Advertisement

ಕಮಲಾಬಾಯಿ ಚಟ್ಟೋಪಾಧ್ಯಾಯ ಕೆಲವು ನೆನಪುಗಳು

07:07 PM Jan 10, 2020 | mahesh |

ಹಲವಾರು ಪಾತ್ರಗಳು ಮುಖ್ಯವಾಹಿನಿಗೆ ಸೇರದೇ ವೇದಿಕೆಯ ಮೇಲೆ ಇದ್ದರೂ ನೇಪಥ್ಯದಿಂದ ಎಂಬಂತೆ ನಾಟಕವನ್ನ ನಿರ್ದೇಶಿಸಿದ್ದು ಅಭಿನಂದನಾರ್ಹ. ಇದು ಬಹಳಷ್ಟು ಹೊಸತನವನ್ನ ನಾಟಕಕ್ಕೆ ನೀಡುತ್ತದೆ. ಏಕವ್ಯಕ್ತಿ ಅಲ್ಲದ ಏಕವ್ಯಕ್ತಿ ನಾಟಕವಿದು.

Advertisement

ಎಂ.ಜಿ.ಎಂ ಕಾಲೇಜಿನಲ್ಲಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಇದರ ಸಹಯೋಗದಲ್ಲಿ ಡಾ| ಕತ್ಯಾಯಿನಿ ಕುಂಜಿಬೆಟ್ಟು ಅವರ 11 ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ನಡೆಸಲಾಯಿತು. ಸಂದರ್ಭದಲ್ಲಿ ಪ್ರದರ್ಶಿಸಿದ ನಾಟಕ ಕಮಲಾಬಾಯಿಯ ನೆನಪುಗಳಿಂದ.

ನಾಟಕದ ಆರಂಭ ವಯಸ್ಸಾದ ಕಮಲಾಬಾಯಿಯ ನೆನಪುಗಳಿಂದ. ವೈದೇಹಿಯವರು ಕಮಲಾಬಾಯಿಯಲ್ಲಿನ ಮಗುವನ್ನು ತೀರ ಹತ್ತಿರದಿಂದ ಅನುಭವಿಸುತ್ತಾರೆ. ನಿರ್ದೇಶಕರೂ ಅಭಿನೇತ್ರಿಯೂ ಆದ ಭಾಗೀರಥಿ ಬಾಯಿ ಕದಂ ಮಕ್ಕಳಂತೆಯೇ ಅಭಿನಯಿಸುತ್ತಾರೆ. ಇಡೀ ನಾಟಕದಲ್ಲಿ ಒಂದು ತರಹದ ಮಕ್ಕಳ ಮುಗ್ಧತೆ ನಾಟಕದ ಮುಖ್ಯಭೂಮಿಕೆ, ಲೇಖಕಿ ಹಾಗೂ ನಿರ್ದೇಶಕಿಯಲ್ಲೂ ಕಾಣಸಿಗುತ್ತದೆ. ಎಲ್ಲೋ ಒಂದೆಡೆ ಕಮಲಾಬಾಯಿ ಚಟ್ಟೋಪಾಧ್ಯಾಯ ದೊಡ್ಡವರಾಗಲೇ ಇಲ್ಲವೋ, ಇಲ್ಲ ಲೇಖಕಿಗೆ ಅಥವಾ ನಿರ್ದೇಶಕರಿಗೆ ಆಕೆಯಲ್ಲಿನ ಮಗು ಹೆಚ್ಚು ಆಪ್ಯಾಯಮಾನಳಾದಳೇನೋ ಅನ್ನಿಸುತ್ತದೆ.

ಕಮಲಾಬಾಯಿ ಹುಟ್ಟಿದ್ದು ಬಹಳ ಶ್ರೀಮಂತರ ಮನೆಯ ಮಗಳಾಗಿ. ಮನೆಯಲ್ಲಿ ಅಜ್ಜಿ ತಾಯಿ ಯಾರೂ ಅತೀ ಸಾಂಪ್ರದಾಯಿಕ ವ್ಯಕ್ತಿತ್ವದವರಲ್ಲ. ಅಜ್ಜಿಗಂತೂ ಬಹಳ ಮುಂದುವರಿದ ಯೋಚನೆಗಳಿದ್ದವು, ಅದು ಈ ಮಗುವಿಗೆ ಹರಿದು ಬಂದಿತ್ತು. ತಾಯಿಯ ಸಾಂಸ್ಕೃತಿಕ ಒಲವು ಜಗತ್ತನ್ನು ನೋಡುವ ಪರಿ ಬದಲಾಯಿಸಿತ್ತು. ಅಂತೆಯೇ ಆಕೆ ಸಾಂಸ್ಕೃತಿಕ ಜಗತ್ತಿಗೆ ಬಹಳ ಬೇಗ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ. ಶಿಕ್ಷಕಿ ಮಾರ್ಗರೇಟ್‌ ಕಸಿನ್ಸ್‌ ಬಾಲೆ ಕಮಲಾಬಾಯಿಯ ಮೇಲೆ ಅತೀ ಹೆಚ್ಚು ಪ್ರಭಾವ ಬೀರುತ್ತಾರೆ. ಗಂಡು ಹೆಣ್ಣು ಒಟ್ಟು ಸೇರಿ ಮಾಡುವ ನಾಟಕ, ಶಾಲಾ ಕಾರ್ಯಕ್ರಮ ಇದಕ್ಕೆ ಅಡ್ಡಿ ಹಾಗೂ ಅದರ ಅನವಶ್ಯಕ ವದಂತಿಗಳಿಂದ ನೊಂದ ಬಾಲೆಗೆ ಅದೇಕೋ ಮನದಲ್ಲೇ ಚಂಡಿಯಂತಹ ಛಲ ಮೂಡುತ್ತದೆ.

ಛಲಕ್ಕೆ ದಾರಿ ತೋರಿಸಿದವರು ಶಿಕ್ಷಕಿ ಮಾರ್ಗರೇಟ್‌ ಕಸಿನ್ಸ್‌. ಅವರಿಂದಲೇ ಲಿಂಗ ಭೇದದ ಬಗ್ಗೆ ನಿರಾಕರಣೆ ಈಕೆಯಲ್ಲಿ ಒಡಮೂಡುತ್ತದೆ. ಅನಿಬೆಸೆಂಟ್‌ ಶಾಲೆಯಲ್ಲಿ ಇದ್ದು ಆಕೆಯ ಹೇಳಿಕೆಗಳ ಪ್ರಭಾವ ಕೂಡ ಕಮಲಾಬಾಯಿಯ ಯೋಚನಾ ಲಹರಿ ಬದಲಾಯಿಸುತ್ತದೆ. ಚಿಕ್ಕ ವಯಸಿನಲ್ಲೇ ಮನೆಯಲ್ಲಿ ಬರುವ ಸ್ವಾತಂತ್ರ್ಯ ಸೇನಾನಿಗಳಾದ ಗೋಪಾಲಕೃಷ್ಣ ಗೋಖಲೆ ಮುಂತಾದವರ ಪ್ರಭಾವದಿಂದ ಸಾಧಕಳಾಗಬೇಕೆಂಬ ಬಯಕೆ ಬಾಲಕಿ ಕಮಲಾಬಾಯಿಯಲ್ಲಿ ಮೂಡಿರುತ್ತದೆ. ಇದೇ ಹಠ ಗಂಡನಿಂದ ಬೇರ್ಪಟ್ಟ ಮೇಲೂ ಇಂಗ್ಲೆಂಡ್‌ಗೆ ಹೋಗಿ ಕಲಿಕೆ ಮುಂದುವರಿಸಲು ಸಹಾಯಕವಾಗಲು ಚಟ್ಟೋಪಾಧ್ಯಾಯರೊಂದಿಗೇ ಉಳಿಯುವ ಆಕೆಯ ನಿರ್ಧಾರದಿಂದ ಅರಿವಾಗುತ್ತದೆ. ತಾಯಿಯ ವಿರೋಧದ ನಡುವೆಯೂ ವಿದ್ರೋಹದ ಮಾತು ಕಮಲಾಭಾಯಿಯ ಹೃದಯದಲ್ಲಿ ಮೂಡಿ ಪ್ರಯೋಗವಾಗುತ್ತಾ ಸಾಗುತ್ತದೆ. ಅನಂತರದ ಬದುಕಿನಲ್ಲಿ ಆಕೆ ಸ್ವಾತಂತ್ರ್ಯ ಹೋರಾಟಕ್ಕೆ ಇಳಿದಿದ್ದೂ, ಎನ್‌.ಐ.ಕೆ . ಸ್ಥಾಪಿಸಿದ್ದೂ, ರಾಷ್ಟ್ರೀಯ ನಾಟಕ ಅಕಾಡೆಮಿ, ಸಹಾಯಕ ಸಂಸ್ಥೆಗಳ ಹುಟ್ಟುಹಾಕುವ ಛಲ ಮೂಡಿದ್ದು ಈ ವಿದ್ರೋಹವೇ ಕಾರಣವಾಯ್ತು ಅನ್ನಿಸುತ್ತದೆ.

Advertisement

ನಾಟಕ ಕಮಲಾಬಾಯಿಯ ವಿಧವತ್ವದಿಂದ ಹೊಸ ನೋಟ ಪಡೆಯಬೇಕಾಗಿತ್ತು. ಆದರೆ ಅಲ್ಲಿ ಅದು ಸ್ವಂತದ ಅನುಭವವನ್ನ ದೂರ ನಿಂತು ನೋಡುವಂತೆ ಮೂಡಿಬಂದಿದ್ದು ಹೊಸದು ಅನ್ನಿಸಿದರೂ ಎಲ್ಲೋ ಇನ್ನೂ ತೊಡಗುವಿಕೆ ಬೇಕಿತ್ತೇನೋ ಅನ್ನಿಸಿತ್ತದೆ. ಕಮಲಾಬಾಯಿ ಎಂಬವರಲ್ಲಿ ಇರಬಹುದಾದ ಸಾಧನೆಯ ಹಪಹಪಿಗಳು, ಏನೋ ಮಾಡಬೇಕು ಎನ್ನುವ ಕನಸುಗಳು, ಗೊಂದಲಗಳನ್ನು ನಾಟಕದ ಲೇಖಕರೂ, ನಿರ್ದೇಶಕರು ಉತ್ತಮ ರೀತಿಯಲ್ಲಿ ಹೊರತಂದು ಕಮಲಾಭಾಯಿಯನ್ನು ನಮಗೆಲ್ಲಾ ಆತ್ಮೀಯರಾಗಿಸುತ್ತಾರೆ. ವಿಧವೆ ಆದ ಮಗಳನ್ನ ಚೆನ್ನೈಗೆ ಕರೆದೊಯ್ಯುವ ಕಾರಣಗಳನ್ನು ತೋರಿಸದಿದ್ದರೂ ಮದರಾಸಿನಲ್ಲಿ ಭೇಟಿಯಾಗುವ ಹರೀಂದ್ರನಾಥ ಚಟ್ಟೋಪಾಧ್ಯಾಯರ ಹಿರಿಮೆ ಹಾಗೂ ವ್ಯಕ್ತಿತ್ವವನ್ನು ಬಹಳ ಚೆನ್ನಾಗಿ ಪ್ರೇಕ್ಷಕರ ಮುಂದಿಡುತ್ತದೆ.

ಮುಂದೆ ಕಮಲಾಬಾಯಿಂದ ಬೇರ್ಪಟ್ಟರೂ, ಹರೀಂದ್ರನಾಥರ ಗೌರವಕ್ಕೆ ಇಡೀ ನಾಟಕ ಧಕ್ಕೆ ತರುವುದಿಲ್ಲ. ಸುಂದರ ಸಂಸಾರದ ಕನಸುಗಳ ಜೊತೆ ಪುನರ್ವಿವಾಹ, ವಿಧವಾ ವಿವಾಹ ಎಂಬ ಆಗಿನ ಕಾಲದ ಹೋರಾಟಕ್ಕೆ ಕಮಲಬಾಯಿ ಆಕೆಯ ತಾಯಿ ನಿಲ್ಲುವ ಪ್ರಸಂಗಗಳು ಕಮಲಾಬಾಯಿ ಎನ್ನುವ ವ್ಯಕ್ತಿಯ ಬಗ್ಗೆ ಆಸಕ್ತಿ ಮೂಡುವಂತೆ ಮಾಡುತ್ತದೆ. ನಂತರ ತನ್ನ ಕಲಾಸತ್ಮತಾತ್ಮತೆಯ ಅಡಿಯಲ್ಲಿ ಹಲವರು ಬಂದು ಹೋದರೂ ಹರೀಂದ್ರನಾಥರ ಜೀವನಕ್ಕೆ ದೂರ ನಿಂತು ಗೌರವವಾಗೇ ವಿದಾಯ ಹೇಳುವ ಹೆಂಗಸಿನ ಗಟ್ಟಿತನ ಹಾಗೂ ಸ್ವಾಭಿಮಾನ ನಾಟಕದ ಜೀವಾಳ ಎಂದು ಅನ್ನಿಸುತ್ತದೆ.

ಸೇವಾದಳದ ಸೇವೆಗಳು, ಉಪ್ಪಿನ ಸತ್ಯಾಗ್ರಹ, ಹೆಣ್ಣುಮಕ್ಕಗಳಿಗಾಗಿ ಹಲವಾರು ಹೋರಾಟಗಳು ಇವೆಲ್ಲಾ ನಾಟಕಗಗಳಲ್ಲಿ ತರುವುದು ಸುಲಭದ ಕೆಲಸಗಳಲ್ಲ. ಅದನ್ನ ಲೀಲಾಜಾಲವಾಗಿ, ಆಸಕ್ತಿದಾಯಕವಾಗಿ ಕತೆಯಾಗಿ ತಂದಿರುವ ಚಾಕಚಕ್ಯತೆ ಅಭಿನಂದನಾರ್ಹ. ಆದರೆ ನಾಟಕದಲ್ಲಿ ಮದ್ರಾಸು ಎಸೆಂಬ್ಲಿ ಎಲೆಕ್ಷನ್‌ ಅದರಲ್ಲಿ ಕಮಲಾಬಾಯಿಯ ಪಾತ್ರ ಹಾಗೂ ಆಕೆಯ ನಿರ್ಧಾರಗಳು ಗೊಂದಲ ಉಂಟುಮಾಡುತ್ತದೆ. ಗೃಹ ಕೈಗಾರಿಕೆಯ ಬಗೆಗಿನ ಒಲವು ಹೋರಾಟಗಳು ಇನ್ನಷ್ಟು ಸ್ಪುಟವಾಗಿ ನಾಟಕದಲ್ಲಿ ತೆರೆದು ಕೊಳ್ಳಬಹುದಾಗಿತ್ತೇನೋ ಅನ್ನಿಸುತ್ತದೆ.

ಒಟ್ಟಾರೆಯಾಗಿ ಕಮಲಾಬಾಯಿಯಾಗಿ ಹಾಗೂ ಇಡೀ ನಾಟಕದ ನಿರ್ದೇಶಕಿಯಾಗಿ ಭಾಗೀರಥಿ ಭಾಯಿ ಕದಂ ಉತ್ತಮ ಪ್ರಯತ್ನ ಮಾಡಿದ್ದಾರೆ. ಅವರು ನಾಟಕದುದ್ದಕ್ಕೂ ಇರುವ ಕಮಲಾಬಾಯಿಯ ಚಿತ್ರದೊಂದಿಗೆ ಮೇಳೈಸಿ ಒಂದು ಸುಂದರ ನೆನಪಾಗುತ್ತಾರೆ. ಅಲ್ಲಲ್ಲಿ ಕಮಲಾಬಾಯಿಯ ಒಳತುಡಿತಗಳು, ಆಶಯಗಳನ್ನು ಇನ್ನೂ ಪ್ರಬುದ್ಧವಾಗಿ ಪ್ರೇಕ್ಷಕರ ಮುಂದಿಡಬಹುದಾಗಿತ್ತೇನೋ ಅನ್ನಿಸಿದರೂ, ಹೋರಾಟಗಳ ರಂಗಿಲ್ಲದ ಕಥೆಗಳ ನಿರೂಪಣಾ ಶೈಲಿ ವಿಶಿಷ್ಟ ಅನ್ನಿಸುವುದು ಸುಳ್ಳಲ್ಲ.

ಡಾ| ರಶ್ಮಿ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next