Advertisement

 ದಾವಣಗೆರೆ:ಪರಿಷತ್‌ ಚುನಾವಣೆ; 94 ಮತ ಖೋತಾ

07:54 PM Nov 19, 2021 | Team Udayavani |

 ದಾವಣಗೆರೆ: ವಿಧಾನ ಪರಿಷತ್‌ನ ಚಿತ್ರದುರ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಡಿ. 10 ರಂದು ಚುನಾವಣೆ ನಡೆಯಲಿದ್ದು, ದಾವಣಗೆರೆ, ಹರಿಹರ, ಜಗಳೂರು ತಾಲೂಕಿನಲ್ಲಿ ಒಟ್ಟಾರೆ 94 ಮತಗಳು ಕಡಿಮೆ ಆಗಲಿವೆ.

Advertisement

ಜಿಪಂ, ತಾಪಂ, ಪುರಸಭೆ ಸದಸ್ಯರ ಅವಧಿ ಮುಗಿದಿದೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಮತ್ತು ಪಕ್ಷೇತರರು ಒಳಗೊಂಡಂತೆ 94 ಮತಗಳು ಕಡಿಮೆ ಆಗಿವೆ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಲ್ಲಿ ಜಿಲ್ಲಾ, ತಾಲೂಕು, ಪಟ್ಟಣ ಪಂಚಾಯತ್‌, ಪುರಸಭೆ, ನಗರಸಭೆ ಮತ್ತು ಗ್ರಾಮ ಪಂಚಾಯತ್‌ ಸದಸ್ಯರು ಮತದಾನ ಹಕ್ಕು ಹೊಂದಿರುತ್ತಾರೆ. ದಾವಣಗೆರೆ ಜಿಲ್ಲಾ ಪಂಚಾಯತ್‌, ದಾವಣಗೆರೆ, ಹರಿಹರ, ಜಗಳೂರು ತಾಲೂಕು ಪಂಚಾಯತ್‌ ಮತ್ತು ಹರಿಹರ ತಾಲೂಕಿನ ಮಲೇಬೆನ್ನೂರು ಪುರಸಭೆಯ ಅವಧಿ ಮುಗಿದಿದೆ.

ಮೂರು ಪಕ್ಷಗಳು ಹಾಗೂ ಪಕ್ಷೇತರರು ಸೇರಿದಂತೆ 94 ಮತಗಳು ಕಡಿಮೆ ಆಗಿವೆ. ಬಿಜೆಪಿಗೆ 41 ಮತ ಖೋತಾ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನಲ್ಲಿ ನಡೆಯುವ ಚುನಾವಣೆಯನ್ನು ಗೆದ್ದೇ ಗೆಲ್ಲುವ ಹುಮ್ಮಸ್ಸಿನಿಂದ ಅಖಾಡಕ್ಕೆ ಇಳಿಯುತ್ತಿರುವ ಬಿಜೆಪಿಗೆ ಅತಿ ಹೆಚ್ಚು 41 ಮತಗಳು ಕಡಿಮೆ ಆಗಲಿವೆ. ಜಿಪಂ, ಆರು ತಾಲೂಕು ಪಂಚಾಯತ್‌, ಒಂದು ಪುರಸಭೆಗಳಲ್ಲಿ 41 ಬಿಜೆಪಿ ಸದಸ್ಯರಿದ್ದರು. ಈಗ ಮತದಾ ನಕ್ಕೆ ಅವಕಾಶವೇ ಇಲ್ಲದ ಕಾರಣ ಬಿಜೆಪಿಗೆ ಚುನಾವಣೆಗೆ ಮುನ್ನವೇ ಆ ಮತಗಳು ಖೋತಾ ಆಗಲಿವೆ. ವಿಧಾನ ಪರಿಷತ್‌ ಸ್ಥಾನವನ್ನು ತನ್ನಲ್ಲೇ ಉಳಿಸಿಕೊಳ್ಳಲು ಶತಪ್ರಯತ್ನ ನಡೆಸುತ್ತಿರುವ ಕಾಂಗ್ರೆಸ್‌ಗೂ 34 ಮತಗಳು ಕಡಿಮೆ ಆಗಿವೆ.

ಜಿಪಂ, ಆರು ತಾಲೂಕು ಪಂಚಾಯತ್‌, ಒಂದು ಪಪಂನಲ್ಲಿ ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸುತ್ತಿದ್ದ 34 ಸದಸ್ಯರು ಮತದಾನ ಮಾಡುವಂತಿಲ್ಲ. ಜಿಪಂ, ಆರು ತಾಲೂಕು ಪಂಚಾಯತ್‌, ಒಂದು ಪುರಸಭೆಯಲ್ಲಿ ಜೆಡಿಎಸ್‌ನ ಒಟ್ಟು 13 ಜನ ಸದಸ್ಯರಿದ್ದರು. ಆ ಎಲ್ಲ ಸದಸ್ಯರ ಮತಗಳು ಜೆಡಿಎಸ್‌ಗೆ ಕಡಿಮೆ ಆಗಿವೆ. ಅದೇ ರೀತಿ 6 ಪಕ್ಷೇತರರು ಮತದಾನ ಮಾಡುವಂತಿಲ್ಲ. ಒಟ್ಟು 25 ಸದಸ್ಯತ್ವ ಬಲದ ದಾವಣಗೆರೆ ತಾಲೂಕು ಪಂಚಾಯತ್‌ನಲ್ಲಿ ಬಿಜೆಪಿಯ 14, ಕಾಂಗ್ರೆಸ್‌ನ 10, ಒಬ್ಬರು ಪಕ್ಷೇತರರಿದ್ದರು. ಹರಿಹರ ತಾಲೂಕು ಪಂಚಾಯತ್‌ನಲ್ಲಿ 15 ಸದಸ್ಯರಲ್ಲಿ ಜೆಡಿಎಸ್‌ನ ಆರು, ಬಿಜೆಪಿಯ ಐವರು, ಕಾಂಗ್ರೆಸ್‌ನ ನಾಲ್ವರು ಸದಸ್ಯರಿದ್ದರು.

16 ಸದಸ್ಯತ್ವ ಬಲದ ಜಗಳೂರು ತಾಲೂಕು ಪಂಚಾಯತ್‌ ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ತಲಾ ಏಳು ಹಾಗೂ ಇಬ್ಬರು ಪಕ್ಷೇತರರು ಇದ್ದರು. ಹರಿಹರ ತಾಲೂಕಿನ ಮಲೇಬೆನ್ನೂರು ಪುರಸಭೆಯ ಒಟ್ಟು ಸದಸ್ಯತ್ವ ಬಲ 23. ಅದರಲ್ಲಿ ಬಿಜೆಪಿ 7, ಜೆಡಿಎಸ್‌ 5, ಕಾಂಗ್ರೆಸ್‌ 8 ಹಾಗೂ ಮೂವರು ಪಕ್ಷೇತರರು ಇದ್ದರು. ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಎಲ್ಲ ಪಕ್ಷಗಳ ಮತಗಳೂ ಕಡಿಮೆ ಆಗಲಿವೆ.

Advertisement

ಬಿಜೆಪಿಗೆ ಜಿಲ್ಲಾ, ತಾಲೂಕು ಪಂಚಾಯತ್‌ ಮತ್ತು ಪುರಸಭೆಯಲ್ಲಿದ್ದ ಸದಸ್ಯರ 41 ಮತಗಳು ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್‌ನತ್ತ ನೋಟ ಬೀರಿದೆ. ದಾವಣಗೆರೆ, ಜಗಳೂರು, ಹರಿಹರ ತಾಲೂಕಿನ ಗ್ರಾಪಂ ಸದಸ್ಯರಲ್ಲಿ ಬಿಜೆಪಿ ಬೆಂಬಲದೊಂದಿಗೆ ಗೆದ್ದಿರುವವರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ಜಿಪಂ, ತಾಪಂನಲ್ಲಿದ್ದ ಸದಸ್ಯರ ಬಲ ಕಳೆದುಕೊಂಡಿರುವ ಬಿಜೆಪಿ ಗ್ರಾಪಂ ಸದಸ್ಯರ ಮತ ಬೇಟೆ ನಡೆಸಲಿದೆ. ಕಾಂಗ್ರೆಸ್‌ ಗೆ 34 ಮತಗಳು ಕಡಿಮೆ ಆಗಿರುವುದರಿಂದ ಗ್ರಾಪಂ ಸದಸ್ಯರ ಮತ ಸೆಳೆಯುವ ಮೂಲಕ ನಷ್ಟ ಸರಿದೂಗಿಸಿಕೊಳ್ಳುವ ಪ್ರಯತ್ನ ನಡೆಸಲು ತಂತ್ರ ರೂಪಿಸಿದೆ. ಜೆಡಿಎಸ್‌ ಕಣಕ್ಕಿಳಿದಲ್ಲಿ 13 ಮತ ಕೊರತೆ ಎದುರಾಗಲಿದೆ.

 ರಾ. ರವಿಬಾಬು

Advertisement

Udayavani is now on Telegram. Click here to join our channel and stay updated with the latest news.

Next