Advertisement

ಕಾಮಗಾರಿ ಅಪೂರ್ಣಕ್ಕೆ ಸದಸ್ಯರ ಅಸಮಾಧಾನ

12:16 PM Aug 30, 2018 | Team Udayavani |

ಮೂಡಿಗೆರೆ: ಗೋಣಿಬೀಡಿನಲ್ಲಿ ಏಳು ವರ್ಷದ ಹಿಂದೆ ಆರಂಭಿಸಲಾದ ನೀರಿನ ಟ್ಯಾಂಕ್‌ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ತಾಪಂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಘಟನೆ ತಾಪಂ ಕೆಡಿಪಿ ಸಭೆಯಲ್ಲಿ ನಡೆಯಿತು.
ತಾ.ಪಂ. ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಬುಧವಾರ ತಾಲೂಕು ಪಂಚಾಯತ್‌ ಅಧ್ಯಕ್ಷ ಅಧ್ಯಕ್ಷ ಕೆ.ಸಿ.ರತನ್‌ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು.

Advertisement

2011ರಲ್ಲಿ ಹಂಡುಗುಳಿಯಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆಗೆ ಅಲ್ಲಿನ ಗ್ರಾ.ಪಂ. ಅನುಮತಿ ನೀಡಿ, ಬಾವಿ ಸಿದ್ದಗೊಂಡಿದೆ. ಆದರೆ ವಿದ್ಯುತ್‌ ಸಂಪರ್ಕಕ್ಕೆ ಗ್ರಾ.ಪಂ. ಏಕೆ ಸಹಕರಿಸುತ್ತಿಲ್ಲ? ಕುಡಿಯುವ ನೀರಿಗೆ ಯಾರೂ ತೊಂದರೆ ಮಾಡುವ ಹಾಗಿಲ್ಲ ಎಂದು ನಿಯಮವಿದೆ. ಏಳು ವರ್ಷ ಕಳೆದರೂ ವಿದ್ಯುತ್‌ ಸಂಪರ್ಕ ನೀಡಲು ಮೆಸ್ಕಾಂ ಮೀನಾಮೇಷ ಎಣಿಸುತ್ತಿರುವುದಾರೂ ಯಾಕೆ? ಕುಡಿಯುವ ನೀರಿಗೆ ವಿದ್ಯುತ್‌ ಸಂಪರ್ಕ ಒದಗಿಸಲು ಸಾಧ್ಯವಾಗದಿದ್ದರೆ ನೀವು ಇಲ್ಲಿರಬೇಡಿ. ವರ್ಗಾವಣೆ ಮಾಡಿಕೊಂಡು ಬೇರೆ ಕಡೆ ಹೋಗಿ ಎಂದು ಸದಸ್ಯ ರಂಜನ್‌ ಅಜಿತ್‌ ಕುಮಾರ್‌ ಮೆಸ್ಕಾಂ ಅಧಿಕಾರಿಗೆ ಖಾರವಾಗಿ ಪ್ರಶ್ನಿಸಿ, ಕೂಡಲೇ ವಿದ್ಯುತ್‌ ಸಂಪರ್ಕ ನೀಡಬೇಕೆಂದು ಸೂಚಿಸಿದರು.

ಈ ಬಾರಿಯ ಅತಿವೃಷ್ಟಿಯಿಂದ ತಾಲೂಕಿನ 19 ಶಾಲೆ ಕಟ್ಟಡಗಳು ನೆಲಸಮಗೊಂಡಿದೆ. ಶಾಲೆಗಳ ಹೊಸ ಕಟ್ಟಡಕ್ಕೆ ಮತ್ತು ದುರಸ್ಥಿಗೆ 1.33 ಕೋಟಿ ರೂ. ಅನುದಾನ ಬಿಡುಗಡೆ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಯಾವುದೇ
ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ. ಅತಿವೃಷ್ಟಿ ನಿಭಾಯಿಸಲು ಜಿಲ್ಲೆಗೆ ಬಿಡುಗಡೆಯಾದ ಅನುದಾನವನ್ನು ಶಾಲೆಗಳಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ
ತಾರನಾಥ್‌ ಮಾಹಿತಿ ನೀಡಿದರು. 

ತಾಲೂಕಿನಲ್ಲಿ ಪ್ರಾಥಮಿಕ ಆರೋಗ್ಯ ಸೇರಿದಂತೆ ಎಂಜಿಎಂ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಮತ್ತು ಸಿಬ್ಬಂದಿ ಕೊರತೆ ಇರುವ ಕಾರಣ ಯಾವುದೇ ವೈದ್ಯಾ ಕಾರಿಗಳು ಮತ್ತು ಸಿಬ್ಬಂದಿ ವರ್ಗಾಯಿಸಬಾರದು ಎಂದು ತಾ.ಪಂ. ಅಧ್ಯಕ್ಷ
ಕೆ.ಸಿ.ರತನ್‌ ಆರೋಗ್ಯ ಅಧಿಕಾರಿ ಡಾ| ಸುಂದರೇಶ್‌ ಅವರಿಗೆ ಸೂಚಿಸಿದರು. ಶಿರಾಡಿ ಘಾಟ್‌ ಬಂದ್‌ ಆಗಿರುವ ಕಾರಣ ಚಾರ್ಮಾಡಿ ಘಾಟ್‌ನ ಮೂಲಕ ವಾಹನಗಳು ಓಡಾಡುತ್ತಿವೆ. 

ಹಾಗಾಗಿ ಅಪಘಾತಗಳಾದಾಗ ಆಸ್ಪತ್ರೆಯಲ್ಲಿ ವೈದ್ಯರು ತುರ್ತು ವಿಭಾಗ, ಜನರಿಕ್‌ ಮೆಡಿಕಲ್‌ ಸಹಿತ ರಾತ್ರಿ 10 ಗಂಟೆವರೆಗೆ ಸನ್ನದ್ಧವಾಗಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಸ್ಪತೆ ಆಡಳಿತ ಅಧಿಕಾರಿ ಡಾ| ಮಂಜುಳಾ ಅವರಿಗೆ ಸೂಚಿಸಲಾಯಿತು.

Advertisement

ಪ್ರತಿಧ್ವನಿಸಿದ ಹೊಳೆಕೂಡಿಗೆ ಸಮಸ್ಯೆ : ತಾಲೂಕಿನ ಹೊಳೆಕುಡಿಗೆ ಗ್ರಾಮದಲ್ಲಿ ವಾಸವಾಗಿರುವ ಲಕ್ಷ್ಮಮ್ಮ ಎಂಬುವರು ಇತ್ತೀಚೆಗೆ ಅನಾರೋಗ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಮೃತ ದೇಹವನ್ನು ಭದ್ರಾ ನದಿಯಲ್ಲಿ ತೆಪ್ಪದ ಮೂಲಕ ತೆಗೆದುಕೊಂಡು ಹೋಗಲಾಯಿತು. ಈ ಸಮಸ್ಯೆ ಅನೇಕ ವರ್ಷದಿಂದಲೂ ಇದೆ. ಈ ಬಗ್ಗೆ ಮಾಧ್ಯಮದವರು ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಅಲ್ಲಿನ ಸಮಸ್ಯೆಯಾದರೂ ಏನು ಎಂದು ಅಧಿಕಾರಿಗಳಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್‌ ಕುಮಾರ್‌ ಪ್ರಶ್ನಿಸಿದರು.

 ಅದಕ್ಕೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗಲಿಲ್ಲ. ಬಳಿಕ ತಾ.ಪಂ. ಸದಸ್ಯ ಹಿತ್ಲಮಕ್ಕಿ ರಾಜೇಂದ್ರ ಮಾತನಾಡಿ, ಆ ಗ್ರಾಮದವರು ನದಿ ದಾಟಿಕೊಂಡು ಹೋಗಬೇಕಿಲ್ಲ. ಅಲ್ಲಿ ಗೋಮಾಳ ಜಾಗದಲ್ಲಿ ರಸ್ತೆಯಿತ್ತು. ಅಲ್ಲಿ ವಾಸವಾಗಿರುವ
ಕೇವಲ ನಾಲ್ಕೈದು ಕುಟುಂಬದವರು ತೋಟದ ಕೆಲಸಕ್ಕೆ ಬರುತ್ತಿಲ್ಲವೆಂಬ ಕಾರಣಕ್ಕೆ ದಾರಿಗೆ ಬೇಲಿ ಹಾಕಿ ಕೋರ್ಟ್‌ನಿಂದ ಸ್ಟೇ ತಂದಿದ್ದಾರೆ. ಹಾಗಾಗಿ ಸಮಸ್ಯೆಯಾಗಿದೆ. ಎಲ್ಲಾ ಜನಪ್ರತಿನಿಧಿಗಳು ಪಕ್ಷಬೇಧ ಮರೆತು ಸಮಸ್ಯೆ ಬಗೆಹರಿಸಲು ಮುಂದಾದರೆ ಮಾತ್ರ ಸಮಸ್ಯೆಗೆ ಅಂತ್ಯ ಕಾಣಬಹುದು ಎಂದರು.

 ಇದಕ್ಕೆ ಅಧ್ಯಕ್ಷ ಕೆ.ಸಿ.ರತನ್‌ ಮಾತನಾಡಿ, ಗುರುವಾರ ಮಧ್ಯಾಹ್ನ ಹೊಳೆಕುಡಿಗೆ ಗ್ರಾಮಕ್ಕೆ ಎಲ್ಲಾ ತಾ.ಪಂ. ಸದಸ್ಯರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಹೋಗೋಣ. ಅದಕ್ಕೆ ಸಂಬಂಧಿಸಿದ ದಾಖಲೆಯನ್ನು ಅಧಿಕಾರಿಗಳು ತರಬೇಕು.
ಸ್ಥಳ ಪರಿಶೀಲನೆ ಮಾಡಿ, ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡೋಣ ಎಂದು ಹೇಳಿದರು.

ತಾ.ಪಂ. ಉಪಾಧ್ಯಕ್ಷೆ ಸವಿತಾ ರಮೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್‌ ಕುಮಾರ್‌, ಸದಸ್ಯರಾದ ರಂಜನ್‌ ಅಜಿತ್‌ ಕುಮಾರ್‌, ಹಿತ್ಲಮಕ್ಕಿ ರಾಜೇಂದ್ರ, ದೇವರಾಜು, ಎ.ಕೆ.ಭಾರತೀ ರವೀಂದ್ರ, ಮೀನಾಕ್ಷಿ, ಪ್ರಮೀಳ, ವೀಣಾ ಉಮೇಶ್‌, ವೇದಾ ಲಕ್ಷ್ಮಣ, ಇಒ ಡಿ.ಡಿ.ಪ್ರಕಾಶ್‌ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next