Advertisement

ಮೆಳವಂಕಿ ಬಳಿ ಶಿಥಿಲ ಸೇತುವೆ ಕುಸಿತ-ಸಂಚಾರ ಸ್ಥಗಿತ

02:46 PM Oct 06, 2020 | sudhir |

ಗೋಕಾಕ: ಸತತವಾಗಿ ಸುರಿಯುತ್ತಿರುವ ಮಳೆಯಿಂದ ಗೋಕಾಕ-ಕೌಜಲಗಿ ದಂಡಿನ ಮಾರ್ಗದಲ್ಲಿಯ ಮೆಳವಂಕಿ ಗ್ರಾಮದ ಬಳಿಯ ಸೇತುವೆ ಸೋಮವಾರ ಬೆಳಗಿನ ಜಾವ ಹಠಾತ್ತನೇ ಕುಸಿದು ದಂಡಿನ ಮಾರ್ಗ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

Advertisement

ಕಳೆದ 1985ರಲ್ಲಿ ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಂಡಿರುವ ಈ ಸೇತುವೆಯು ಪ್ರತಿ ಸಾರಿ ಪ್ರವಾಹ ಬಂದಾಗಲೆಲ್ಲಾ ಸಂಪೂರ್ಣವಾಗಿ ಮುಳುಗಡೆಯಾಗುತ್ತಿತ್ತು. ಅಲ್ಲದೇ ಕಳೆದ ಹಲವಾರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸೇತುವೆಯು ಶಿಥಿಲಗೊಂಡು ಬೆಳಗಿನ ಜಾವ 6-30 ಗಂಟೆ ಸುಮಾರಿಗೆ ಕುಸಿದು ಬಿದ್ದಿದೆ.
ಸುದೈವಕ್ಕೆ ಆ ಸಮಯದಲ್ಲಿ ಸೇತುವೆ ಮೇಲೆ ಯಾವುದೇ ವಾಹನ ಸಂಚಾರ ಇರಲಿಲ್ಲ. ಆದರೆ 6 ಗಂಟೆಗೆ ಬಸ್‌ ಸಮೇತ ಕೆಲ ಖಾಸಗಿ ವಾಹನಗಳು ಸೇತುವೆ ಮೇಲಿಂದ ದಾಟಿವೆ. ಸೇತುವೆ ಕುಸಿತಗೊಂಡಿದ್ದರಿಂದ ಮೆಳವಂಕಿ, ಹಡಗಿನಾಳ, ಕಲಾರಕೊಪ್ಪ ಗ್ರಾಮಗಳಿಗೆ ಸಂಚರಿಸಲು ತೊಂದರೆಯಾಗಿದೆ.

ಇದನ್ನೂ ಓದಿ :ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ವೇಳೆ ಚೆಂಡಿಗೆ ಎಂಜಲು ಮುಟ್ಟಿಸಿದ ವಿರಾಟ್ ಕೊಹ್ಲಿ!

ಈ ಸೇತುವೆ ಕುಸಿತದ ವಿಷಯ ತಿಳಿದ ಶಾಸಕ ಹಾಗೂ ಕೆಎಮ್‌ಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೂಡಲೇ ಅಧಿಕಾರಿಗಳಿಗೆ ಕೂಡಲೇ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ಶಾಸಕರ ಸೂಚನೆ ಮೇರೆಗೆ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರ ಪಿ.ವೈ.ಪವಾರ, ಕಾರ್ಯನಿರ್ವಾಹಕ ಅಭಿಯಂತರ ವಿ.ಎನ್‌.ಪಾಟೀಲ, ಎಇಇ ಆರ್‌.ಎ.ಗಾಣಿಗೇರ, ಇತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು

ಸೇತುವೆ ಕುಸಿತದಿಂದ ಸಾರ್ವಜನಿಕರಿಗೆ ರಸ್ತೆ ಸಂಚಾರಕ್ಕೆ ತೊಂದರೆ ಆಗುವುದನ್ನು ತಪ್ಪಿಸಲು ಕೂಡಲೇ 70 ಲಕ್ಷ ರೂ. ನೀಡುವದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ಅಧಿಕಾರಿಗಳು ಸಮರೋಪಾದಿಯಲ್ಲಿ ಬೈಪಾಸ್‌ ರಸ್ತೆ ನಿರ್ಮಿಸಿ ರೈತರಿಗೆ ಹಾಗೂ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ನಾಳೆಯಿಂದಲೇ ಕೆಲಸ ಆರಂಭಿಸಬೇಕು ಎಂದು ಸೂಚಿಸಿದ್ದಾರೆ. ಸೇತುವೆ ಕುಸಿತದ ಸಂದರ್ಭದಲ್ಲಿ ಯಾವುದೇ ಅನಾಹುತಗಳು ಸಂಭವಿಸದೇ ಇರುವದು ದೇವರ ದಯೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next