ಹುಬ್ಬಳ್ಳಿ: ಬೆವರಿಳಿಸಿ ಬೆಳೆಸಿದ ಹಣ್ಣುಗಳಿಗೆ ಉತ್ತಮ ದರ ಸಿಗಲಿಲ್ಲ ಎಂಬ ಕಾರಣಕ್ಕೆ ರೈತರೊಬ್ಬರು ಹಣ್ಣುಗಳನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಗದಗ ಜಿಲ್ಲೆ ರೋಣ ತಾಲೂಕಿನ ರೈತ ಮುತ್ತಣ್ಣ ತೋಟಗಂಟಿ ಹಾಗೂ ಹನಮಂತಪ್ಪ ಗದಗಿನ ಎಂಬುವರು ತಮ್ಮ ಊರಿನಿಂದ ಮಾರಾಟಕ್ಕೆಂದು ತಂದಿದ್ದ 6-7 ಟನ್ ಕಲ್ಲಂಗಡಿ ಹಣ್ಣನ್ನು ಸಾರ್ವಜನಿಕರಿಗೆ ಉಚಿತವಾಗಿ ಹಂಚಿ ಉಳಿದಿರುವುದನ್ನು ರಸ್ತೆಗೆ ಸುರುವಿ ಆಕ್ರೋಶ ವ್ಯಕ್ತಪಡಿಸಿದರು.
ಎಂಟು ಎಕರೆ ನೀರಾವರಿ ಭೂಮಿ ಹೊಂದಿರುವ ಮುತ್ತಣ್ಣ ಅವರು ಸುಮಾರು 4 ಲಕ್ಷ ರೂ. ವೆಚ್ಚ ಮಾಡಿ ಮೊದಲ ಬಾರಿ ಕಲ್ಲಂಗಡಿ ಹಣ್ಣು ಬೆಳೆದಿದ್ದರು. ಬೆಳೆದ ಹಣ್ಣು ಮಾರಾಟ ಮಾಡಲು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಹುಬ್ಬಳ್ಳಿ ಎಪಿಎಂಸಿ ಹಣ್ಣಿನ ಮಾರುಕಟ್ಟೆಗೆ ಬಂದಿದ್ದರು. ಹಣ್ಣಿನ ಗುಣಮಟ್ಟ ಪರೀಕ್ಷಿಸಿದ ವ್ಯಾಪಾರಿ 20 ಸಾವಿರಕ್ಕೆ ಖರೀದಿಸುವುದಾಗಿ ತೆಗೆದುಕೊಂಡಿದ್ದಾನೆ. ಇದಕ್ಕೆ ಒಪ್ಪಿದ ರೈತ ಹಣ್ಣನ್ನು ವ್ಯಾಪಾರಿಯ ಗೋದಾಮಿಗೆ ಇಳಿಸಲು ಮುಂದಾದಾಗ ಹಣ್ಣಿನ ಗುಣಮಟ್ಟ ಸರಿಇಲ್ಲ ಎಂದು ಮಾತನಾಡಿದಷ್ಟು ಹಣ ನೀಡಲು ಹಿಂದೇಟು ಹಾಕಿದ್ದಾನೆ. ಇದರಿಂದ ಆಕ್ರೋಶಗೊಂಡ ರೈತ ಹಣ್ಣಿಗೆ ಸೂಕ್ತ ಬೆಲೆ ಸಿಗದಿದ್ದರೆ ಅದನ್ನು ಮಾರಾಟ ಮಾಡುವುದೇ ಬೇಡ ಜನರಿಗೆ ಉಚಿತ ಹಂಚುತ್ತೇನೆಂದು
ಕೋರ್ಟ್ ವೃತ್ತದಲ್ಲಿ ತಂದು ಅಲ್ಲಿದ್ದ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಿದ.
ತದನಂತರ ಕೋರ್ಟ್ ವೃತ್ತಕ್ಕೆ ಬಂದ ರೈತ ಉಳಿದೆಲ್ಲ ಕಲ್ಲಂಗಡಿ ಹಣ್ಣನ್ನು ವೃತ್ತದ ಮಧ್ಯೆ ಸುರಿದ. ನಂತರ ಸಾರ್ವಜನಿಕರು ನಾ ಮುಂದು ತಾ ಮುಂದು ಎಂಬಂತೆ ಹಣ್ಣಗಳನ್ನು ತೆಗೆದುಕೊಂಡು ಹೋಗಿದ್ದಾರೆ.