Advertisement
ಡೈರಿಯನ್ನು ಸವರಿದವಳ ಮನ ವರುಷಗಳ ಹಿಂದೆ ಓಡಿತ್ತು. ನೆನಪುಗಳೆಲ್ಲ ಮನದ ಕದ ತಟ್ಟಲು ಶುರುಮಾ ಡಿದ್ದವು. ಪುಸ್ತಕದ ಪುಟಗಳನ್ನು ತಿರುವುತ್ತಾ ಹೋದವಳಿಗೆ ತೀರಾ ಹಳೆಯದಾಗಿದ್ದ ನೂರರ ನೋಟೊಂದು ಪುಟಕ್ಕಂಟಿಕೊಂಡು ಕೂತದ್ದು ನೋಡಿ, ತಾನು ಹುಡುಕುತ್ತಿದ್ದ ವಸ್ತುವನ್ನೇ ಮರೆತವಳ ಮನ ಹಳೆಯ ನೆನಪಿನಂಗಳಕ್ಕೆ ಕಾಲಿಡಲು ತಯಾರಾಗಿತ್ತು.
Related Articles
Advertisement
ಅಂತೂ ಇಂತೂ ಬಸ್ ಸ್ಟಾಂಡ್ ತಲುಪಿದರೂ ಕೂಡ ಎಲ್ಲವೂ ಹೊಸದೇ ಆಕೆಗೆ. ವಿಂಡೋ ಸೀಟ್‌ನಲ್ಲಿ ಕೂತು ಕಿಟಕಿಯ ಹೊರಗಡೆ ಕಣ್ಣು ಹಾಯಿಸಿದವಳಿಗೆ ಎಲ್ಲವೂ ವಿಸ್ಮಯವೇ. ಕೇವಲ ವಾಹನ ಮತ್ತು ಗಗನದಂಚಿನವರೆಗಿದ್ದ ಕಟ್ಟಡ ಕಂಡ ಆ ಪುಟ್ಟ ಕಂಗಳಿಗೆ ಮನ ಮುದಗೊಳಿಸುವ ನಿಸರ್ಗದ ದರ್ಶನವಾಗಿತ್ತು. ಟಾರ್‌ನೆಲದಲ್ಲಿ ನಡೆದಿದ್ದ ಆ ಪುಟ್ಟ ಪಾದಗಳಿಗೆ ಮಣ್ಣಿನ ಸ್ಪರ್ಶ ದೊರಕಿತ್ತು.
ಊರು ತಲುಪಿದ ಅನಂತರ ದಾರಿಯುದ್ದಕ್ಕೂ ತೀರಾ ಪರಿಚಯದವರೆಂಬಂತೆ ಮಾತಾಡುತ್ತಿದ್ದ ಜನರನ್ನು ಕಂಡು ಕಣ್ಣರಳಿಸಿದ್ದಳು. ಪಾರ್ಕ್‌ಗಳಲ್ಲಿ ವಾಕ್ ಮಾಡುವ ನಾಯಿಗಳನ್ನು ನೋಡಿದ್ದ ಆಕೆಗೆ ಹಸು ತೊಳೆಯುತ್ತಿದ್ದವರನ್ನು ಕಂಡು ಅಚ್ಚರಿಯಾಗಿತ್ತು! ಅಲ್ಲೇ ಕೆರೆಯಲ್ಲಿ ಯಾವ ಭಯವಿಲ್ಲದೆ ಈಜಾಡುತ್ತಿದ್ದ ಮಕ್ಕಳನ್ನು ಕಂಡವಳು ತನ್ನಮ್ಮನ ಬಳಿ “ಅಮ್ಮಾ ಅದು ಸ್ವಿಮ್ಮಿಂಗ್ ಪೂಲ್ ಅಲ್ವಾ?’ ಎಂದು ಕೇಳಿದಾಗ ಮಗಳ ಮಾತಿಗೆ ನಸು ನಗುತ್ತಲೇ “ಹೌದು’ ಎಂದಿದ್ದರು. ಅಲ್ಲಿಂದ ಅಜ್ಜಿಮನೆಯೆದುರು ಬಂದು ನಿಂತಾಗ ಹೊಸ ಲೋಕಕ್ಕೆ ಕಾಲಿಟ್ಟ ಅನುಭವ. ಆ ಮನೆಯ ಕಂಬಗಳೆಲ್ಲವೂ ಏನನ್ನೋ ಪಿಸುಗುಡುವಂತೆ, ಗೋಡೆಗಳಿಗೆ ತಟ್ಟಿದ್ದ ಬೆರಣಿಯೂ ತನ್ನ ಕರೆದಂತೆ, ಮಣ್ಣಿನ ಘಮಲಿಗೆ ಎಲ್ಲವೂ ಮರೆತಂತೆ, ಕೂಗುತ್ತಿರುವ ಕೋಳಿಗಳು ಕತೆ ಹೇಳುವಂತೆ ಭಾಸವಾಗಿತ್ತು ಆ ಪುಟ್ಟ ಹುಡುಗಿಗೆ.
“ಅರೆ! ನನ್ ಕೂಸು ಎಷ್ಟುದ್ದ ಆಗಿºಟ್ಟಿದೆ’ ಎನ್ನುತ್ತಾ ಅವಳನ್ನಪ್ಪಿಕೊಂಡ ಅಜ್ಜಿಯ ಅಪ್ಪುಗೆಯಲ್ಲಿ ಪ್ರೀತಿ ಮಮತೆ ಕಾಳಜಿ ವಾತ್ಸಲ್ಯವೆಲ್ಲ ತುಂಬಿ ತುಳುಕುತ್ತಿತ್ತು. ಊರಿನಲ್ಲಿರುವ ತೋಟ, ಬೆಟ್ಟ – ಗುಡ್ಡಗಳನ್ನೆಲ್ಲಾ ಸುತ್ತುತ್ತಾ, ಹೊಸದಾಗಿ ಪರಿಚಯವಾದ ಗೆಳೆಯ-ಗೆಳತಿಯರ ಜತೆಗೂಡಿ ಆಟವಾಡುತ್ತಾ, ಅಲ್ಲೆಲ್ಲೋ ಆಟವಾಡಿ ಬಿದ್ದು ಮಾಡಿಕೊಂಡ ಗಾಯ ಮಾಗುವ ಮುನ್ನವೇ ರಜೆ ಕಳೆದು, ಮತ್ತೆ ಮಾಯನಗರಿಗೆ ತೆರಳುವ ಘಳಿಗೆಯೂ ಬಂದಿತ್ತು. ಬಹಳ ಬೇಸರವಾಗಿದ್ದವಳಿಗೆ “ಮತ್ತೆ ರಜೆ ಸಿಕ್ಕಾಗ ಬಾ ಕೂಸೇ’ ಎನ್ನುತ್ತಾ ಸೆರಗಿನಂಚಿನಲ್ಲಿ ಬಚ್ಚಿಟ್ಟಿದ್ದ ನೂರರ ನೋಟೊಂದನ್ನು ಕೈಗೆ ತುರುಕಿ “ಅಮ್ಮಂಗೆ ಹೇಳ್ಬೇಡ, ಏನಾದ್ರು ತಿಂಡಿ ತಗೊಂಡು ತಿನ್ನು ಆಯ್ತಾ’ ಎಂದ ಅಜ್ಜಿಯನ್ನು ಅಪ್ಪಿಕೊಂಡು ಕಂಬನಿ ಮಿಡಿದವಳನ್ನು ಮತ್ತವಳಪ್ಪ ಹೊತ್ತುಕೊಂಡು ಹೋಗಬೇಕಾಗಿ ಬಂದಿತ್ತು. ಅಜ್ಜಿ ಕೊಟ್ಟ ನೂರರ ನೋಟು ಹದಿನೈದು ವರುಷಗಳ ಅನಂತರವೂ ಕೈಯಲ್ಲೇ ಇದೆ, ಆದರೆ ನೋಟು ಕೊಟ್ಟವರೇ ಇಲ್ಲ!.
ಮತ್ತೆ ಅಂಗೈಯೊಳಗಡೆ ಬೆಚ್ಚಗೆ ಹುದುಗಿಹೋಗಿದ್ದ ನೋಟು ಕಂಡವಳಿಗೆ ಅನಿಸಿದ್ದೊಂದೇ “ನೆನಪುಗಳಷ್ಟೇ ಶಾಶ್ವತ’.
-ಚೈತ್ರಾ
ಕೈಕಂಬ