Advertisement

ಸಂಸದರ ಪ್ರದೇಶಾಭಿವೃದ್ಧಿ ನಿಧಿ ಏತಕ್ಕೂ ಸಾಲದು

08:57 AM Jan 17, 2019 | Team Udayavani |

ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರ ಬಿಳಿಯಾನೆಯಂತಿದೆ. ಎಂಟು ವಿಧಾನಸಭಾ ಕ್ಷೇತ್ರಗಳು ವ್ಯಾಪ್ತಿಗೆ ಬರಲಿದ್ದು, 25 ಕೋಟಿ ರೂ. ಏತಕ್ಕೂ ಸಾಲದು ಎಂದು ಸಂಸದ ಬಿ.ಎನ್‌. ಚಂದ್ರಪ್ಪ ಹೇಳಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ 2014-15ನೇ ಸಾಲಿನಿಂದ 2018-19ನೇ ಸಾಲಿನ ತನಕ ಕೈಗೊಳ್ಳಲಾದ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಲ್ಪ ಅನುದಾನದಲ್ಲಿ ಯಾರನ್ನೂ ತೃಪ್ತಿ ಪಡಿಸಲು ಸಾಧ್ಯವಿಲ್ಲ. ಹಾಗಾಗಿ ಬಹುತೇಕ ಅನುದಾನವನ್ನು ಶುದ್ಧ ಕುಡಿಯುವ ನೀರಿನ ಘಟಕಗಳಿಗೆ, ಹೈಮಾಸ್ಟ್‌ ಲೈಟ್‌ಗಳಿಗೆ, ಬಸ್‌ ತಂಗುದಾಣ, ಧಾರ್ಮಿಕ ಗುರುಪೀಠಗಳ ಅಭಿವೃದ್ಧಿಗೆ, ವಿವಿಧ ಜಾತಿ, ಸಮುದಾಯಗಳಿಗೆ ಬಳಕೆ ಮಾಡಲಾಗಿದೆ ಎಂದರು.

ಪ್ರತಿ ವರ್ಷ ಐದು ಕೋಟಿ ರೂ.ನಂತೆ ಐದು ವರ್ಷಕ್ಕೆ 25 ಕೋಟಿ ರೂ.ಗಳ ಅನುದಾನ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಬರುತ್ತದೆ. ಇಲ್ಲಿಯ ತನಕ 25 ಕೋಟಿ ರೂ.ಗಳ ಕ್ರಿಯಾ ಯೋಜನೆ ಕೈಗೊಂಡು ವಿವಿಧ ಯೋಜನಾ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ. ಇಲ್ಲಿಯ ತನಕ ಒಟ್ಟು 17.50 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದ್ದು ಉಳಿದ 7.50 ಕೋಟಿ ರೂ. ಬಾಕಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕಿದೆ. ಬಾಕಿ ಅನುದಾನದಲ್ಲಿ ಮುಂದಿನ ವಾರ ಐದು ಕೋಟಿ ರೂ. ಬಿಡುಗಡೆಯಾಗಲಿದ್ದು, ಉಳಿದ 2.50 ಕೋಟಿ ರೂ. ಅನುದಾನವನ್ನು ವಿವಿಧ ಏಜೆನ್ಸಿಗಳು ಬಳಕೆ ಪ್ರಮಾಣಪತ್ರ ನೀಡಿದ ಮೇಲೆ ಬಿಡುಗಡೆಯಾಗಲಿದೆ ಎಂದು ವಿವರಿಸಿದರು.

ನಿರ್ಮಿತಿ ಕೇಂದ್ರ, ಲ್ಯಾಂಡ್‌ ಆರ್ಮಿ ಅಧಿಕಾರಿಗಳು ಮುಂದಿನ ಹತ್ತು ದಿನಗಳಲ್ಲಿ ಎಲ್ಲ ಕಾಮಗಾರಿಗಳನ್ನೂ ಪೂರ್ಣಗೊಳಿಸಬೇಕು. ತಾಂತ್ರಿಕ ಸಮಸ್ಯೆ, ನಿವೇಶನ ಸಮಸ್ಯೆ ಇದ್ದಲ್ಲಿ ಅಂತಹ ಕಡೆಯಿಂದ ಅನುದಾನ ವಾಪಸ್‌ ಪಡೆದು ಬದಲಿ ಸೂಚಿತ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳು ಮತ್ತು ಏಜೆನ್ಸಿಗಳ ಇಂಜಿನಿಯರ್‌ಗಳಿಗೆ ಸೂಚಿಸಿದರು.

Advertisement

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನಡಿ 10 ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದ ಉದ್ಯಾನವನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗುವುದು.

ಜಿಲ್ಲಾಧಿಕಾರಿಗಳ ಕಚೇರಿಗೆ ಪ್ರತಿ ನಿತ್ಯ ನೂರಾರು ಜನ ಸಾರ್ವಜನಿಕರು, ರೈತರು, ವಿವಿಧ ಬೇಡಿಕೆ ಒತ್ತಾಯಿಸಿ ಪ್ರತಿಭಟನೆ ಮಾಡಲು ಬರುವ ಹೋರಾಟಗಾರರಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಆಡಳಿತ ಕಚೇರಿ ಆವರಣದಲ್ಲಿ ಆರ್‌ಒ ಘಟಕ ಸ್ಥಾಪನೆ ಮಾಡಲಾಗುತ್ತದೆ ಎಂದರು.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಕೈಗೊಳ್ಳುವ ಕಾಮಗಾರಿಗಳಿಗೆ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಹಾಗೂ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್‌, ಸೂಚನೆ ನೀಡುವ ತನಕ ಕಾಮಗಾರಿ ಆರಂಭಿಸದಂತೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಭೂಸೇನಾ ನಿಗಮದ ಅಧಿಕಾರಿಗಳು ಸಂಸದರ ಗಮನಕ್ಕೆ ತಂದರು.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನಡಿ ಕೈಗೊಳ್ಳುವ ಕಾಮಗಾರಿಗಳಿಗೆ ಶಾಸಕರ ಒಪ್ಪಿಗೆಯ ಅಗತ್ಯವಿಲ್ಲ. ಆದರೂ ಗೊಂದಲಕ್ಕೆ ಅವಕಾಶ ನೀಡದೆ ಶಾಸಕರ ಒಪ್ಪಿಗೆ ಪಡೆದು ಕೆಲಸ ಮಾಡುವುದು ಸೂಕ್ತ ಎಂದು ಸಂಸದರು ತಿಳಿಸಿದರು.

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಮಾಹಿತಿ ಇಲ್ಲದೆ ಆಗಮಿಸಿದ ಆರ್‌ಡಿಪಿಆರ್‌ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀವು ನೀಡುವ ಅಂಕಿ ಅಂಶಗಳಿಗೂ, ಭೌತಿಕ ಪ್ರಗತಿಗೂ ಸಂಬಂಧವೇ ಇರುವುದಿಲ್ಲ. ಅಲ್ಲಿ ಕೆಲಸ ಅಪೂರ್ಣವಾಗಿದ್ದರೂ ಪುಸ್ತಕದಲ್ಲಿ ಪ್ರಗತಿಯಾಗಿದೆ ಎಂದು ತೋರಿಸುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಪರ ಜಿಲ್ಲಾಧಿಕಾರಿ ಸಂಗಪ್ಪ, ಉಪವಿಭಾಗಾಧಿಕಾರಿ ವಿಜಯಕುಮಾರ್‌, ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಕೆ.ಜಿ. ಮೂಡಲಗಿರಿಯಪ್ಪ, ಭೂಸೇನಾ ನಿಗಮದ ಹನುಮಂತಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಕಾಮಗಾರಿಯಲ್ಲಿ ಲೋಪವಾದ್ರೆ ಸಹಿಸಲ್ಲ

ಯಾವುದೇ ಕ್ಷಣದಲ್ಲಿ ಲೋಕಸಭಾ ಚುನಾವಣೆ ಎದುರಾಗಬಹುದು. ಆದ್ದರಿಂದ ಅಧಿಕಾರಿಗಳು ಇಂದು, ನಾಳೆ, ಗಂಟೆಗಳ ಲೆಕ್ಕದಲ್ಲಿ ಕೆಲಸ ಮಾಡದೆ ನಿಮಿಷದ ಲೆಕ್ಕದಲ್ಲಿ ಕೆಲಸ ಮಾಡಿ ಶೇ. ನೂರರಷ್ಟು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಳಸಿಕೊಳ್ಳಬೇಕು. ಅದರ ಪ್ರಯೋಜನ ಜನರಿಗೆ ತಲುಪುವಂತಾಗಬೇಕು ಎಂದು ಸಂಸದ ಬಿ.ಎನ್‌. ಚಂದ್ರಪ್ಪ ತಾಕೀತು ಮಾಡಿದರು.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ಅನುದಾನ ಪಡೆದು ಕಾಮಗಾರಿ ಅನುಷ್ಠಾನ ಮಾಡುತ್ತಿರುವ ಅಧಿಕಾರಿಗಳು ಕಾಮಗಾರಿಗಳನ್ನು ಪರಿಶೀಲಿಸಬೇಕು. ನೋಡಬೇಕು, ಬರಬೇಕು ಎಂದು ಸಬೂಬು ಹೇಳುವುದನ್ನು ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಗುಣಮಟ್ಟದ ಕಾಮಗಾರಿ ಮಾಡಬೇಕು. ಲೋಪವಾದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next