click here to join our channel and stay updated with the latest news.

Next