ಕತ್ತಲೆಯನ್ನು ಹೋಗಲಾಡಿಸುವಂತಹದ್ದು ಎಂಬರ್ಥ ಕೂಡ ಇದೆ. ಜೀವನದ, ಮನದ ಎಲ್ಲಾ ಋಣಾತ್ಮಕ ಅಂಶಗಳನ್ನು ಹೋಗಲಾಡಿಸಲು ದೀಪ ಬೆಳಗುತ್ತೇವೆ. ಕೊರೊನಾ ಸೋಂಕು ಎಲ್ಲೆಡೆ ಹಬ್ಬಿರುವುದರಿಂದ ಆಚರಣೆಯ ಆಡಂಬರ ಸ್ವಲ್ಪ ಕಡಿಮೆ ಇರಬಹುದು ಆದರೆ ಮನಸ್ಸಿನಲ್ಲಿ ಭಕ್ತಿ ಎಂದಿನಂತೆಯೇ ಮುಂದುವರೆಯಲಿದೆ. ಎಲ್ಲರೂ ಖುಷಿಯಾಗಿ ಆಚರಿಸುವಂತಹ ಹಬ್ಬವಿದು. ದೀಪಾವಳಿ ಎಂದರೇನೆ ಸಡಗರ, ದೀಪಾವಳಿ ಎಂದರೇನೆ ನೆನಪಿನ ಬುತ್ತಿಯ ಖುಷಿಯ ಚಿತ್ತಾರ, ದೀಪಾವಳಿ ಎಂದರೇನೆ ಭಕ್ತಿ ಭಾವದ ಸಂಭ್ರಮ.
ದೀಪಗಳ ತುದಿ ಸರ್ವತೋಮುಖವಾಗಿದೆ, ದೀಪ ಹಚ್ಚಿದರೆ ಸುತ್ತಲೂ ಬೆಳಗುತ್ತದೆ.ಆದರೆ ದೀಪದ ಗಮನ ಊರ್ಧ್ವಮುಖವಾಗಿರುತ್ತದೆ. ಅಂದರೆ ದೀಪ ಬೆಳಗುವ ಮನುಷ್ಯನ ಮನಸ್ಸು ಕೂಡ ಸದಾ ಊರ್ಧ್ವಗಾಮಿಯಾಗಿರಬೇಕು, ಮನುಷ್ಯ ಸದಾ ಇತಿಮಿತಿಗಳನ್ನು ಮೀರಿ ದೀಪದಂತೆ ಮೇಲಕ್ಕೆ ಬೆಳಗುತ್ತಾ ಹೋಗಬೇಕು
ಭಾರತದ ಬೇರೆ ಬೇರೆ ಪ್ರದೇಶಗಳಲ್ಲಿ ದೀಪಾವಳಿಗೆ ಅದರದ್ದೇ ಆದ ಮಹತ್ವವಿದೆ ಹಾಗೂ ಅವರದ್ದೇ ಆದ ಕೆಲವು ಸಂಪ್ರದಾಯಗಳು ಇರುತ್ತದೆ. ಕೆಲವರು ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ತಮ್ಮ ಹಬ್ಬವನ್ನು ಆಚರಿಸುತ್ತಾರೆ. ಆದರೆ ಎಲ್ಲರ ಪ್ರಕಾರ ದೀಪಾವಳಿ ಹಬ್ಬ ರಾಮಾಯಣದ ಕಥೆಗೆ ಹೊಂದಿಕೊಂಡಿದೆ.ರಾವಣನನ್ನು ಸಂಹಾರ ಮಾಡಿ ರಾಮ, ಸೀತಾ, ಲಕ್ಷ್ಮಣ ಹಾಗೂ ಹನುಮಂತ ಲಂಕೆಯಿಂದ ಆಯೋಧ್ಯೆಗೆ ಹಿಂದಿರುಗಿದ ದಿನ. ಅಲ್ಲದೇ ರಾಮ ಪಟ್ಟಾಭಿಷೇಕಗೊಂಡ ದಿನ. ಹಾಗಾಗಿ ಜನರು ಆ ದಿನ ಆನಂದದಿಂದ ದೀಪಗಳನ್ನು ಬೆಳಗಿಸಿ ರಾಮನನ್ನು ಸ್ವಾಗತಿಸಿದ್ದರು. ಅಲ್ಲದೇ ಪಾಂಡವರು ಕೂಡ ಅದೇ ದಿನ ತಮ್ಮ ಅಜ್ಞಾತ ವಾಸವನ್ನು ಮುಗಿಸಿದ ದಿನ ಎನ್ನುವ ಕಥೆಯು ಇದೆ.
ಇದನ್ನೂ ಓದಿ:ಆಗಮಿಸುವ ಬಲೀಂದ್ರನಿಗೆ ಸೊಡರ ಆರತಿ; ಗೋಪೂಜೆಯ ಮಹತ್ವ
ದೀಪಾವಳಿ ಬಂತೆಂದರೆ ಅದೆಂಥ ಸಂಭ್ರಮ, ಊರ ಹಬ್ಬಕ್ಕಿಂತಾ ಗಮ್ಮತ್ತು. ದೊಡ್ಡ ದೊಡ್ಡ ಪಟಾಕಿ, ಹೊಸ ಹೊಸ ಬಟ್ಟೆಯ ಇಂದಿನ ಈ ಸಂಭ್ರಮ ಇದೆಲ್ಲ ನಾವು ನೋಡಿದ ನೆನಪಿಲ್ಲ. ಬಾಲ್ಯದ ದೀಪಾವಳಿ ಬಡತನದಲ್ಲಿ ಕಳೆದರೂ ಇದ್ದುದರಲ್ಲಿ ಅದೆಷ್ಟು ಶ್ರೀಮಂತಿಕೆ ಕಂಡ ಸಂಭ್ರಮ, ಪಟಾಕಿ ಕೊಂಡ ದಿನದಿಂದಲೂ ಪ್ರತೀದಿನ ಎಂಬಂತೆ, ನಮ್ಮಲ್ಲಿ ಇರುವ ಐದೋ ಆರೋ ರೂಪಾಯಿಯ ಪಟಾಕಿಗಳ ಖಜಾನೆಯನ್ನು ಪದೇಪದೇ ಕೈಯ್ಯಲ್ಲಿ ಹಿಡಿದು ನಾವು ಪರೀಕ್ಷಿಸುತ್ತಾ ಇರುತ್ತಿದ್ದುದರಿಂದ ನಮ್ಮ ಕೈಗಳು ದೀಪಾವಳಿಯ ಸಮಯ ಸದಾ ಪಟಾಕಿಯದೇ ಪರಿಮಳ.
ವರ್ಷ ಇಡೀ ದೀಪಾವಳಿಯ ಕನಸು ಕಾಣುತ್ತಾ ಪಟಾಕಿಯ ಬಗ್ಗೆಯೇ ಪುಡಿಕಾಸು ಸಂಗ್ರಹಿಸಿ ಒಟ್ಟು ಹಾಕಿಟ್ಟ ನಮ್ಮ ಸೇವಿಂಗ್ಸ್ ಡಬ್ಬದ ಹಣವನ್ನು ಪೂರ್ತಾ ಬಳಸಿ, ದೀಪಾವಳಿಗೆ ಇನ್ನೂಒಂದು ವಾರ ಇದೆ -ಅನ್ನುವಾಗಲೇನಾವು ನಮ್ಮ ಪಟಾಕಿಗಳನ್ನು ಕೊಳ್ಳುತ್ತಾ ಇದ್ದೆವು. ಹೀಗೆ ಬಹಳ ಅಳೆದು ತೂಗಿ ತುಂಬಾ ಚೌಕಾಸಿ ಮಾಡಿಕೊಂಡ ವಿವಿಧರೀತಿಯ ಪಟಾಕಿಗಳನ್ನು ನಮ್ಮ ಶಾಲಾ ಪುಸ್ತಕಗಳ ಕಪಾಟಿನಲ್ಲೇ ಇಟ್ಟುಕೊಂಡು ಪದೇ ಪದೇ ಅವನ್ನು ಕೈಯ್ಯಲ್ಲಿ ಹಿಡಿದು ಅವುಗಳ ಅಂದ ಚಂದವನ್ನು ನೋಡಿ ಆನಂದಿಸುತ್ತಾ ಇದ್ದೆವು.
ದೊಡ್ಡವರು ನಮ್ಮ ಈ ಪಟಾಕಿ ಗೀಳಿನ ಬಗ್ಗೆ ನಮ್ಮನ್ನು ಬಯ್ಯುತ್ತಿದ್ದರು. ಕೆಲವೊಮ್ಮೆ ನಮ್ಮಅಕ್ಕಂದಿರು ನಮ್ಮನ್ನುಈ ಬಗ್ಗೆ ಲೇವಡಿ ಮಾಡುತ್ತಾ ಇದ್ದರು. ಆ ಬಗೆಯಸಿಕ್ಕ ಪುಟ್ಟ ಸಂಗತಿಗಳ ಕುರಿತು ನಾವ್ಯಾರೂ ಚಿಂತೆ ಮಾಡುತ್ತಾ ಇರಲಿಲ್ಲ. ಹರಕೆಯ ಹಣ ಉಳಿತಾಯ ಆದರೂ, ಈ ಮಳೆಯು ನಮ್ಮ ಮನಸ್ಸನ್ನು ಮುದುಡಿಸಿಯೇ ಬಿಡುತ್ತಿತ್ತು. ಮಕ್ಕಳಾದ ನಮಗೆ ಬೇಡದೇ ಇದ್ದ ಈ ಮಳೆಯು ಉಂಟು ಮಾಡಿದ ಚಂಡಿ ನೆಲ ಮತ್ತುಆರ್ದ್ರ ವಾತಾವರಣದಲ್ಲಿ ನಮ್ಮಅತ್ಯಮೂಲ್ಯ ಪಟಾಕಿಗಳನ್ನು ಸುಡಲು ನಾವು ಅಂಜುತ್ತಿದ್ದೆವು. ಅಷ್ಟು ಕಷ್ಟಪಟ್ಟು ಕೊಂಡ ನಮ್ಮ ಪಟಾಕಿ ಟುಸ್ ಎಂದರೆ ನಮಗಾಗುವ ನಿರಾಸೆ ಎಷ್ಟೆಂದು ನೀವೇ ಯೋಚಿಸಿ ಹೇಳಿ.
ಆ ದಿನ ದೀಪಾವಳಿಯ ಮುಂಜಾನೆ ಮುಂಜಾನೆ ಎದ್ದ ಮಕ್ಕಳ ಮೈಗೆಲ್ಲ ಎಣ್ಣೆ ಎರೆದು ಉಜ್ಜಿ ತಪ್ಪಿಸಿಕೊಂಡು ಓಡುವವರನ್ನ ಹಿಡಿದು ಬಚ್ಚಲು ಮನೆಯಲ್ಲಿ ಹಿಂದಿನ ದಿನ ರಾತ್ರಿ ಬೂದ್ ನೀರ ಹಬ್ಬ ಮಾಡಿ ನೀರು ತುಂಬಿಸಿದ್ದ ಹರಿಯಲ್ಲಿ ಕಾಯಿಸಿಟ್ಟ ಬಿಸಿ ಬಿಸಿ ನೀರನ್ನು ಎರೆದು ಸ್ನಾನ ಮಾಡಿಸಿದಾಗ ಮೈ ಮನಸ್ಸೆಲ್ಲಾ ಹೊಸ ಉಲ್ಲಾಸ ಅದೇ ದೀಪಾವಳಿಯ ಆರಂಭ.
ಆಕರ್ಷ ಆರಿಗ
ದ್ವಿತೀಯ ವರ್ಷದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಮ್ ಸ್ನಾತಕೋತ್ತರ ಕೇಂದ್ರ, ಉಜಿರೆ