ಮೈಸೂರು: ಕಾವೇರಿ ಜಲವಿವಾದಕ್ಕೆ ಮೇಕೆದಾಟು ಯೋಜನೆ ಅನುಷ್ಠಾನವೇ ಏಕೈಕ ಪರಿಹಾರ ಎಂದು ಚಾಮರಾಜನಗರ ಸಂಸದ ವಿ ಶ್ರೀನಿವಾಸಪ್ರಸಾದ್ ಹೇಳಿದರು.
ಕಾವೇರಿ ಕ್ರಿಯಾ ಸಮಿತಿ ಪ್ರತಿಭಟನೆಯಲ್ಲಿ ಭಾಗಿಯಾದ ವೇಳೆ ಮಾತನಾಡಿದ ಅವರು, ಉತ್ತಮ ಮಳೆಯಾದಾಗ ಯಥೇಚ್ಛ ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ಆದರೆ ಮಳೆ ಕೊರತೆಯಾದಾಗ ಸಮಸ್ಯೆ ಎದುರಾಗುತ್ತದೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಂದು ಮತ್ತೊಂದು ಅಣೆಕಟ್ಟು ನಿರ್ಮಾಣವಾದರೆ ಮಳೆ ಕೊರತೆಯಾದರೂ ತಮಿಳುನಾಡಿಗೆ ನೀರು ಹರಿಸಬಹುದು. ಮೇಕೆದಾಟು ಯೋಜನೆ ಅನುಷ್ಠಾನವಾದರೆ ಸಮಸ್ಯೆಗೆ ಪರಿಹಾರ ಸಾಧ್ಯ ಎಂದರು.
ಕಾವೇರಿ ವಿಚಾರದಲ್ಲಿ ರಾಜ್ಯದ ಸಂಸದರು ಧ್ವನಿ ಎತ್ತುತ್ತಿಲ್ಲ ಎಂಬ ಕಾಂಗ್ರೆಸ್ ನಾಯಕರ ಟೀಕೆಗೆ ತಿರುಗೇಟು ನೀಡಿದ ಸಂಸದ ವಿ ಶ್ರೀನಿವಾಸಪ್ರಸಾದ್, ಕಾವೇರಿ ವಿಚಾರದಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಂದಾಳತ್ವದಲ್ಲಿ ಹೋರಾಟ ನಡೆಸುತ್ತಿದ್ದೇವೆ. ನಾವೆಲ್ಲರೂ ಒಗ್ಗಟ್ಟಾಗಿ ಹೋಗುತ್ತಿದ್ದೇವೆ. ಈ ವಿಚಾರದಲ್ಲಿ ಪ್ರತಿಯೊಬ್ಬರೂ ಮಾತನಾಡುವ ಅವಶ್ಯಕತೆ ಇಲ್ಲ. ರೀ ಸಿದ್ದರಾಮಯ್ಯ, ಇದನ್ನು ನೀವು ಹೇಳುವ ಅವಶ್ಯಕತೆಯಿಲ್ಲ. ನಾವು ನಿಮ್ಮಿಂದ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ. ಕಾವೇರಿ ವಿಚಾರದಲ್ಲಿ ಪಕ್ಷಾತೀತ ಹೋರಾಟ ಮಾಡಬೇಕು. ಈ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದರು.
ಇದನ್ನೂ ಓದಿ:FAB FOUR: ಏಕದಿನ ವಿಶ್ವಕಪ್ ನಲ್ಲಿ ಯಾರ ದಾಖಲೆಗಳು ಉತ್ತಮ? ಇಲ್ಲಿದೆ ಮಾಹಿತಿ
ಕಾಂಗ್ರೆಸ್ ನಲ್ಲಿ ಲಿಂಗಾಯತರ ಕಡೆಗಣನೆ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ಆಘಾತಕಾರಿಯಾದುದು. ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರು ಹೇಳಿರುವ ಈ ಮಾತು ತುಂಬಾ ಗಂಭೀರವಾದದ್ದು ಎಂದರು.
ಬಿಜೆಪಿ ಜೆಡಿಎಸ್ ಮೈತ್ರಿ ವಿಚಾರಕ್ಕೆ ಮಾತನಾಡಿದ ಅವರು, ಕಾಂಗ್ರೆಸ್ ನವರು ದೇಶದಲ್ಲಿ 30 ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿಯಾದರೆ ತಪ್ಪೇನು? ಅವರು ಮೈತ್ರಿ ಮಾಡಿಕೊಂಡರೆ ತಪ್ಪಲ್ಲ, ಇವರು ಮಾಡಿಕೊಂಡರೇ ತಪ್ಪಾ? ಮೈತ್ರಿಯ ಗೆಲುವು ಸೋಲು ಕುರಿತು ಜನರು ತೀರ್ಮಾನ ಮಾಡುತ್ತಾರೆ ಎಂದು ಮೈತ್ರಿ ಸಮರ್ಥಿಸಿಕೊಂಡರು.