“ವೀರ ಕೇಸರಿ’ ಸಿನಿಮಾದ “ಮೆಲ್ಲುಸಿರೆ ಸವಿಗಾನ…’ ಹಾಡು ಕನ್ನಡದ ಜನಪ್ರಿಯ ರೆಟ್ರೋ ಗೀತೆಗಳಲ್ಲೊಂದು. 1960ರ ದಶಕದ ಈ ಹಾಡಿನಲ್ಲಿ ವರನಟ ಡಾ. ರಾಜಕುಮಾರ್ ಹಾಗೂ ಲೀಲಾವತಿ ಜೋಡಿ ಹೆಜ್ಜೆ ಹಾಕಿ ಮೋಡಿ ಮಾಡಿತ್ತು. ಈಗ ಇದೇ ರೆಟ್ರೋ ಗೀತೆ “ಸ್ಫೂಕಿ ಕಾಲೇಜ್’ ಸಿನಿಮಾದಲ್ಲಿ ರಿಮಿಕ್ಸ್ ಆಗಿ ಹೊಸ ರೂಪದಲ್ಲಿ ಸಿನಿಪ್ರಿಯರ ಮುಂದೆ ಬಂದಿದೆ.
ಹೌದು, ಇತ್ತೀಚೆಗಷ್ಟೇ “ಸ್ಫೂಕಿ ಕಾಲೇಜ್’ ಸಿನಿಮಾದಲ್ಲಿ ರಿಮಿಕ್ಸ್ ಮಾಡಲಾದ “ಮೆಲ್ಲುಸಿರೆ ಸವಿಗಾನ…’ ಹಾಡು ಅದ್ದೂರಿಯಾಗಿ ಬಿಡುಗಡೆಯಾಯಿತು. ಹಿರಿಯ ನಿರ್ದೇಶಕ ಭಗವಾನ್, ಹಿರಿಯ ಸಾಹಿತಿ ಪ್ರೊ. ದೊಡ್ಡರಂಗೇಗೌಡ ಹಾಗೂ ಪತ್ರಕರ್ತ ಬಿ. ಗಣಪತಿ ಕಾರ್ಯಕ್ರಮದಲ್ಲಿ ಹಾಜರಿದ್ದು, ಈ ಹಾಡನ್ನು ಬಿಡುಗಡೆ ಮಾಡಿದರು.
ಇದೇ ವೇಳೆ ಹಾಡಿನ ಬಗ್ಗೆ ಮಾತನಾಡಿದ ಹಿರಿಯ ನಿರ್ದೇಶಕ ಭಗವಾನ್, “ಆಗಿನ ಕಾಲದಲ್ಲಿ ಸಿನಿಮಾ ಮಾಡುವುದು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಅಂತ ಸಮಯದಲ್ಲೂ ಕೂಡ “ಮೆಲ್ಲುಸಿರೆ ಸವಿಗಾನ…’ ಹಾಡನ್ನು ಎಲ್ಲ ಕಾಲಕ್ಕೂ ಎವರ್‌ಗ್ರೀನ್ ಆಗಿರುವಂತೆ ಮಾಡಲಾಗಿತ್ತು. ಈಗ ಮುಂದುವರೆದ ತಂತ್ರಜ್ಞಾನ ಬಳಸಿಕೊಂಡು ಆಹಾಡಿಗೆ ಯಾವುದೇ ಲೋಪವಾಗದಂತೆ ಮತ್ತೂಮ್ಮೆ ಮರುಸೃಷ್ಟಿ ಮಾಡಲಾಗಿದೆ. ಈ ಹಾಡು ಹೊಸ ರೂಪದಲ್ಲೂ ಗಮನ ಸೆಳೆಯುವಂತಿದೆ’ ಎಂದು ಮೆಚ್ಚುಗೆಯ ಮಾತನಾಡಿದರು.
“ಅರವತ್ತರ ದಶಕದ ಈ ಗೀತೆಯನ್ನು ಇಂದಿನ ಕಾಲಕ್ಕೆ ತಕ್ಕಂತೆ ಚಿತ್ರೀಕರಿಸುವುದು ಕಷ್ಟಸಾಧ್ಯ. ಅದರೆ ಅದನ್ನು ನಿರ್ದೇಶಕ ಭರತ್ ಮತ್ತು ಚಿತ್ರತಂಡ ಸಾಧ್ಯವಾಗಿಸಿದೆ’ ಎಂಬುದು ಸಾಹಿತಿ ಪ್ರೊ. ದೊಡ್ಡರಂಗೇಗೌಡ ಮಾತು.
“ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯಲ್ಲಿ ಹೊಸ ರೂಪದಲ್ಲಿ ಮೂಡಿಬಂದಿರುವ “ಮೆಲ್ಲುಸಿರೆ ಸವಿಗಾನ…’ ಹಾಡಿಗೆ ಐಶ್ವರ್ಯ ರಂಗರಾಜನ್ ಧ್ವನಿಯಾಗಿದ್ದಾರೆ. ದಾಂಡೇಲಿಯಲ್ಲಿ ಸುಮಾರು 250ಕ್ಕೂ ಹೆಚ್ಚು ಕಲಾವಿದರು ಮತ್ತು ತಂತ್ರಜ್ಞರ ಪಾಲ್ಗೊಳ್ಳುವಿಕೆಯಲ್ಲಿ ಹಾಡನ್ನು ಚಿತ್ರಿಸಿಕೊಳ್ಳಲಾಗಿದೆ. ಹಾಡಿನ ಬಗ್ಗೆ ಎಲ್ಲರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ’ ಎಂದು ಹಾಡಿನ ಬಗ್ಗೆ ವಿವರಣೆ ನೀಡಿದರು ನಿರ್ದೇಶಕ ಭರತ್ ಜಿ.
ನಟಿಯರಾದ ರೀಷ್ಮಾ ನಾಣಯ್ಯ, ಖುಷಿ ರವಿ, ನಾಯಕ ವಿವೇಕ್ ಸಿಂಹ, ಛಾಯಾಗ್ರಹಕ ಮನೋಹರ್ ಜೋಶಿ ಮುಂತಾದವರು ಹಾಡಿನ ಬಗ್ಗೆ ಮಾತನಾಡಿದರು. “ಶ್ರೀದೇವಿ ಎಂಟರ್ ಟೈನರ್’ ಬ್ಯಾನರ್‌ನಲ್ಲಿ ಹೆಚ್. ಕೆ ಪ್ರಕಾಶ್ “ಸ್ಫೂಕಿ ಕಾಲೇಜ್’ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ.