Advertisement

ಕಾಲುಂಗುರ ಕಂಡು ಕಕ್ಕಾಬಿಕ್ಕಿಯಾದ ಪ್ರೇಮ ಪೂಜಾರಿ

12:30 AM Feb 26, 2019 | |

ನಾವಿಬ್ಬರೂ ಸಿನಿಮಾ ಸ್ಟೈಲ್‌ನಲ್ಲಿ ಲೇಟಾಗಿ, ತರಗತಿಗೆ ಹೋದೆವು. ಮಂಗಳಾರತಿಯ ನಂತರ ನಮ್ಮನ್ನು ಸರ್‌ ಒಳಗೆ ಬಿಟ್ಟುಕೊಂಡರು. ಸಾಗರ್‌ ತನ್ನ ಜಾಗದಲ್ಲಿ ಕುಳಿತವನೇ ತನ್ನ ಕುತ್ತಿಗೆಯನ್ನು 360 ಡಿಗ್ರಿ ತಿರುಗಿಸಿ, ಎಲ್ಲರನ್ನೂ ಸ್ಕ್ಯಾನ್‌ ಮಾಡತೊಡಗಿದ. 

Advertisement

ಸ್ನಾತಕೋತ್ತರ ಪತ್ರಿಕೋದ್ಯಮ ಪದವಿಯ ಎರಡನೆಯ ವರ್ಷದಲ್ಲಿ, ಓಪನ್‌ ಎಲೆಕ್ಟಿವ್‌ ಎಂಬ, ನಮ್ಮಿಷ್ಟದ ವಿಷಯವನ್ನು ಆರಿಸಿಕೊಳ್ಳುವ ಅವಕಾಶ ಇರುತ್ತದೆ. ಆ ವಿಷಯದ ತರಗತಿಗಳು ಪ್ರತಿ ಶನಿವಾರ ನಡೆಯುತ್ತವೆ. ನಾನು ಮತ್ತು ನನ್ನ ಸ್ನೇಹಿತ ಸಾಗರ್‌, ದೂರದ ಬೆಟ್ಟಕ್ಕಿಂತ ಹತ್ತಿರದ ಗುಡ್ಡವೇ ಲೇಸೆಂದು, ನಮ್ಮ ಜರ್ನಲಿಸಂ ಡಿಪಾರ್ಟ್‌ಮೆಂಟ್‌ ಹತ್ತಿರದಲ್ಲಿಯೇ ನಡೆಯುವ “ಸಾರ್ವಜನಿಕ ಆಡಳಿತ’ ವಿಷಯವನ್ನು ಆಯ್ಕೆ ಮಾಡಿದೆವು.

ಆವತ್ತು ನಮ್ಮ ಓಪನ್‌ಎಲೆಕ್ಟಿವ್‌ನ ಮೊದಲನೇ ತರಗತಿ. ನಾವಿಬ್ಬರೂ ಸಿನಿಮಾ ಸ್ಟೈಲ್‌ನಲ್ಲಿ ಲೇಟಾಗಿ, ತರಗತಿಗೆ ಹೋದೆವು. ಮಂಗಳಾರತಿಯ ನಂತರ ನಮ್ಮನ್ನು ಸರ್‌ ಒಳಗೆ ಬಿಟ್ಟುಕೊಂಡರು. ಸಾಗರ್‌ ತನ್ನ ಜಾಗದಲ್ಲಿ ಕುಳಿತವನೇ ತನ್ನ ಕುತ್ತಿಗೆಯನ್ನು 360 ಡಿಗ್ರಿ ತಿರುಗಿಸಿ, ಎಲ್ಲರನ್ನೂ ಸ್ಕ್ಯಾನ್‌ ಮಾಡತೊಡಗಿದ. ಅದನ್ನು ಗಮನಿಸಿದ ಸರ್‌, “ನೀವು ಬಂದಿರೋದೇ ಲೇಟು. ಈಗ ಪಾಠ ಕೇಳ್ಳೋದು ಬಿಟ್ಟು ಆ ಕಡೆ, ಈ ಕಡೆ ಏನ್‌ ನೋಡ್ತಾ ಇದ್ದೀರ?’ ಎಂದು ಅವನನ್ನು ನಿಲ್ಲಿಸಿ ಕೇಳಿದರು. ಅದಕ್ಕೆ ಪ್ರತ್ಯುತ್ತರವಾಗಿ ಆತ, “ನನ್ನ ಸ್ನೇಹಿತನೊಬ್ಬ ಬರ್ತೀನಿ ಅಂದಿದ್ದ ಸಾರ್‌. ಎಲ್ಲಿ ಕೂತಿದಾನೆ ಅಂತ ಹುಡುಕ್ತಾ ಇದೀನಿ’ ಎಂದು ತಲೆಹರಟೆಯ ಉತ್ತರ ನೀಡಿ ಎಲ್ಲರನ್ನೂ ನಗಿಸಿದ. ನಾನು ಅವನ ಕೈ ತಿವಿದು, ಯಾರೋ ಅದು ಅಂತ ಕೇಳಿದೆ. “ಯಾರೂ ಇಲ್ಲ ಬಿಡೋ. ಬೇರೆ ಬೇರೆ ಡಿಪಾರ್ಟ್‌ಮೆಂಟ್‌ನ ಹುಡುಗೀರು ಬಂದಿದ್ದಾರಲ್ಲ, ಯಾವ ಹುಡುಗಿ ಚೆನ್ನಾಗಿದಾಳೆ ಅಂತ ನೋಡ್ತಾ ಇದೀನಿ’ ಅಂತ ಪಿಸುಗುಟ್ಟಿದ. ಸರಿಯಾಗಿ ಅದೇ ಸಮಯಕ್ಕೆ, “ಮೇ ಐ ಕಮ್‌ ಇನ್‌’ ಎಂಬ ಕೋಗಿಲೆ ಕಂಠ ಬಾಗಿಲಿನ ಕಡೆಯಿಂದ ಬಂತು. ಎಲ್ಲರೂ ಅವಳತ್ತಲೇ ನೋಡಿದರು. ಆ ಚಂದದ ಹುಡುಗಿ ಒಳಗೆ ಬಂದವಳೇ ನಮ್ಮ ಮುಂದಿನ ಸಾಲಿನಲ್ಲೇ ಬಂದು ಕುಳಿತಳು. ಅವಳನ್ನೇ ನೋಡುತ್ತಾ ಮೊದಲ ಶನಿವಾರದ ಕ್ಲಾಸ್‌ ಮುಗಿದೇ ಹೋಯ್ತು. 

ಅವಳನ್ನು ನೋಡಿದ ದಿನದಿಂದ ನಮ್ಮ ಸಾಗರ್‌ ಮಾತೆತ್ತಿದರೆ ಅವಳ ಗುಣಗಾನ ಮಾಡುತ್ತಿದ್ದ. ಅಷ್ಟರಲ್ಲಿ ವಾರ ಕಳೆಯಿತು. ಅವಳನ್ನು ನೋಡುವ ಕುತೂಹಲ,ಉತ್ಸಾಹದಿಂದ ಸರ್‌ ಬರುವುದಕ್ಕಿಂತ ಮುಂಚಿತವಾಗಿಯೇ ತರಗತಿಯಲ್ಲಿ ಹಾಜರಿದ್ದೆವು. ಬೇಗ ಹೋದರೆ, ಅವಳ ಸಮೀಪದ ಸಾಲಿನಲ್ಲಿ ಕುಳಿತುಕೊಳ್ಳುವ ಆಸೆ ಸಾಗರ್‌ಗೆ. ಮನದಲ್ಲಿ ನೆನೆದಂತೆ ಆಕೆ ಕ್ಲಾಸಿಗೆ ಎಂಟ್ರಿ ನೀಡಿದಳು. ನಮಗೇ ಗೊತ್ತಿಲ್ಲದ ಹಾಗೆ ನಮ್ಮ ಮುಖದಲ್ಲಿ ನಗು ಅರಳಿತು. ನಾವು ಬಯಸಿದಂತೆ ಅವಳು ನಮ್ಮ ಪಕ್ಕದಲ್ಲೇ ಕುಳಿತುಬಿಟ್ಟಳು. ಸಾಗರ್‌ “ಹಾಯ್‌’ ಎನ್ನುತ್ತ, “ನೀವು ಹಿಂದಿನ ಶನಿವಾರ ಲೇಟಾಗಿ ಕ್ಲಾಸಿಗೆ ಬಂದಿದ್ರಲ್ಲ? ನೀವು ಬರುವುದಕ್ಕೂ ಮುಂಚೆಯೇ ಸಿಲಬಸ್‌ ಬರೆಸಿದ್ದರು. ನೀವು ಬರೆದುಕೊಂಡಿದ್ದೀರ?’ ಎಂದು ಕೇಳುತ್ತಲೇ ಆಕೆಯ ಪರಿಚಯ ಮಾಡಿಕೊಂಡ. ನಂತರ ಸಿಲಬಸ್‌ ನೀಡುವ ನೆಪದಲ್ಲಿ ಸ್ನೇಹ ಹಸ್ತ ಚಾಚಿದ. ಅವಳು ಕೂಡ ನಗುತ್ತಲೇ ಮಾತಾಡಿದ್ದಕ್ಕೆ ಸಾಗರ್‌, ಕೈಗೆ ನಕ್ಷತ್ರವೇ ಸಿಕ್ಕಿದಂತೆ ಕುಣಿದಾಡಿದ. 

ಮುಂದಿನ ಶನಿವಾರಕ್ಕಾಗಿ ಕಾಯುವುದೇ ಅವನ ಕೆಲಸವಾಗಿಬಿಟ್ಟಿತು. ಮೂರನೇ ಶನಿವಾರವೂ ಆಕೆ ಎಂದಿನಂತೆ ಮಲ್ಲಿಗೆ ಹೂ ಮುಡಿದು, ಹಸಿರು ಸೀರೆಯಟ್ಟು, ಹಣೆಗೆ ಸಿಂಧೂರ, ಕಾಲಿಗೆ ಶೂ ಧರಿಸಿ, ಕೋಲ್ಮಿಂಚಿನಂತೆ ಕ್ಲಾಸ್‌ಗೆ ಬಂದಳು. ಹಿಂದಿನ ತರಗತಿಯಲ್ಲಿ ಪರಿಚಯವಿದ್ದ ಕಾರಣ ಸಲಿಗೆಯಿಂದ ನಮ್ಮೊಡನೆ ಮಾತನಾಡಿದಳು. ಸಾಗರ್‌, ಅವಳ ಮೊಬೈಲ್‌ ನಂಬರ್‌ಅನ್ನೂ ಕೇಳಿ ಪಡೆದುಕೊಂಡ. ವಾಟ್ಸಾಪ್‌ನಲ್ಲಿ ಹಾಯ್‌, ಗುಡ್‌ ಮಾರ್ನಿಂಗ್‌, ಗುಡ್‌ ನೈಟ್‌ಗಳು ಹರಿದಾಡತೊಡಗಿತು. ದಿನದಿನಕ್ಕೆ ಆಕೆ ತನಗೆ ಹತ್ತಿರವಾಗುತ್ತಿದ್ದಾಳೆ ಎಂದು ಕನಸು ಕಾಣತೊಡಗಿದ. ಪ್ರತಿ ಶನಿವಾರವೂ, ಅವಳಿಗಾಗಿ ಮದುವೆಗಂಡಿನ ಹಾಗೆ ರೆಡಿಯಾಗುತ್ತಿದ್ದ. ಐದ‌ನೆ ಶನಿವಾರ ಅವಳು ತರಗತಿಗೆ ಬರಲಿಲ್ಲ. ಅದೇ ಕಾರಣಕ್ಕೆ ನಮ್ಮ ಹುಡುಗನಿಗೆ ತಳಮಳ, ಕಳವಳ ಎಲ್ಲ ಆಗಿ, ಮಧ್ಯಾಹ್ನ ಊಟವನ್ನೇ ಮಾಡಲಿಲ್ಲ. ಅವಳಿಗಾಗಿ ವಾರವಿಡೀ ಚಡಪಡಿಸಿದ.

Advertisement

ಆರನೆಯ ಶನಿವಾರದಂದು ಅವಳು ತರಗತಿಗೆ ಕುಂಟುತ್ತಾ ಬಂದಳು. ಸಾಗರ್‌ ಆತಂಕದಿಂದ, “ಅಯ್ಯೋ ಕಾಲಿಗೆ ಏನಾಯ್ತು?’ ಅಂತ ಕೇಳಿದ. “ಗಾಡಿಯಲ್ಲಿ ಹೋಗುತ್ತಿರುವಾಗ ಸ್ಕಿಡ್‌ ಆಗಿ ಬಿದ್ದೆ. ಕಾಲಿಗೆ ಸ್ವಲ್ಪ ಪೆಟ್ಟಾಗಿದೆ’ ಎಂದಾಗಲೇ ಇವನು ಅವಳ ಕಾಲಿನತ್ತ ನೋಡಿದ್ದು. ಮರುಕ್ಷಣವೇ ಸಿಡಿಲು ಬಡಿದಂತೆ, ಹೃದಯ ಬಡಿತ ಸ್ಥಗಿತಗೊಂಡಂತೆ ಪೆಚ್ಚಾಗಿ ನಿಂತು ಬಿಟ್ಟ. ಐದು ವಾರಗಳಿಂದ ಅವಳ ಜಪದಲ್ಲಿಯೇ ಕಳೆದಿದ್ದ ನಮ್ಮ ಪ್ರೇಮ ಪೂಜಾರಿಗೆ ಆರನೇ ವಾರ ಅವಳ ಕಾಲುಂಗುರದ ದರ್ಶನವಾಗಿತ್ತು. ಆತ ಮೂರ್ಛೆ ಹೋಗುವುದೊಂದು ಬಾಕಿ. 

ಕಿರಣ್‌ ಕುಮಾರ್‌.ಆರ್‌ ಸತ್ತೇಗಾಲ, ಮೈಸೂರು 

Advertisement

Udayavani is now on Telegram. Click here to join our channel and stay updated with the latest news.

Next