ನೀನೊಂದು ಸುಂದರ ಸ್ವಪ್ನ. ನಿನ್ನೊಂದಿಗೆಕಳೆದಕ್ಷಣಗಳು ಜೀವನದಲ್ಲಿ ಎಂದಿಗೂ ಮರೆಯಲಾರದಂತಹವು. ಆ ದಿನಗಳ ಲವಲವಿಕೆ- ಚೈತನ್ಯ ಹೇಳತೀರದು. ನಿನ್ನ ಧ್ವನಿಯೊಂದೇ ಸಾಕಾಗಿತ್ತು, ಮನಸ್ಸು ರಿಚಾರ್ಜ್ ಆಗಲು. ಹಲವಾರು ಕಲ್ಪನೆಗಳನ್ನು, ಕನಸುಗಳನ್ನು ಹುಟ್ಟುಹಾಕಿದ್ದ ಸ್ವಪ್ನಸುಂದರಿ ನೀನು.
ಬದುಕಿನ ವಿವಿಧ ಮಜಲುಗಳಲ್ಲಿ ನಿನ್ನದೊಂದು ಪಾತ್ರವನ್ನು ಸೃಷ್ಟಿಸಿಕೊಡಲೇಬೇಕು ಎಂದು ಆ ಭಗವಂತನಲ್ಲಿ ಬೇಡಿಕೊಂಡ ದಿನಗಳು ಹಲವಾರು. ಆ ಮನಸ್ಥಿತಿ ರೂಪಿತವಾದದ್ದು ನಿನ್ನಿಂದಲೇ.ಕಾಣದ ದಿನಗಳಿಗೆ ಹಲವು ಬಣ್ಣಗಳನ್ನು ಎರಚಿ ರಂಗುರಂಗಿನ ರಂಗೋಲಿಯನ್ನು ರಚಿಸಿ,ಕಲ್ಪನೆಗಳ ಕಾರ್ಮೋಡವನ್ನು ಸೃಷ್ಟಿಸಿದವಳು ನೀನು. ನಾವಂದುಕೊಂಡಂತೆ ಜಗತ್ತು ಇದ್ದಿದ್ದರೆ ಅದೆಷ್ಟೋ ಚೆನ್ನಾಗಿರುತ್ತಿತ್ತು. ಆದರೆ ಬಯಸಿದ್ದೇ ಬದುಕಾಗಳು ಸಾಧ್ಯವೇ?
ಕೆಲವೊಮ್ಮೆ ನಮ್ಮ ಬದುಕಿಗೆ ಮತ್ಯಾರೋ ಹೇಳದೇಕೇಳದೆ ಬಂದುಬಿಡುತ್ತಾರೆ. ಅವರ ಖುಷಿಗಾಗಿ ನಮ್ಮ ಸಂಭ್ರಮವನ್ನೇ ಬಲಿಕೊಡಬೇಕಾಗುತ್ತದೆ. ಇಷ್ಟವಿಲ್ಲದಿದ್ದರೂ ನಾವು ನೋವನ್ನು ಸ್ವೀಕರಿಸಲೇಬೇಕಾದ ಸಂದರ್ಭ ಬಂದುಬಿಡುತ್ತದೆ. ನಿನ್ನ ಜೊತೆಗಿನ ಬದುಕುವ ವಿಷಯವಾಗಿ ನೂರಲ್ಲ, ಸಾವಿರಕನಸುಕಟ್ಟಿಕೊಂಡಿದ್ದವ ನಾನು. ಅಂಥವನಿಗೂ ಅನ್ಯಾಯವಾಗಿಹೋಯಿತಲ್ಲ… ಇರಲಿ ಬಿಡು, ಈಗ ಆಗಿರುವುದಕ್ಕೆಲ್ಲಾ ನೀನೇ ಕಾರಣ ಎಂದು ನಾನು ಹೇಳುವುದಿಲ್ಲ. ಇನ್ಯಾವತ್ತೂ ನೀನು ನನಗೆ ಸಿಗುವುದಿಲ್ಲ ಎಂದು ಗೊತ್ತಾದ ನಂತರವೂ ನಿನ್ನನ್ನು ನಾನು ಜರಿಯುವುದಿಲ್ಲ. ಟೀಕಿಸುವುದಿಲ್ಲ. ಬೇರೆಯವರ ಸಂತೋಷಕ್ಕಾಗಿ ನೀನೂ ನೋವು ಸ್ವೀಕರಿಸಿದೆ. ಅದರ ಮುಂದಿನ ಭಾಗವೆಂಬಂತೆ ನನ್ನಿಂದ ದೂರವಾದೆ. ಅದು ನನಗಾದ ಅನ್ಯಾಯವೆಂದು ನಾನೇಕೆ ಹೇಳಲಿ..? ನೀನು ನನಗಿಷ್ಟವಾದ ಮೇಲೆ, ನಿನ್ನ ನಿರ್ಧಾರಗಳೂ ನನಗೆ ಇಷ್ಟವೇ. ನಿನ್ನ ಯಾವುದೇ ನಿರ್ಧಾರಕ್ಕೆ ನನ್ನ ಸಮ್ಮತಿ ಇದ್ದೇ ಇರುತ್ತದೆ. ನಮ್ಮಿಬ್ಬರ ಅಗಲಿಕೆ ನಿನ್ನ ಮನದೊಳಗೆ ಅದೆಷ್ಟು ನೋವುಗಳನ್ನು ಹುಟ್ಟಿಸಿತೋ ನಾ ಅರಿಯೆ. ಆದರೆಊಹೆಗೂ ಮೀರಿದ ನೋವು ನಿನಗಾಗಿದೆ ಎಂಬುದು ಮಾತ್ರ ಸತ್ಯ. ನನ್ನ ಬಾಳಿಂದ ನೀನು ಮರೆಯಾದರೂ ನಿನ್ನ ನೆನಪುಗಳ ನೆರಳು ಎಂದಿಗೂ ಮರೆಯಾಗುವುದಿಲ್ಲ. ಈ ಕ್ಷಣಕ್ಕೆ ಅದಷ್ಟೇ ಸತ್ಯ.
– ವೆಂಕಟೇಶ ಚಾಗಿ