ಸೈಕಲ್. ಬಾಲ್ಯದ ನೆನಪುಗಳಲ್ಲಿ ಥಟ್ಟನೆ ಎದ್ದು ಕೂರುವ ಅದ್ಭುತ. ನಾವು ಎಷ್ಟೇ ದೊಡ್ಡವರಾಗಿ ಬೆಳೆಯಬಹುದು, ಎಲ್ಲಿಗೂ ಪಯಣಿಸಬಹದು, ಎಲ್ಲೋ ಜೀವನದ ದಿನಗಳನ್ನು ದೂಡುತ್ತಿರಬಹುದು. ನಮ್ಮ ಸವೆದು ಹೋಗುತ್ತಿರುವ ದಿನಗಳಲ್ಲಿ ಸೈಕಲ್ ಕಲಿತು ಬಿದ್ದ ಕ್ಷಣವನ್ನಾಗಲಿ, ಸೈಕಲ್ ನಿಂದ ಬಿದ್ದು ಕಪ್ಪಾಗಿ ಅಚ್ಚಾಗಿ ಉಳಿದಿರುವ ಗಾಯಗಳನ್ನಾಗಲಿ ಮರೆಯಾಗಲು ಹೇಗೆ ಸಾಧ್ಯ ?
ನಾವು ಕಲಿತ ಸೈಕಲ್ ಗಳನ್ನು ಬಿಡಿ. ನಮ್ಮ ಅಪ್ಪಂದಿರ ಅಟ್ಲಾಸ್ ಸೈಕಲ್ ನಲ್ಲಿ ಕಾಲುಗಳು ಚಕ್ರಕ್ಕೆ ಸಿಲುಕಿ ಬೀಳಬಹುದೆನ್ನುವ ಭೀತಿಯಿಂದ ದೂರಕ್ಕಿಟ್ಟು ಸೀಟಿನ ಹಿಂಬದಿಯ ಕಬ್ಬಿಣದ ತುಂಡನ್ನು ಗಟ್ಟಿ ಮುಷ್ಟಿಯಲ್ಲಿ ಹಿಡಿದುಕೊಂಡು ಕೂರುವ ಬಾಲ್ಯ ಎಷ್ಟು ಚೆಂದ ಅಲ್ವಾ ? ಪೆಡಲ್ ಗಳಿಂದ ಬರುವ ಶಬ್ದ ಎಂದೂ ಕಿರಿ ಕಿರಿ ಅನ್ನಿಸಲೇ ಇಲ್ಲ. ಮನೆಯ ಪಕ್ಕ ಬಂದಾಗ ಟ್ರಿಣ್ ಟ್ರಿಣ್ ಬೆಲ್ ಒತ್ತುತ್ತಾ ದೂರದಿಂದಲೇ ಹೆಂಡತಿಗೆ ತಾನು ಬಂದೆ ಬಿಸಿ ನೀರಿಡು ಎನ್ನುವ ಸೂಚನೆ ನೀಡುವ ಅಪ್ಪ, ಓಡುತ್ತಾ ಹೋಗಿ ತಿಂಡಿಯ ಪೊಟ್ಟಣ ಕಸಿದು ಥಟ್ಟನೆ ರೂಮ್ ಯೊಳಗೆ ಹೋಗುವ ಪುಟ್ಟ ಮಾಣಿ. ಸೈಕಲ್ ಉಳಿಸಿ ಹೋದ ನೆನಪುಗಳೆಷ್ಟೋ.
ನಮ್ಮ ಮನೆಯ ಮೊದಲ ಸೈಕಲ್ ಅಪ್ಪನದು. ಅದು ಅಟ್ಲಾಸ್ ಇರಬಹುದು. ಅಂದಿನ ದಿನಗಳಲ್ಲಿ ಬಹುತೇಕರ ಮನೆಯಲ್ಲಿ ಇದ್ದ ಅಟ್ಲಾಸ್ ಸೈಕಲ್ ನಮ್ಮ ಮನೆಯಲ್ಲೂ ಇತ್ತು. ಸೈಕಲ್ ಗಂಡು ಮಕ್ಕಳ ಗತ್ತಿಗೂ ಸಾಕ್ಷ್ಯ ಆಗಿತ್ತು. ಅಕ್ಕಪಕ್ಕದ ಊರಿಗೆ, ಮೀನಿನ ಮಾರ್ಕೆಟ್ ಗೆ, ಕಳೆದ ವಾರ ಕೊಟ್ಟ ಗೋಧಿ ಈ ವಾರ ಹಿಟ್ಟಾಗಿ ಸೈಕಲ್ ಕೇರಿಯರ್ ಹಿಂದೆ ಭಾರವಾಗಿ ಕೂತಿದೆ. ಅಪ್ಪ ಸೈಕಲ್ ಹೆಚ್ಚಾಗಿ ಬಳಸುತ್ತಿದದ್ದು ಕೆಲಸಕ್ಕೆ ಹೋಗುವಾಗ. ಪೆಡಲ್ ಗಳು ಸ್ವಾಧೀನ ಕಳೆದುಕೊಂಡು ಜೋತು ಬಿದಿದ್ದವು, ಸೈಕಲ್ ನ ಹೃದಯದಂತೆಯಿರುವ, ಆಯಿಲ್ ನಲ್ಲಿ ಮುಳುಗಿರುವ ಚೈನ್ ಗೆ ಇನ್ನೇನು ಕೊನೆಯ ದಿನಗಳು ಸಮೀಪದಲ್ಲಿದೆ ಎನ್ನುವಂತೆ ವಯಸ್ಸಾಗಿತ್ತು. ಟೈಯರ್ ಗಳೆರಡು ಕೂದಲಿಲ್ಲದ ವ್ಯಕ್ತಿಯ ತಲೆಯಂತೆ ಬೋಳಾಗಿ ಸವೆದು ಹೋಗಿದ್ದವು, ಬ್ರೇಕ್ ಗಳಿಗೂ ಥಟ್ಟನೆ ನಿಲ್ಲದ ತ್ರಾಣ. ಇವೆಲ್ಲವೂ ಅಪ್ಪನಿಗೆ ಗೊತ್ತಿತ್ತು. ಆದ್ರು ಯಾಕೆ ಅಪ್ಪ ಅದೇ ಸೈಕಲ್ ನಲ್ಲಿ ತಿರುಗುತ್ತಾರೆ ಎನ್ನುವುದು ನನ್ನ ಬಾಲ್ಯಕ್ಕೆ ಉತ್ತರ ಸಿಗಲೇ ಇಲ್ಲ.
ಅಪ್ಪನ ಅಟ್ಲಾಸ್ ಸೈಕಲಿಗೆ ವಯಸ್ಸು ಮೀರಿದರು ಅಪ್ಪ ಆಗಾಗ ಅದಕ್ಕೆ ಕಾಮತ್ ಸೈಕಲ್ ಶಾಪ್ ನಲ್ಲಿ ತನ್ನ ಮಕ್ಕಳ ಆರೈಕೆ ಮಾಡುವಂತೆ ಸ್ವತಃ ತಾನೇ ಆಯಿಲ್ ಗಳನ್ನು ಹಾಕುತ್ತಾ, ಬ್ರೇಕ್ ಟೈಟ್ ಮಾಡುತ್ತಾ, ಮಕ್ಕಳ ಮುಖಕ್ಕೆ ಪೌಡರ್ ತೇಪುವಂತೆ ಸೈಕಲಿನ ಪ್ರತಿ ಅಂಗಾಂಗಳಿಗೆ ಅಲಂಕಾರ ಮಾಡುವುದನ್ನು ನಿಲ್ಲಿಸಲಿಲ್ಲ. ತಾನು ಸೆಖೆಯಲ್ಲಿ ದೇಹ ದಂಡಿಸಿದರು ಪರವಾಗಿಲ್ಲ, ದೂರದಲ್ಲಿ ನಿಂತ ತನ್ನ ಸೈಕಲ್ ಮಾತ್ರ ನೆರಳಿನ ಆಶ್ರಯವನ್ನು ಪಡೆಯಲು ಸದಾ ಆಸರೆ ಆಗುತ್ತಿದ್ದರು. ಅಪ್ಪನ ಸೈಕಲ್ ಮೋಹ ನಿಂತಿದ್ದು ಅಚಾನಕ್ಕಾಗಿ ಬಿಟ್ಟು ಕೂರುವ ಬಲವಾದ ನಿರ್ಧಾರ ಮಾಡಿದಾಗ. ಅಪ್ಪ ತನ್ನ ಮೆಚ್ಚಿನ ಸೈಕಲಿನ ಆರೋಗ್ಯ ತೀರಾ ಹದಗೆಟ್ಟು ಖರ್ಚು ವೆಚ್ಚಗಳ ಭಾರ ಕೈ ಮೀರಿ ಹೋದಾಗ ಒಲ್ಲದ ಮನಸ್ಸಿನಿಂದ ಸತ್ತ ದೇಹದ ಪೋಸ್ಟ್ ಮಾರ್ಟಮ್ ಆಗಲು ಶವಗಾರದಲ್ಲಿ ಇರಿಸಿದ ಹಾಗೆ, ತನ್ನ ಮೆಚ್ಚಿನ ಸೈಕಲನ್ನು ಗುಜರಿ ಅಂಗಡಿಯ ಬಾಗಿಲಲ್ಲಿ ಇಟ್ಟು ಬಂದರು. ಅದೇ ಕೊನೆ ಮುಂದೆ ಅಪ್ಪನ ಕಾಲಿಗೆ ಯಾವ ಸೈಕಲಿನ ಪೆಡಲ್ ಗಳು ಎಟುಕಿಲ್ಲ. ಇಂದಿಗೂ ನಡೆದುಕೊಂಡು ಹೋಗುವುದು ಹೆಚ್ಚು. ತೀರಾ ದೂರ ಕ್ರಮಿಸಲಿದ್ದರೆ, ಅನಿವಾರ್ಯವಾಗಿ ವಾಹನಗಳ ಬಳಕೆ.
ಅಪ್ಪನ ಸೈಕಲ್ ಹೋದ ಬಳಿಕ, ಎಷ್ಟೋ ವರ್ಷದ ನಂತರ ಸರ್ಕಾರದ ಕಡೆಯಿಂದ ನನಗೆ ಸಿಕ್ಕ ಸೈಕಲ್ ವೊಂದು ಅಪ್ಪನ ಹಳೆ ಸೈಕಲ್ ಮೋಹಕ್ಕೆ ಹೊಸ ಚಿಗುರು ಬಂದಿತ್ತು. ಅದೊಂದು ದಿನ ಹೇಳದೆ ಕೇಳದೆ ಅಪ್ಪ ಹೊಸ ಸೈಕಲನ್ನು ಮಗುವೊಂದಕ್ಕೆ ಮೊದಲ ಇಂಜೆಕ್ಷನ್ ನೀಡಲು ಆಸ್ಪತ್ರೆ ಕರೆದುಕೊಂಡು ಹೋದ ಹಾಗೆ, ಹೊಸ ಸೈಕಲನ್ನು ಕಾಮತ್ ಅಂಕಲ್ ನ ಅಂಗಡಿಗೆ ತಕ್ಕೊಂಡು ಹೋಗಿ ಎಲ್ಲಾ ಬಗೆಯ ಚಿಕಿತ್ಸೆ ನೀಡಿ ರಿಫಿಟ್ ಮಾಡಿ ತಂದಿದ್ದರು. ಅಪ್ಪನ ಸೈಕಲ್ ಹುಚ್ಚು ಅದೇಗೋ ಮತ್ತೆ ದಿನ ಕಳೆದಂತೆ ಬೆಳೆಯಲು ಶುರು ಆಯಿತು. ಮಗುವಿನ ಹಾಗೆ ಆರೈಕೆ ಮಾಡುತ್ತಾ, ಜೋಪಾನವಾಗಿ ಆಸರೆ ನೀಡುತ್ತಾ ಅಪ್ಪ ನೋಡಿಕೊಂಡ ಸೈಕಲ್ ನನ್ನಿಂದ ಬದಿಗೆ ಸರಿಯಿತು.
ಇವತ್ತು ನಮ್ಮ ಮನೆಯಲ್ಲಿ ಸೈಕಲ್ ಇಲ್ಲ. ಎರಡು ಸರಳುಗಳ ನಡುವೆ ಅಡ್ಡ ಕಾಲುಗಳನ್ನು ಹಾಕಿ, ಬಿದ್ದು ಗಾಯ ಮಾಡಿಕೊಳ್ಳುವ ಹಾಗಿನ ಮಕ್ಕಳು ಎಲ್ಲೂ ಮೊಬೈಲ್ ಲೋಕದ ಮಾಯೆಯಲ್ಲಿ ಬಂಧಿಯಾಗಿದ್ದಾರೆ. ಅಪ್ಪನಿಗೆ ಸೈಕಲ್ ಸರ್ವಸ್ವ ಆಗಿತ್ತು. ಆ ಬಳಿಕ ಅವರು ತನಗೊಂದು ಬೈಕ್ ಅಗತ್ಯವಾಗಿ ಬೇಕಿತ್ತು ಎಂದೂ ಹೇಳಿದವರೆ ಅಲ್ಲ. ಬಹುಶಃ ಇವತ್ತು ಸೈಕಲ್ ಸಿಕ್ಕರೆ ಅಪ್ಪ ಮತ್ತೆ ಅಕ್ಕರೆಯನ್ನು ತೋರಿಸಬಹುದು.. ಊರಿಡೀ ಸುತ್ತ ಬಹುದು..
– ಸುಹಾನ್ ಶೇಕ್