Advertisement

ನಿಲುವಳಿ ಮಂಡನೆ ವಿಚಾರದಲ್ಲಿ ಸದಸ್ಯರ ವಾಗ್ವಾದ

11:51 AM Aug 02, 2017 | Team Udayavani |

ಮೈಸೂರು: ಪಂಚಾಯತ್‌ ರಾಜ್‌ ನಿಯಮಾವಳಿಗೆ ವಿರುದ್ಧವಾಗಿ ಜಿಪಂ ಅಧ್ಯಕ್ಷೆ ನಯಿಮಾಸುಲ್ತಾನ ನೀಡಿದ ರೂಲಿಂಗ್‌ ಹಾಗೂ ನಿಲುವಳಿ ಸೂಚನೆ ಮಂಡನೆಗೆ ಪಟ್ಟುಹಿಡಿದ ಕಾಂಗ್ರೆಸ್‌ ಸದಸ್ಯೆ ವಿರುದ್ಧ ಜೆಡಿಎಸ್‌ ಸದಸ್ಯರೊಬ್ಬರು ಆಡಿದ ಮಾತಿನಿಂದ ಜಿಪಂ ಸಾಮಾನ್ಯ ಸಭೆ ಗೊಂದಲದ ಗೂಡಾಗಿ ಮತ್ತೆ ತಿಳಿಯಾದ ಘಟನೆ ನಡೆಯಿತು. ಅಧ್ಯಕ್ಷೆ ನಯಿಮಾಸುಲ್ತಾನ ಅಧ್ಯಕ್ಷತೆಯಲ್ಲಿ ಮಂಗಳವಾರ ಜಿಪಂ ಸಾಮಾನ್ಯ ಸಭೆ ಕರೆಯಲಾಗಿತ್ತು.

Advertisement

ಬೆಳಗ್ಗೆ 11 ಗಂಟೆಗೆ ನಿಗದಿಯಾಗಿದ್ದ ಸಭೆ, ಕೋರಂ ಅಭಾವದಿಂದಾಗಿ ಅರ್ಧಗಂಟೆ ತಡವಾಗಿ ಆರಂಭವಾಯಿತು. ಸಭೆಯ ಆರಂಭದಲ್ಲೇ ಸದಸ್ಯ ಶ್ರೀಕೃಷ್ಣ, 3054 ಲೆಕ್ಕ ಶೀರ್ಷಿಕೆಯಡಿ ರಾಷ್ಟ್ರೀಯ ಹೆದ್ದಾರಿಗಳ ಗ್ರಾಮೀಣ ಸಂಪರ್ಕ ರಸ್ತೆಗಳಿಗೆ ಅವೈಜಾnನಿಕವಾಗಿ ರಸ್ತೆ ಉಬ್ಬು ನಿರ್ಮಿಸಿರುವ ಬಗ್ಗೆ, ವೆಂಕಟಸ್ವಾಮಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ಡೆಂಘೀ ಜ್ವರದ ಕುರಿತು ಹಾಗೂ ಡಾ.ಪುಷ್ಪ ಅಮರನಾಥ್‌ ಅವರು ಜಿಎಸ್‌ಟಿ ಜಾರಿಯಿಂದ ಸ್ಯಾನಿಟರಿ ನ್ಯಾಪ್‌ಕಿನ್‌ ದುಬಾರಿಯಾಗಿರುವ ಬಗ್ಗೆ ನಿಲುವಳಿ ಸೂಚನೆಗೆ ಅವಕಾಶ ಕೋರಿದರು.

ಇದನ್ನು ವಿರೋಧಿಸಿದ ಜೆಡಿಎಸ್‌ನ ಬೀರಿಹುಂಡಿ ಬಸವಣ್ಣ, ಈ ಮೂರು ವಿಚಾರಗಳೂ ಅಷ್ಟೊಂದು ಮಹತ್ವದ್ದಲ್ಲ. ಸಭೆಯ ವಿಷಯ ಸೂಚಿಯಂತೆ ಸಭೆ ನಡೆಸಿ, ಕಡೆಗೆ ನಿಲುವಳಿಗೆ ಅವಕಾಶ ನೀಡಿ ಎಂದರು. ಇದಕ್ಕೆ ಜೆಡಿಎಸ್‌ನ ಎಂ.ಪಿ.ನಾಗರಾಜು ಕೂಡ ದನಿಗೂಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪುಷ್ಪ ಅಮರನಾಥ್‌, ನಾವೇನು ಇಲ್ಲಿ ಕೊಡುವ ಕಾಫಿ, ತಿಂಡಿಗಾಗಿ ಬಂದಿಲ್ಲ. ಇದು ಮಾತಿನ ಮನೆ ಜನಸಾಮಾನ್ಯರ ಸಮಸ್ಯೆಗಳು ಇಲ್ಲಿ ಚರ್ಚೆಯಾಗಿ ಪರಿಹಾರ ಕಂಡುಕೊಳ್ಳಬೇಕು.

ಜಿಲ್ಲೆಯಲ್ಲಿ ಡೆಂಘೀ ಜ್ವರ ವ್ಯಾಪಕವಾಗಿ ಹರಡಿ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಮೇಲೆ ಶೇ.50ರಷ್ಟು ಜಿಎಸ್‌ಟಿ ಹೇರಿರುವುದರಿಂದ ಹೆಣ್ಣುಮಕ್ಕಳಿಗೆ ಋತುಚಕ್ರದ ಸಂದರ್ಭದಲ್ಲಿ ಆರೋಗ್ಯದ ದೃಷ್ಟಿಯಿಂದ ಶುಚಿತ್ವ ಕಾಪಾಡಿಕೊಳ್ಳಲು ತೊಂದರೆಯಾಗುತ್ತಿದೆ. ತಾವೂ ಮಹಿಳೆ ಇದ್ದೀರಿ ನಿಲುವಳಿ ಸೂಚನೆಗೆ ಅವಕಾಶ ನೀಡಿ, ಆರು ವರ್ಷಗಳಿಂದ ನಾನೂ ಜಿಪಂ ಸದಸ್ಯಳಾಗಿದ್ದೇನೆ. ನಿಲುವಳಿ ಸೂಚನೆಯ ಗಂಭೀರತೆ ಬಗ್ಗೆ ನನಗೂ ಗೊತ್ತಿದೆ ಎಂದು ತಿರುಗೇಟು ನೀಡಿದರು.

ಈ ಜಿಪಂ ಅಸ್ತಿತ್ವಕ್ಕೆ ಬಂದ 1 ವರ್ಷ 3 ತಿಂಗಳಿಂದ ಮಹತ್ವದ ವಿಚಾರಗಳ ಬಗ್ಗೆ, ಜಿಲ್ಲೆಯ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆಯೇ ಆಗುತ್ತಿಲ್ಲ. ಪ್ರತಿ ಸಭೆಯಲ್ಲೂ ನಿಲುವಳಿ ಸೂಚನೆ ಮಂಡಿಸಿ ಸಮಯ ಹಾಳು ಮಾಡುತ್ತಾರೆ ಎಂದು ಬೀರಿಹುಂಡಿ ಬಸವಣ್ಣ ತಿರುಗೇಟು ನೀಡಿದರು. ಈ ಹಂತದಲ್ಲಿ ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ಮೊದಲು ಅನುಪಾಲನ ವರದಿ ತೆಗೆದುಕೊಳ್ಳಿ, ನಂತರ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವುದಾಗಿ ರೂಲಿಂಗ್‌ ನೀಡಿದರು.

Advertisement

ಆದರೆ, ಜಿಪಂ ಸಿಇಒ ಪಿ.ಶಿವಶಂಕರ್‌ ಪಂಚಾಯತ್‌ ರಾಜ್‌ ನಿಯಮಾವಳಿಯ ಪುಸ್ತಕವನ್ನು ಓದಿಹೇಳಿ, ಆ ರೀತಿ ಮಾಡಲು ಬರುವುದಿಲ್ಲ, ನಿಲುವಳಿ ಸೂಚನೆಯನ್ನೇ ಮೊದಲು ಚರ್ಚೆಗೆ ಕೈಗೆತ್ತಿಕೊಳ್ಳಬೇಕು. ಆದರೆ, ಅಧ್ಯಕ್ಷರು ರೂಲಿಂಗ್‌ ನೀಡಿರುವುದರಿಂದ ಅಧ್ಯಕ್ಷರ ಅಪ್ಪಣೆ ಮೇರೆಗೆ ಇತರೆ ವಿಷಯಗಳಡಿ ಚರ್ಚೆಗೆ ತೆಗೆದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದರು.

ಈ ಹಂತದಲ್ಲಿ ಬೀರಿಹುಂಡಿ ಬಸವಣ್ಣ ಅವರು ಸಭೆಯಲ್ಲಿ ಮಾಧ್ಯಮದವರು ಇರುವುದರಿಂದ ಇವರಿಗೆ ಇವೆಲ್ಲ ಮಹತ್ವದ ವಿಚಾರಗಳಾಗಿ ಕಾಣಿಸುತ್ತಿವೆ? ಅವರಿಲ್ಲ ಅಂದರೆ ಇವರು ಮಾತನಾಡುವುದಿಲ್ಲ ಎಂದು ಕೆಣಕಿದರು. ಇದರಿಂದ ಕೆರಳಿದ ಪುಷ್ಪಅಮರನಾಥ್‌, ಮಾಧ್ಯಮದವರಿಗಾಗಿ ನಾವು ಗೆದ್ದು ಬಂದಿದ್ದೇವಾ? ಜಿಪಂ ಸಭೆಗೆ ಅವಮಾನ ಮಾಡುವ ರೀತಿ ಮಾತನಾಡುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮವನ್ನು ನಾಲ್ಕನೆ ಅಂಗ ಎಂದು ಒಪ್ಪಿಕೊಂಡಿದ್ದೇವೆ, ಹಾಗಿದ್ದರೆ ಮಾಧ್ಯಮದವರನ್ನು ಹೊರಗಿಟ್ಟು ಸಭೆ ನಡೆಸಬೇಕಾ?

ಇಡೀ ದೇಶದಲ್ಲಿ ನಡೆಯುವ ಕಾರ್ಯಕ್ರಮಗಳೆಲ್ಲವೂ ಮಾಧ್ಯಮಗಳಿಗಾಗಿಯೇ ನಡೆಯುತ್ತವಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಂತದಲ್ಲಿ ಸದಸ್ಯರನ್ನು ಸಮಾಧಾನ ಪಡಿಸಲು ಅಧ್ಯಕ್ಷರು ಎದ್ದು ನಿಂತರಾದರೂ ಪ್ರಯೋಜನಕ್ಕೆ ಬರಲಿಲ್ಲ. ಮಾಧ್ಯಮಕ್ಕೋಸ್ಕರ ಮಾತನಾಡುತ್ತಾರೆ ಎಂಬ ಪದ ವಾಪಸ್‌ ಪಡೆದು ಕ್ಷಮೆ ಕೇಳುವವರೆಗೆ ಸಭೆಗೆ ಬರುವುದಿಲ್ಲ ಎಂದು ಡಾ.ಪುಷ್ಪ ಸಭೆಯಿಂದ ಹೊರನಡೆದರು. ಆದರೆ, ಕಾಂಗ್ರೆಸ್‌ ಸದಸ್ಯರ್ಯಾರು ಅವರನ್ನು ಹಿಂಬಾಲಿಸದೆ ಬೀರಿಹುಂಡಿ ಬಸವಣ್ಣ ಅವರ ಜತೆಗೆ ವಾಗ್ವಾದಕ್ಕಿಳಿದರು.

ಇದರಿಂದ ಸಭೆ ಗೊಂದಲದ ಗೂಡಾದ್ದರಿಂದ ಸಭೆಯನ್ನು ಹತ್ತು ನಿಮಿಷಗಳ ಕಾಲ ಮುಂದೂಡಲಾಯಿತು. ಸಭಾಂಗಣದ ಹೊರಗೆ ಕುಳಿತಿದ್ದ ಪುಷ್ಪ ಅವರ ಬಳಿ ತೆರಳಿದ ಕಾಂಗ್ರೆಸ್‌ ಸದಸ್ಯರು ಹಾಗೂ ಅಧ್ಯಕ್ಷೆ ನಯಿಮಾ ಸುಲ್ತಾನ, ಸಿಇಒ ಶಿವಶಂಕರ್‌, ನಿಲುವಳಿ ಸೂಚನೆ ಮಂಡನೆಗೆ ಅವಕಾಶ ನೀಡುವ ಭ ರವಸೆ ನೀಡಿ ಸಭೆಗೆ ಕರೆತಂದು ನಿಲುವಳಿ ಸೂಚನೆಗೆ ಅವಕಾಶ ನೀಡಿದ್ದರಿಂದ ನಂತರ ಸಭೆ ಸುಸೂತ್ರವಾಗಿ ನಡೆಯಿತು.

ಜಿಲ್ಲೆಯಲ್ಲಿ ಡೆಂಘೀಯಿಂದ ಇಬ್ಬರ ಸಾವು: ಸಿಇಒ
ಮೈಸೂರು:
ಜಿಲ್ಲೆಯಲ್ಲಿ 450 ವೈರಲ್‌ ಜ್ವರ ಪೀಡಿತ ಪ್ರಕರಣಗಳು ವರದಿಯಾಗಿದ್ದು, ಡೆಂಘೀಯಿಂದ ಇಬ್ಬರು ಮಾತ್ರ ಮೃತಪಟ್ಟಿರುವುದು ಧೃಡಪಟ್ಟಿದೆ ಎಂದು ಜಿಪಂ ಸಿಇಒ ಪಿ.ಶಿವಶಂಕರ್‌ ಮಾಹಿತಿ ನೀಡಿದರು. ಮಂಗಳವಾರ ನಡೆದ ಜಿಪಂ ಸಾಮಾನ್ಯಸಭೆಯಲ್ಲಿ ಜಿಲ್ಲೆಯಲ್ಲಿ ವ್ಯಾಪಿಸಿರುವ ಡೆಂಘೀ ಜ್ವರ ಹರಡಿರುವ ಬಗ್ಗೆ ವೆಂಕಟಸ್ವಾಮಿ ಮಂಡಿಸಿದ ನಿಲುವಳಿಗೆ ಅವರು ಉತ್ತರ ನೀಡಿದರು.

ಮೈಸೂರು ಗ್ರಾಮಾಂತರದಲ್ಲಿ 182, ಮೈಸೂರು ನಗರದಲ್ಲಿ268 ಸೇರಿದಂತೆ 450 ಪ್ರಕರಣಗಳು ವರದಿಯಾಗಿದ್ದು, ಈ ಪೈಕಿ ಬೇರೆ ಬೇರೆ ಅಂಗಾಂಗಳ ವೈಫ‌ಲ್ಯದಿಂದ 19 ಜನ ಮೃತಪಟ್ಟಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅಧ್ಯಕ್ಷತೆಯ ಪರಿಶೋಧನಾ ತಂಡ ಡೆಂಘೀ ಪತ್ತೆಗೆ ಎಲಿಸಾ ಪರೀಕ್ಷೆಯೇ ಅಂತಿಮ ಎಂದು ಪರಿಗಣಿಸಿದ್ದು, ನಂಜನಗೂಡು ತಾಲೂಕಿನ ಸಾಕಮ್ಮ ಹಾಗೂ ತಿ.ನರಸೀಪುರ ತಾಲೂಕಿನ ಮನೀಶ್‌ ರಾಜ್‌ ಅರಸು ಡೆಂಘೀ ಯಿಂದ ಮೃತಪಟ್ಟಿದ್ದಾರೆ ಎಂದು ಧೃಡಪಡಿಸಿದೆ ಎಂದು ತಿಳಿಸಿದರು.

ಡೆಂಘೀ ಜ್ವರ ಮೈಸೂರು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ, ಇಡೀ ರಾಜ್ಯದಲ್ಲಿ ವ್ಯಾಪಿಸಿದ್ದು, ಶುದ್ಧ ನೀರಿನಲ್ಲೂ ಡೆಂಘೀ ಹರಡುವ ಈಡಿಪಸ್‌ ಸೊಳ್ಳೆ ಸಂತಾನೋತ್ಪತ್ತಿ ಮಾಡುವುದರಿಂದ ಈ ಸೊಳ್ಳೆಗಳ ನಿರ್ಮೂಲನೆಗೆ ಸಾರ್ವಜನಿಕರ ಸಹಕಾರ ಅತಿ ಮುಖ್ಯ. ಜಿಲ್ಲೆಯ 25 ಸಾವಿರ ಕಡೆಗಳಲ್ಲಿ ನೀರನ್ನು ಪರಿಶೀಲಿಸಿ, ಜಾಗೃತಿ ಮೂಡಿಸಲಾಗುತ್ತಿದೆ.

ಇದೆಲ್ಲವೂ ತಾತ್ಕಲಿಕ ಕ್ರಮ. ಹೀಗಾಗಿ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಶೇಖರಿಸಿರುವ ನೀರಿಗೆ ಗಾಳಿ-ಬೆಳಕು ಬೀಳದಂತೆ ಎಚ್ಚರಿಕೆವಹಿಸುವ ಜತೆಗೆ ಕನಿಷ್ಠ ವಾರಕ್ಕೆ ಒಮ್ಮೆಯಾದರೂ ನೀರನ್ನು ಬದಲಿಸಬೇಕು. ಜೂನ್‌-ಜುಲೈ ತಿಂಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚು ಕಂಡುಬರುತ್ತಿತ್ತು. ದಿನಕಳೆದಂತೆ ಕಡಿಮೆಯಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ನ್ಯಾಪ್‌ಕಿನ್‌ ಕೊಡುವ ಶುಚಿ ಯೋಜನೆ ರಾಜ್ಯದಲ್ಲೂ ಜಾರಿ
ಮೈಸೂರು:
ಋತುಚಕ್ರದ ಸಂದರ್ಭದಲ್ಲಿ ಮಹಿಳೆಯರ ಆರೋಗ್ಯದ ದೃಷ್ಟಿಯಿಂದ ಸ್ಯಾನಿಟರಿ ನ್ಯಾಪ್‌ಕಿನ್‌ ಕೊಡುವ ಶುಚಿ ಯೋಜನೆ ರಾಜ್ಯದಲ್ಲೂ ಜಾರಿಯಲ್ಲಿದೆ ಎಂದು ಜಿಪಂ ಸಿಇಒ ಪಿ.ಶಿವಶಂಕರ್‌ ತಿಳಿಸಿದರು. ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್‌ ಸದಸ್ಯೆ ಡಾ.ಪುಷ್ಪ ಅಮರನಾಥ್‌ ಮಂಡಿಸಿದ ನಿಲುವಳಿ ಸೂಚನೆಗೆ ಉತ್ತರ ನೀಡಿದರು.

ಶಾಲೆಗಳು, ವಸತಿ ಶಾಲೆಗಳಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆವತಿಯಿಂದ ಉಚಿತವಾಗಿ ನ್ಯಾಪ್‌ಕಿನ್‌ ಕೊಡಲಾಗುತ್ತಿತ್ತು. ಪಿಯುಸಿ ವಿದ್ಯಾರ್ಥಿನಿಯರಿಗೆ ಪದವಿಪೂರ್ವ ಶಿಕ್ಷಣ ಇಲಾಖೆಯಿಂದಲೇ ನೇರವಾಗಿ ಕೊಡಲಾಗುತ್ತಿದೆ ಎಂದರು.

ನಿಲುವಳಿ ಮಂಡಿಸಿದ ಡಾ.ಪುಷ್ಪ, ಋತುಚಕ್ರದ ಅವಧಿಯಲ್ಲಿ ಯಾವ ರೀತಿಯ ಸುರûಾ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಶೇ.70ರಷ್ಟು ಹೆಣ್ಣು ಮಕ್ಕಳಿಗೆ ಮಾಹಿತಿಯೇ ಇಲ್ಲ. ಜತೆಗೆ ಹಳ್ಳಿ ಹೆಣ್ಣು ಮಕ್ಕಳಿಗೆ ಅಷ್ಟೊಂದು ಹಣ ನೀಡಿ ನ್ಯಾಪ್‌ಕಿನ್‌ ಖರೀದಿಸಲು ಸಾಧ್ಯವಾಗುತ್ತಿಲ್ಲ.

ಇದೀಗ ಜಿಎಸ್‌ಟಿಯಿಂದ ಶೇ.50ರಷ್ಟು ತೆರಿಗೆ ಹೇರಿರುವುದರಿಂದ ಮತ್ತೂ ಕಷ್ಟವಾಗಿದೆ. ಕೇರಳ ಸರ್ಕಾರದಲ್ಲಿ ಹೆಣ್ಣು ಮಕ್ಕಳಿಗೆ ಶುಚಿ ಯೋಜನೆಯಡಿ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್‌ ವಿತರಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಪಡಿತರ ವ್ಯವಸ್ಥೆಯಡಿ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವ ಕುಟುಂಬದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ಕೊಡುವಂತೆ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು.

ಶಿಷ್ಟಾಚಾರ ಪಾಲನೆಗಾಗಿ ರಾಜ್ಯಸರ್ಕಾರಕ್ಕೆ ಶಿಫಾರಸು
ಮೈಸೂರು:
ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲಿಸದೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳನ್ನು ನಿರ್ಲಕ್ಷಿéಸುತ್ತಿರುವ ಬಗ್ಗೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ನೋಟಿಸ್‌ ನೀಡಿ ವಿವರಣೆ ಕೇಳಿ, ಶಿಷ್ಟಾಚಾರ ಪಾಲಿಸುವಂತೆ ಸುತ್ತೋಲೆ ಹೊರಡಿಸಲಾಗುವುದು ಎಂದು ಜಿಪಂ ಸಿಇಒ ಪಿ.ಶಿವಶಂಕರ್‌ ತಿಳಿಸಿದರು.

ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಪಾಲಿಸದೆ ಜಿಪಂ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆ ಜಿಪಂ, ತಾಪಂ ಹಾಗೂ ಗ್ರಾಪಂ ವತಿಯಿಂದ ಹಮ್ಮಿಕೊಳ್ಳುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಾಸಕರ ಹಂತದವರೆಗೆ ಮಾತ್ರ ಶಿಷ್ಟಾಚಾರ ಇದೆ. ಜಿಪಂ ಅಧ್ಯಕ್ಷರಿಗೆ ಇದೀಗ ರಾಜ್ಯ ಸಚಿವರ ಸ್ಥಾನಮಾನ ನೀಡಿರುವುದರಿಂದ ಅವರಿಗೂ ಈ ಶಿಷ್ಟಾಚಾರ ಅನ್ವಯವಾಗಲಿದೆ. ಆದರೆ, ಸದಸ್ಯರ ಬಗ್ಗೆ ಸ್ಪಷ್ಟ ಮಾರ್ಗಸೂಚಿ ಇಲ್ಲ. ಹೀಗಾಗಿ ಸರ್ಕಾರಿ ಆದೇಶವಾದರೆ ಎಲ್ಲವೂ ಸರಿಹೋಗಲಿದೆ. ಆದ್ದರಿಂದ ಈ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next