Advertisement
2019ರ ಸೆಪ್ಟೆಂಬರ್‌ನಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಇಲಾಖೆ ಹಿರಿಯ ಅಧಿಕಾರಿಗಳನ್ನು ಕರೆದುಕೊಂಡು ಮೇಕೆದಾಟು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದರು. 5912 ಕೋಟಿ ರೂ. ವೆಚ್ಚದ ಈ ಯೋಜನೆಯ ಉದ್ದೇಶಿತ ಜಲಾಶಯ ನಿರ್ಮಾಣದ ಸ್ಥಳಗುರುತು ಮಾಡಿಸಿದ್ದರು. ಆಗ ಸಿಎಂ ಆಗಿದ್ದ ಎಚ್. ಡಿ.ಕುಮಾರಸ್ವಾಮಿ ತಮ್ಮ ಅವಧಿಯಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿಕೆ ನೀಡಿದ್ದರು. ತದ ನಂತರ ಸರ್ಕಾರ ಪತನವಾದ ಮೇಲೆ ಮೇಕೆದಾಟು ಯೋಜನೆಯ ಬಿಸಿ ತಣ್ಣಗಾಗಿತ್ತು. ಇದೀಗ ಮತ್ತೆ ಮೇಕೆದಾಟು ಯೋಜನೆ ಗರಿಗೆದರಿದೆ.
Related Articles
Advertisement
ಕುಡಿಯುವ ನೀರು, ವಿದ್ಯುತ್ ಉತ್ಪಾದನೆ : ಮೇಕೆದಾಟು ಸಮತೋಲನ ಜಲಾಶಯದ ಅಣೆಕಟ್ಟೆ ಎತ್ತರ 441.20 ಮೀಟರ್, ಅಗಲ 674.5 ಮೀಟರ್. ನೀರು ಶೇಖರಣಾ ಸಾಮರ್ಥ್ಯ 66 ಟಿಎಂಸಿ ನೀರಿನ ಹೊರ ಹರಿವಿಗಾಗಿ 15×12 ಮೀಟರ್ ಎತ್ತರದಷ್ಟು 17 ಗೇಟ್ ಅಳವಡಿಕೆ ಮಾಡಲಾಗುತ್ತದೆ. ಕುಡಿಯುವ ನೀರಿನ ಯೋಜನೆ ಜತೆಗೆ 440 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವಉದ್ದೇಶವೂ ಇದೆ. ಯೋಜನೆಯಿಂದ ತಮಿಳುನಾಡಿಗೆ ವಾರ್ಷಿಕವಾಗಿ ಬಿಡಬೇಕಾದ ನೀರಿನ ಪ್ರಮಾಣಕ್ಕೆ ಧಕ್ಕೆಯಾಗುವುದಿಲ್ಲ ಎಂಬುದು ರಾಜ್ಯ ಸರ್ಕಾರದ ಸಮಜಾಯಿಷಿ. 2018ರಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು 5912 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಇಂಧನ ಇಲಾಖೆಯಿಂದ 2 ಸಾವಿರ ಕೋಟಿ ಹಾಗೂ ಜಲಸಂಪನ್ಮೂಲ ಇಲಾಖೆಯಿಂದ 3912 ಕೋಟಿ ವಿನಿಯೋಗಿಸಲು ನಿರ್ಧರಿಸಲಾಗಿದೆ.
ಮೇಕೆದಾಟು ಯೋಜನೆಗೆ ತಮಿಳುನಾಡು ತಗಾದೆ ಏಕೆ? : ಬೆಂಗಳೂರು ನಗರ ಮತ್ತು ರಾಮನಗರ ಜಿಲ್ಲೆಯ ಕುಡಿಯುವ ನೀರಿನ ಬವಣೆ ನೀಗಿಸುವ ಉದ್ದೇಶದ ಮೇಕೆದಾಟು ಸಮತೋಲನ ಜಲಾಶ ಯೋಜನೆಗೆ ತಮಿಳು ನಾಡು ನಿರಂತರ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಮೇಕೆದಾಟು ಯೋಜನೆ ಅಸ್ತಿತ್ವಕ್ಕೆ ಬಂದರೆ ಕರ್ನಾಟಕ ತನ್ನ ಪಾಲಿನ ನೀರನ್ನು ಕೊಡಲು ಸಾಧ್ಯವಿಲ್ಲ ಎಂಬ ವಾದ, ಜಲಾಶಯ ನಿರ್ಮಾಣದಿಂದ ಅಪಾರ ಪ್ರಮಾಣದ ಕಾಡು ಮುಳುಗಡೆ ಯಾಗಲಿದೆ ಎಂಬ ವಾದ ಮಂಡಿಸಿದೆ. ಸುಪ್ರೀಂ ಕೋರ್ಟಿನ ಅನುಮತಿ ಇಲ್ಲದೆ, ಇಲ್ಲವೇ ಕಾವೇರಿ ನದಿ ಪಾತ್ರದ ರಾಜ್ಯಗಳ ಅನುಮತಿ ಇಲ್ಲದೆ ಜಲಾಶಯ ನಿರ್ಮಾಣ ಕೂಡದು ಎಂದು ತಮಿಳುನಾಡು ರಾಜ್ಯ ಸರ್ಕಾರ -ಕೇಂದ್ರ ಸರ್ಕಾಕ್ಕೆ 2019ರಅಕ್ಟೋಬರ್‌ನಲ್ಲಿ ಪತ್ರ ಬರೆದಿದೆ. ಅಲ್ಲದೇ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಸಭೆಗಳಲ್ಲೂ ತಮಿಳುನಾಡು ಸರ್ಕಾರ ತನ್ನ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಮೇಕೆದಾಟು ಯೋಜನೆ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ 2018ರಲ್ಲಿ ಸುಪ್ರೀಂ ತೀರ್ಪು ಮತ್ತು ಕಾವೇರಿ ವಾಟರ್ ಡಿಸ್ಪ್ಯೂಟ್ಸ್ ಟ್ರಿಬ್ಯುನಲ್‌ನ (ಸಿಡಬ್ಲ್ಯೂಡಿಟಿ) ಅಂತಿಮ ತೀರ್ಪಿನ ವಿರುದ್ಧವಾಗಿದೆ. ಕಾವೇರಿ ನದಿ ನೀರಿನ ಶೇಖರಣೆಗೆ ಕರ್ನಾಟಕದ ಬಳಿ ಈಗಾಗಲೇ ಸಾಕಷ್ಟು ಶೇಖರಣ ಸಾಮರ್ಥ್ಯವಿದೆ ಎಂಬುದಾಗಿ ಇವೆರೆಡು ತೀರ್ಪುಗಳಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಹೊಸ ಜಲಾಶಯದ ಅಗತ್ಯವಿಲ್ಲ ಎಂದು ತಮಿಳುನಾಡು ವಿರೋಧ ವ್ಯಕ್ತಪಡಿಸಿದೆ.
-ಬಿ.ವಿ. ಸೂರ್ಯಪ್ರಕಾಶ್