ರಾಮನಗರ: ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಜಲಾಶಯ ನಿರ್ಮಾಣದ ವಿಚಾರದಲ್ಲಿ ಆಗೊಮ್ಮೆ, ಈಗೊಮ್ಮೆ ಕನ್ನಡ ಪರ, ರೈತ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದೆ, ಈ ಹೋರಾಟ ಜನಾಂದೋಲನ ಸ್ವರೂಪ ಪಡೆಯದ ಹೊರತು ಯೋಜನೆ ಸಾಕಾರವಾಗದು ಎಂಬ ಅಭಿಪ್ರಾಯಗಳು ಜಿಲ್ಲೆಯ ಸಾಮಾನ್ಯ ಜನರಲ್ಲಿ ವ್ಯಕ್ತವಾಗಿದೆ.
ರಾಜಕಾರಣಿಗಳಲ್ಲಿ ಐಕ್ಯತೆ, ಇಚ್ಛಾಶಕ್ತಿ ಕೊರತೆ!: ರಾಮನಗರ, ಬೆಂಗಳೂರು ನಗರ, ಕೋಲಾರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಕೊರತೆ ನೀಗಿಸಲು ಜಿಲ್ಲೆಯ ಕನಕಪುರ ತಾಲೂಕಿನ ಮೂಲಕ ಹರಿಯುವ ಕಾವೇರಿ ನದಿಗೆ ಅಡ್ಡಲಾಗಿ ಜಲಾಶಯ ನಿರ್ಮಿಸಬೇಕು ಎಂಬುದು ದಶಕಗಳ ಕೂಗು. ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಈ ಬಗ್ಗೆ ಭರವಸೆ ನೀಡಿವೆ ಹೊರತು ಅನುಷ್ಠಾನಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನ ಪಟ್ಟಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿದೆ. ರಾಜ್ಯದ ಜನನಾಯಕರಲ್ಲಿ ಐಕ್ಯತೆಯ ಕೊರತೆ ಇದೆ. ರಾಜಕಾರಣ ಬದಿಗೊತ್ತಿ ಯೋಜನೆ ಸಾಕಾರಕ್ಕೆ ಇವರಲ್ಲಿ ಇಚ್ಚಾಶಕ್ತಿಯ ಕೊರತೆ ಇದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿದೆ.
ಜನಾಂದೋಲನದ ಅಗತ್ಯ..!: ಯೋಜನೆ ಅನುಷ್ಠಾ ನಕ್ಕೆ ಸದ್ಯ ಆಗೊಮ್ಮೆ, ಈಗೊಮ್ಮೆ ನಡೆಯುತ್ತಿರುವ ಹೋರಾಟಗಳು ಜನಾಂದೋಲನ ಸ್ವರೂಪ ಪಡೆಯ ಬೇಕು. ರಾಜಕರಣಿಗಳನ್ನೇ ನೆಚ್ಚಿ ಕುಳಿತರೆ ಯೋಜನೆ ಸಾಕಾರವಾಗದು ಎಂಬ ಅಭಿಪ್ರಾಯಗಳು ಜಿಲ್ಲೆಯಲ್ಲಿ ಮೂಡ ತೊಡಗಿದೆ. ಚುನಾಯಿತ ಪ್ರತಿನಿಧಿಗಳ ಮೇಲೆ, ಸರ್ಕಾರದ ಮೇಲೆ ಒತ್ತಡ ನಿರಂತರವಾಗಿ ಹೇರಲು ಜನಾಂದೋಲನದ ಅಗತ್ಯವಿದೆ. ಜನಾಂದೋಲನದ ಬಿಸಿ ಕಾವೇರಿ ಕೊಳ್ಳದ ಎಲ್ಲಾ ರಾಜ್ಯಗಳ ಜನತೆಗೂ ಅರ್ಥವಾಗಬೇಕು ಆ ಮೂಲಕ ಎಲ್ಲರ ಸಹಕಾರದಲ್ಲಿ ಡ್ಯಾಂ ನಿರ್ಮಾಣವಾಗಬೇಕು ಎಂಬುದು ಈ ಭಾಗದ ಜನರ ಆಶಯ.
ಬೆಂಗಳೂರು ನಾಗರಿಕರಿಗೆ ನೀರು ಬೇಕು, ಚಳವಳಿ ಬೇಡವೆ?: ಬೆಂಗಳೂರು ನಗರ ಎದುರಿಸುತ್ತಿರುವ ಕುಡಿಯುವ ನೀರಿನ ಕೊರತೆ ನೀಗಿಸಲು ಮೇಕೆದಾಟು ಡ್ಯಾಂ ನಿರ್ಮಾಣ ತೀರಾ ಅಗತ್ಯ. ಬೆಂಗಳೂರು ನಗರ ದಲ್ಲಿ ವಾಸಿಸುವ ಎಲ್ಲರಿಗೂ ಈ ಯೋಜನೆಯ ಲಾಭ ದೊರೆಯುತ್ತದೆ. ಆದರೆ ಯೋಜನೆಯ ಅನುಷ್ಠಾನ ವಿಳಂಭಕ್ಕೆ ರಾಜಧಾನಿ ಜನರಲ್ಲೇಕೆ ಕಿಚ್ಚು ಹೊತ್ತಿ ಕೊಂಡಿಲ್ಲ ಎಂಬುದು ಈ ಭಾಗದ ಜನರ ಪ್ರಶ್ನೆ. ವಿಶೇಷವಾಗಿ ಐಟಿ, ಬಿಟಿ ಕಂಪನಿಗಳ ನೌಕರರ ಮೇಲೆ ಅಪಾರ ಸಿಟ್ಟು ಜನಸಾಮಾನ್ಯರಲ್ಲಿದೆ. ಈ ನೆಲದಲ್ಲಿ ಉದ್ಯೋಗ ಸಂಪಾದಿಸಿ, ಜೀವನ ಕಟ್ಟಿಕೊಳ್ಳುವ ಈ ಮಂದಿ ಇಲ್ಲಿನ ಸಮಸ್ಯೆಗಳಿಗೂ ಸ್ಪಂದಿಸಬೇಕಲ್ಲವೇ ಎಂಬು ಈ ಜನರ ಪ್ರಶ್ನೆ!
ಎಲ್ಲಾ ಭಾಷಿಕರು ಕೈ ಜೋಡಿಸಲಿ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ದಶಕಗಳ ಕಾಲ ರಾಜ್ಯವನ್ನು ಗೋಳಾಡಿಸಿದ ತಮಿಳುನಾಡು ಈಗ ಮೇಕೆ ದಾಟು ಯೋಜನೆಯ ವಿಚಾರದಲ್ಲೂ ವಿನಾಕಾರಣ ಕ್ಯಾತೆ ತೆಗೆಯುತ್ತಿದೆ. ತನ್ನ ಪಾಲಿನ ನೀರನ್ನು ದೊರಕಿಸಿಕೊಡಲು ಬದ್ಧವಾಗಿರುವುದಾಗಿ ಕರ್ನಾಟಕ ಸರ್ಕಾರ ಪದೇ ಪದೇ ಹೇಳಿದೆ. ಆದರೂ ತಮಿಳುನಾಡು ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ. ಬೆಂಗಳೂರು ನಗರದಲ್ಲಿ ವಾಸಿಸುವ ತಮಿಳುನಾಡು ಮೂಲದ ಕುಟುಂಬಗಳು ಕುಡಿಯುವ ನೀರಿನ ಕೊರತೆ ಬಗ್ಗೆ ದನಿ ಎತ್ತ ಬೇಕಾಗಿದೆ.
ಎಲ್ಲ ನಾಗರಿಕರು ತಮ್ಮ ಜಾತಿ, ಮತ, ಭಾಷೆ ತೊರೆದು ಯೋಜನೆ ಪರ ನಿಂತು ಹೋರಾಟಕ್ಕೆ ಬಲ ತುಂಬಬೇಕು ಎಂಬುದು ಜನಸಾಮಾನ್ಯರ ವಾದ. ಪ್ರತಿಕ್ರಿಯೆ: ಸಂಪತ್, ರೈತ ಮುಖಂಡರು ಹಾಗೂ ಅಧ್ಯಕ್ಷರು, ಮೇಕೆದಾಟು ಹೋರಾಟ ಸಮಿತಿ ಮೇಕೆ ದಾಟು ಯೋಜನೆಗೆ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ಇದನ್ನೇ ನೆಪವಾಗಿಟ್ಟು ಕೊಂಡು ರಾಜ್ಯದ ಜನನಾಯಕರು ಯೋಜನೆ ಕೈಗೆತ್ತಿಕೊಳ್ಳಲು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಇದೇ 23ರಂದು ಮೇಕೆದಾಟಿನಿಂದ ರೈತರು, ಜನಸಾಮಾ ನ್ಯರು ಪಾದಯಾತ್ರೆ ಮೂಲಕ ವಿಧಾನಸೌಧದ ಬಳಿಗೆ ತಲುಪಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು. ಈ ಹೋರಾಟದಲ್ಲಿ ಬೆಂಗಳೂರು ನಗರ ನಿವಾಸಿಗಳು ಸಹ ಭಾಗವಹಿಸಬೇಕು.
ಬಿ.ವಿ.ಸೂರ್ಯ ಪ್ರಕಾಶ್