ದೀಪಾವಳಿ ಎಂದಾಕ್ಷಣ ನೆನಪಾಗುವುದೇ ಪಟಾಕಿಗಳು. ಇತರ ಯಾವುದೇ ಕಾರ್ಯಕ್ರಮಗಳಿಗಿಂತ ಪಟಾಕಿ ಸಿಡಿಸುವ ವಿಷಯವೇ ಅತಿ ಹೆಚ್ಚು ಖುಷಿ ಕೊಡುತ್ತದೆ.
ಮುಂಜಾನೆ ಬೇಗ ಎದ್ದು ಅಜ್ಜಿಯಿಂದ ಎಣ್ಣೆ ಹಚ್ಚಿಸಿಕೊಂಡು ಮತ್ತೆ ಕೆಲವು ಸಮಯ ಪಟಾಕಿ ಬಿಡುವ ಸಂಭ್ರಮ ಅಷ್ಟಿಷ್ಟಲ್ಲ. ಬಣ್ಣ ಬಣ್ಣದ, ವಿಧವಿಧದ ಪಟಾಕಿಗಳಿಲ್ಲದೆ ದೀಪಾವಳಿ ಪೂರ್ಣಗೊಳ್ಳುವುದಿಲ್ಲ. ಬಾಲ್ಯದ ದಿನಗಳಿಂದಲೂ ನಾನು ನನ್ನ ತಮ್ಮ ದೀಪಾವಳಿ ಹಬ್ಬಕ್ಕೆ ಕಾತರಿಸುತ್ತಿದ್ದೆವು. ಒಂದು ವಾರದ ಮೊದಲೇ ಹಣತೆಗಳನ್ನು ಜೋಡಿಸಿ, ಗೂಡುದೀಪಗಳನ್ನು ಸಿದ್ಧಪಡಿಸುತ್ತಿದ್ದೆವು.
ದೀಪಾವಳಿಯ ಪ್ರಮುಖ ಆಕರ್ಷಣೆಯೇ ಪಟಾಕಿ. ನೆರೆಮನೆಯವರೆಲ್ಲ ಸೇರಿ ವಠಾರದಲ್ಲಿ ಅದ್ದೂರಿಯಾಗಿ ದೀಪಾವಳಿ ಆಚರಿಸಿ ಪಟಾಕಿ ಸಿಡಿಸಿ ಮರುದಿನ ಪಟಾಕಿ ಕಸವನ್ನು ಒಟ್ಟು ಮಾಡುವುದು ಇನ್ನೊಂದು ಖುಷಿ.
ಅದೊಂದು ವರ್ಷ ಅಪ್ಪ ‘ಪಟಾಕಿ ರಹಿತ ದೀಪಾವಳಿ’ ಆಚರಿಸುವುದೆಂದು ನಿರ್ಧರಿಸಿದರು. ಎಣ್ಣೆ ಸ್ನಾನ ಮಾಡಿ ಹೊಸಬಟ್ಟೆ ತೊಟ್ಟು ದೇವರ ಹಾಗು ಹಿರಿಯರ ಆಶೀರ್ವಾದ ಪಡೆದು ಸರಳ ದೀಪಾವಳಿ ಮಾಡುವುದೆಂದು ಹೇಳಿದರು. ವರ್ಷ ಪೂರ್ತಿ ಪಟಾಕಿಗಳಿಗೆ ಕಾಯುತ್ತಿದ್ದ ನಮಗೆ ಶೀತ ಹಿಡಿದ ಪಟಾಕಿಗಳು ಉರಿಸಿದ ಹಾಗಾಯಿತು. ಪಟಾಕಿ ಹೊಡೆಯುವ ಸಂದರ್ಭದಲ್ಲೇ ಜಡಿ ಮಳೆ ಸುರಿದಂತಾಯಿತು. ಇಬ್ಬರೂ ಮೋರೆ ಸಪ್ಪೆ ಮಾಡಿಕೊಂಡು ಕುಳಿತೆವು. ಹಬ್ಬಕ್ಕೆ ಎಲ್ಲ ತಯಾರಿ ಆದರೂ ನಾವು ತಯಾರಿರಲಿಲ್ಲ. ದಿನವಿಡೀ ನಮ್ಮನ್ನು ಸಪ್ಪೆ ಮೋರೆಯಲ್ಲಿ ನೋಡಿ ಅಪ್ಪ ಕೊನೆಗೂ ಪಟಾಕಿ ಅಂಗಡಿಗೆ ಕರೆದುಕೊಂಡು ಹೋದರು. ನಮಗೆ ಬೇಕಾದಷ್ಟು ಪಟಾಕಿಗಳನ್ನು ಚೀಲದಲ್ಲಿ ತುಂಬಿ ನೆಲಚಕ್ರದಂತೆ ಕುಣಿದಾಡಲು ಆರಂಭಿಸಿದೆವು. ಆ ವರ್ಷದ ದೀಪಾವಳಿ ಮರೆಯಲಾಗದ ಸವಿನೆನಪು. ಪ್ರತಿ ವರ್ಷವೂ ದೀಪಾವಳಿ ಬಂದಾಗ ಈ ನೆನಪುಗಳನ್ನು ಮೆಲುಕು ಹಾಕುತ್ತೇವೆ.
ವೈಷ್ಣವೀ ಜೆ.ರಾವ್
ಅಂಬಿಕಾ ಕಾಲೇಜು, ಬಪ್ಪಳಿಗೆ, ಪುತ್ತೂರು.