ಭಟ್ಕಳ: ರಾಜ್ಯ ಸರಕಾರಕ್ಕೆ ಮೇಕೆದಾಟು ಪಾದಯಾತ್ರೆಯಲ್ಲಿ ಭಾವಹಿಸುತ್ತಿರುವ ಲಕ್ಷಾಂತರ ಜನರನ್ನು ನೋಡಿ ನಡುಕ ಹುಟ್ಟಿದೆ ಎಂದು ಮಾಜಿ ಸಚಿವ ಹಾಗೂ ಪಾಲಿಕೆ ಚುನಾವಣೆಯ ಪಕ್ಷದ ಉಸ್ತುವಾರಿ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಾದಯಾತ್ರೆ ಯಶಸ್ವೀಯಾಗುತ್ತಿದೆ ಎನ್ನುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಅದ್ದರಿಂದ ಕೋವಿಡ್ ನೆಪದಲ್ಲಿ ಪ್ರಕರಣ ದಾಖಲಿಸುತ್ತಿದ್ದಾರೆ. ಎಷ್ಟು ಪ್ರಕರಣ ದಾಖಲಿಸಿದರೂ ಪಾದಯಾತ್ರೆ ನಿಲ್ಲುವುದಿಲ್ಲ, ಮಾರ್ಚ್ 3ರಂದು ನಾನೂ ಕೂಡಾ ಪಾದಯಾತ್ರೆಯಲ್ಲಿ ಭಾಗವಹಿಸುತ್ತೇನೆ ಎಂದರು.
ಈ ವೇಳೆ ಈಶ್ವರಪ್ಪನವರ ಹೇಳಿಕೆ ಕುರಿತು ಮಾತನಾಡಿ, ವಿಧಾನ ಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷ ಭಾಗವಹಿಸಿದ್ದು ಎಲ್ಲಾ ರೀತಿಯ ಸಹಕಾರ ನೀಡಿತ್ತು, ಆದರೆ ದೇಶಪ್ರೇಮಿಗಳ ಪಕ್ಷ ಎನ್ನುವ ಬಿ.ಜೆ.ಪಿ. ಪಕ್ಷದ ಹಿರಿಯರಾದ ಈಶ್ವರಪ್ಪನವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವಂತಹ ಹೇಳಿಕೆ ಕೊಟ್ಟಿದ್ದನ್ನು ನಾವು ವಿರೋಧಿಸಿದ್ದೇವೆ ಎಂದರು.
ನಾವು ಎಲ್ಲಾ ರೀತಿಯ ಸಹಕಾರ ಕೊಡಲು ತಯಾರಿದ್ದೆವು, ಆದರೆ ಓರ್ವ ಹಿರಿಯ ಸಚಿವರು ರಾಷ್ಟ್ರಧ್ವಜ ಮುಂದಿನ ದಿನಗಳಿಲ್ಲಿ ಕೆಳಗೆ ಬರುತ್ತದೆ, ಅಲ್ಲಿ ಕೇಸರಿ ಧ್ವಜ ಬರುತ್ತದೆ ಎಂದಾಗ ಸರಕಾರ ಅವರ ಮೇಲೆ ಕ್ರಮ ಕೈಗೊಂಡಿಲ್ಲ, ಬಿ.ಜೆ.ಪಿ. ರಾಷ್ಟ್ರದ ಕುರಿತು ಸ್ವಾಭಿಮಾನ, ರಾಷ್ಟ್ರ ಪ್ರೀತಿ, ದೇಶಾಭಿಮಾನದ ಕುರಿತು ಮಾತನಾಡುತ್ತಿದ್ದಾರೆ, ಪಕ್ಷದ ಹಿರಿಯರೋರ್ವರು ದೇಶದ ಸಂವಿಧಾನ, ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಾಗ ಕ್ರಮ ತೆಗೆದುಕೊಳ್ಳುವಲ್ಲಿ ಹಿಂದೇಟು ಹಾಕಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೂ ಕೂಡಾ ಇದು ತಪ್ಪು ಎಂದು ಹೇಳಿದ ಮೇಲೂ ಕೂಡಾ ಅವರ ಮೇಲೆ ಕ್ರಮವಾಗಿಲ್ಲ ಕಿಡಿಕಾರಿದರು.
ಇದನ್ನೂ ಓದಿ:ಕಾಶಿ ವಿಶ್ವನಾಥ ದೇವಾಲಯಕ್ಕೆ ಅನಾಮಧೇಯ ದಾನಿಯಿಂದ 60 ಕೆಜಿ ಬಂಗಾರ ದಾನ
ನಾವು ಹೇಳುವುದು ಸರಿಯಿದೆ ಎಂದು ರಾಷ್ಟ್ರೀಯ ಬಿ.ಜೆ.ಪಿ. ಅಧ್ಯಕ್ಷರು ಒಪ್ಪಿದ ನಂತರವೂ ಕೂಡಾ ಕ್ರಮ ತೆಗೆದುಕೊಂಡಿಲ್ಲದಿರುವುದು ಸರಿಯೇ ಎಂದು ಪ್ರಶ್ನಿಸಿದ ಅವರು ಕ್ರಮ ತೆಗೆದುಕೊಂಡಿಲ್ಲ ಎಂದರೆ, ದೇಶ ವಿರೋಧಿ ಕೆಲಸವಾಗಿದೆ. ರಾಷ್ಟ್ರಧ್ವಜದ ಕುರಿತು ಪ್ರತಿಯೋರ್ವರಿಗೂ ಗೌರವ ಇದೆ ಎನ್ನುವುದನ್ನು ಅವರು ತಿಳಿದುಕೊಳ್ಳಬೇಕು ಎಂದು ಕಿಡಿಕಾರಿದರು.