ಮಳೆಗಾಲವೆಂದರೆ ಮೈಮನಕೆ ಏನೋ ಸಂತೋಷ. ತುಂತುರು ಮಳೆಯಲಿ ನೆನೆಯುವಾಗಿನ ಖುಷಿ, ಬೇಸಿಗೆಯ ಬೆವರನ್ನು ತೊಯ್ದು ಹೊಸ ಹುರುಪನ್ನು ನೀಡುತ್ತದೆ. ಮೊದಲ ಮಳೆಗೆ ಗಿಡಮರಗಳೆಲ್ಲಾ ಚಿಗುರುತ್ತವೆ. ಚಿಲಿಪಿಲಿಗುಟ್ಟುವ ಹಕ್ಕಿಗಳು, ಕೀಟಗಳ ಕಲರವವು ತಮಗಾದ ಸಂತೋಷವನ್ನು ತೋರ್ಪಡಿಸುತ್ತವೆ. ಈ ತುಂತುರು ಮಳೆ ಯಾರಿಗೆ ತಾನೇ ಖುಷಿಯನ್ನು ನೀಡುವುದಿಲ್ಲ?
ಇಂತಹ ಮಳೆಯೊಂದಿಗಿನ ನನ್ನ ನೆನಪಿನ ಬುತ್ತಿಯನ್ನು ನಿಮ್ಮೆದುರು ಬಿಚ್ಚಿಡುತ್ತಿದ್ದೇನೆ.
ನಾನಾಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದೆ. ನಮ್ಮ ಮನೆಯ ಸುತ್ತಲೂ ನದಿ. ನಮ್ಮ ಮನೆ ಒಂದು ದ್ವೀಪದಂತೆ ತೋರುತ್ತಿತ್ತು. ಮಳೆಗಾಲ ಬಂದಾಗ “ಧೋ ಧೋ” ಎಂಬ ನೀರಿನ ಶಬ್ದ , ಕಪ್ಪೆಗಳ ಕ್ರೀಂಗುಟ್ಟುವಿಕೆ ಬಿಟ್ಟರೆ ಬೇರೇನೂ ಕೇಳಿಸುತ್ತಿರಲಿಲ್ಲ. ಮನೆಯಿಂದ ನದಿಯ ಮತ್ತೂಂದು ಬದಿಗೆ ದಾಟಬೇಕಿದ್ದರೆ ಅಡಿಕೆ ಮರದ ಕಾಲುಸಂಕವನ್ನು ಮಾಡಬೇಕಿತ್ತು. ಮಳೆಗಾಲದಲ್ಲಿ ಆ ಕಾಲುಸಂಕವನ್ನು ದಾಟಿಯೇ ಶಾಲೆಗೆ ಹೋಗಬೇಕಿತ್ತು. ಆ ಕಾಲುಸಂಕದಲ್ಲಿ ನದಿ ದಾಟುವುದೇ ನನಗೊಂದು ಖುಷಿ. ಸ್ವಲ್ಪ ಎಚ್ಚರ ತಪ್ಪಿದರೂ ನೀರಿಗೆ ಬೀಳುವುದು ಖಚಿತ.
ನಾನು ಶಾಲೆಯಿಂದ ಕಾಲುಸಂಕದ ಬಳಿ ಬರುತ್ತಿದ್ದಂತೆ “ಕೂ…’ ಎಂಬ ಕೂಗಿನಿಂದ ಮನೆಯವರನ್ನು ಕರೆಯುತ್ತಿದ್ದೆ. ಅದು ನಾನು ಬಂದ ಸೂಚನೆಯಾಗಿತ್ತು. ಆಗ ಅಪ್ಪಾ ಅಥವಾ ಅಮ್ಮ ಕಾಲುಸಂಕದ ಬಳಿ ಬಂದು ನನ್ನನ್ನು ದಾಟಿಸುತ್ತಿದ್ದರು. ಒಮ್ಮೊಮ್ಮೆ ನೀರಿನ ಜೋರಾದ ಶಬ್ದಕ್ಕೆ ನನ್ನ ಕೂಗು ಅಮ್ಮನಿಗೆ ಕೇಳಿಸದೇ ಇದ್ದಾಗ, ನಾನೇ ಭಯದಿಂದ “ರಾಮ… ರಾಮ…’ ಎಂದು ಹೇಳುತ್ತ ದಾಟಿದ್ದೂ ಉಂಟು, ಬೈಗುಳ ತಿಂದದ್ದೂ ಉಂಟು.
ಒಂದು ದಿನ ಎಂದಿನಂತೆ ಶಾಲೆಗೆ ಹೋಗಿದ್ದೆ. ಮಳೆರಾಯನ ಆರ್ಭಟ ಜೋರಾಗಿತ್ತು. ನಮ್ಮ ಶಾಲೆಯ ಪಕ್ಕದಲ್ಲಿರುವ ನದಿಗಳೆರಡು ಒಂದಾಗಿ ಆ ದಾರಿಯೂ ಇಲ್ಲವಾಗಿತ್ತು. ಬೇರೊಂದು ದಾರಿಯ ಮೂಲಕ ಮನೆಯ ಪಕ್ಕದ ಅಜ್ಜನ ಮನೆಯನ್ನು ಸೇರಿದೆ. ಆಗಲೇ ನನಗೆ ತಿಳಿಯಿತು ಕಾಲುಸಂಕ ನೀರಿನಲ್ಲಿ ಮುಳುಗಿದೆ ಎಂದು. ನೀರು ಕಡಿಮೆಯಾಗುವವರೆಗೆ ನನಗೆ ಮನೆಗೆ ಹೋಗಲು ಅಸಾಧ್ಯವಾಗಿತ್ತು. ಅಜ್ಜನೊಂದಿಗೆ ತೋಟದ ಬದಿಯಿಂದ ನನ್ನ ಮನೆಯನ್ನು ನೋಡಿದಾಗ ದುಃಖ ಉಕ್ಕಿ ಬರುತ್ತಿತ್ತು. ಅಮ್ಮನನ್ನು ಯಾವಾಗ ನೋಡುತ್ತೇನೋ ಅನಿಸುತ್ತಿತ್ತು. ಕೈಸನ್ನೆಯಿಂದಲೇ ನಾನು ಮನೆಗೆ ಬರುತ್ತೇನೆ ಎಂದು ಅಳುತ್ತ ಅಮ್ಮನಲ್ಲಿ ಹೇಳುತ್ತಿದ್ದೆ. ಸಂಜೆ ಹೊತ್ತಿಗೆ ನೀರು ಕಡಿಮೆಯಾದಾಗ ಅಪ್ಪ ಆ ಹರಕು-ಮುರುಕು ಸಂಕದಲ್ಲೇ ಕಷ್ಟಪಟ್ಟು ನನ್ನನ್ನು ದಾಟಿಸಿದರು. ಆ ದಿನಗಳ ಖುಷಿಯೇ ಬೇರೆ. ಆ ಕಷ್ಟದಲ್ಲೂ ಒಂದು ಆನಂದವಿತ್ತು. ಈಗ ನಮ್ಮ ಮನೆಯ ಬಳಿ ಇರುವ ನದಿಗೆ ಅಡ್ಡಲಾಗಿ ಕಾಂಕ್ರೀಟ್ ಸೇತುವೆ ನಿರ್ಮಿಸಿದ್ದಾರೆ. ಹಾಗಾಗಿ, ಕಾಲುಸಂಕದ ಉಪಯೋಗವಿಲ್ಲ. ಆದರೆ, ಕಾಲುಸಂಕದ ಜೊತೆಗಿನ ನನ್ನ ನೆನಪು ಮಾತ್ರ ಅಮರ.
ದೀಕ್ಷಿತಾ ಪಿ. ದ್ವಿತೀಯ ಬಿ.ಕಾಂ. ಸಂತ ಪಿಲೋಮಿನಾ ಕಾಲೇಜು, ಪುತ್ತೂರು