ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಮೆಲೋಡಿ ಡ್ರಾಮಾ’ ಸಿನಿಮಾದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿದೆ. ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜನೆಯ “ಮೆಲೋಡಿ ಡ್ರಾಮಾ’ ಸಿನಿಮಾದಲ್ಲಿ ಎಂಟು ಹಾಡುಗಳಿದ್ದು, ಸೋನು ನಿಗಮ್, ಕೈಲಾಶ್ ಖೇರ್, ಪಲಾಕ್ ಮುಚ್ಚಲ್ ಮೊದಲಾದವರು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಜಯಂತ್ ಕಾಯ್ಕಿಣಿ, ಡಾ. ವಿ. ನಾಗೇಂದ್ರ ಪ್ರಸಾದ್, ಹೃದಯ ಶಿವ, ಧನಂಜಯ್ ರಂಜನ್ ಗೀತಗಳಿಗೆ ಸಾಹಿತ್ಯ ರಚಿಸಿದ್ದಾರೆ. “ಪ್ರೈಂ ಸ್ಟಾರ್ ಸ್ಟುಡಿಯೋ’ ಬ್ಯಾನರಿನಲ್ಲಿ ಎಂ. ನಂಜುಂಡ ರೆಡ್ಡಿ ನಿರ್ಮಿಸಿರುವ “ಮೆಲೋಡಿ ಡ್ರಾಮಾ’ ಸಿನಿಮಾಕ್ಕೆ ಮಂಜು ಕಾರ್ತಿಕ್ ಜಿ. ನಿರ್ದೇಶನ ಮಾಡಿದ್ದಾರೆ.
“ಮೆಲೋಡಿ ಡ್ರಾಮಾ’ ಸಿನಿಮಾದ ಹಾಡುಗಳ ಬಿಡುಗಡೆ ವೇಳೆ ಮಾತನಾಡಿದ ನಿರ್ದೇಶಕ ಮಂಜು ಕಾರ್ತಿಕ್, “ಭಾವನೆಗಳ ಜೊತೆಗೆ ಸಂಬಂಧ ಹೇಗೆ ಸಾಗುತ್ತದೆ ಎನ್ನುವುದರ ಸುತ್ತ ಇಡೀ ಸಿನಿಮಾದ ಕಥೆ ಸಾಗುತ್ತದೆ. ಪ್ರೀತಿ ಒಂದು ಸುಂದರ ಅನುಭವ. ನಂಬಿಕೆ ಅದರ ಆಧಾರ. ಇವೆರಡರ ನಡುವಿನ ಪಯಣದಲ್ಲಿ ಭಾವ-ಭಾವನೆಗಳ ತೊಡಲಾಟವನ್ನು ವ್ಯಕ್ತಪಡಿಸುವ ಕಥಾಹಂದರ ಸಿನಿಮಾದಲ್ಲಿದೆ. ಈಗಾಗಲೇ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು ಶೀಘ್ರದಲ್ಲಿಯೇ ತೆರೆಗೆ ಬರಲಿದೆ’ ಎಂದರು.
ಈ ಹಿಂದೆ “ದ್ವಿಪಾತ್ರ’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗಿರುವ ಸತ್ಯ “ಮೆಲೋಡಿ ಡ್ರಾಮಾ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. “ಈ ಸಿನಿಮಾದಲ್ಲಿ ಚಿಕ್ಕವಯಸ್ಸಿನಲ್ಲಿ ತಂದೆ-ತಾಯಿ ಕಳೆದುಕೊಂಡ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇದೊಂದು ಎಮೋಶನ್ ಜರ್ನಿಯ ಸಿನಿಮಾ. ಆಡಿಯನ್ಸ್‌ಗೆ ಹೊಸ ಅನುಭವ ಕೊಡುತ್ತದೆ’ ಎಂಬುದು ಪಾತ್ರದ ಬಗ್ಗೆ ಸತ್ಯ ಮಾತು.
“ಕಥೆಗೆ ತಕ್ಕಂತೆ 8 ಹಾಡುಗಳು ಸಿನಿಮಾದಲ್ಲಿದ್ದು, ಕೇಳುಗರಿಗೆ ಇಷ್ಟವಾಗಲಿದೆ’ ಎಂಬ ಭರವಸೆಯ ಮಾತು ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್ ಅವರದ್ದು.
ಇನ್ನು “ಮೆಲೋಡಿ ಡ್ರಾಮಾ’ ಚಿತ್ರದಲ್ಲಿ ಸುಪ್ರೀತಾ ನಾರಾಯಣ್ ನಾಯಕಿಯಾಗಿ ಬ್ಯಾಂಕ್ ಉದ್ಯೋಗಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಅನು ಪ್ರಭಾಕರ್, ರಾಜೇಶ್ ನಟರಂಗ, ಬಲರಾಜವಾಡಿ, ಅಶ್ವಿನ್ ಹಾಸನ್, ಬೇಬಿ ಸ್ಮಯಾ, ಲಕ್ಷ್ಮೀ ಸಿದ್ದಯ್ಯ, ಅಶ್ವಿನ್ ರಾವ್ ಪಲ್ಲಕ್ಕಿ, ರಂಜನ್ ಸನತ್, ವಿನೋದ್ ಗೊಬ್ಬರ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ನಟ ಚೇತನ್ ಚಂದ್ರ ಕೂಡ ಚಿತ್ರದ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಬೆಂಗಳೂರು, ಮಂಡ್ಯ, ಮೈಸೂರು, ಕುಶಾಲನಗರ, ಮಡಿಕೇರಿ, ಶಿವಮೊಗ್ಗ, ಮಂಗಳೂರು, ಕುಂದಾಪುರ, ವಿಜಯಪುರ ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಇಡೀ ಫ್ಯಾಮಿಲಿ ಜೊತೆಗೆ ಕೂತು ನೋಡುವಂಥ ಸಿನಿಮಾ ಮಾಡಿದ್ದೇವೆ ಎಂಬುದು ನಿರ್ಮಾಪಕ ನಂಜುಂಡ ರೆಡ್ಡಿ ಮಾತು.