Advertisement

ಮೇಕೆದಾಟು 2.0: ಮುರುಘಾ ಶ್ರೀಗಳು ಸೇರಿ ಅನೇಕ ಸ್ವಾಮೀಜಿಗಳ ಪಾದಯಾತ್ರೆ

04:13 PM Feb 28, 2022 | Team Udayavani |

ಬೆಂಗಳೂರು : ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆಯ ಹೊರಾಟ ಯಶಸ್ವಿಯಾಗಲಿ ಎಂದು ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಮುರುಘಾ ಶರಣ ಸ್ವಾಮೀಜಿಗಳು ಸೋಮವಾರ ಹಾರೈಸಿದ್ದಾರೆ.

Advertisement

ಬಿಡದಿ ಮತ್ತು ಕೆಂಗೇರಿ ನಡುವಣ ಕೇತಗಾನಹಳ್ಳಿಯ ಬಳಿ ಅನೇಕ ಸ್ವಾಮೀಜಿಗಳ ಜತೆ ಪಾದಯಾತ್ರೆ ಸೇರಿಕೊಂಡ ಶ್ರೀಗಳು ಹೋರಾಟ ಯಶಸ್ವಿಯಾಗಲಿ ಎಂದು ಆಶೀರ್ವಾದ ಮಾಡಿದರು.ಈ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಅವರು ಸ್ವಾಮೀಜಿಗಳ ಕಾಲಿಗೆರಗಿ ನಮಿಸಿದರು.

ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್ ಅವರು, ‘ಮುರುಘಾ ಮಠದ ಶ್ರೀಗಳು ಎಲ್ಲ ಧರ್ಮ ಗುರುಗಳ ಜೊತೆಯಲ್ಲಿ ಪಾದಯಾತ್ರೆಗೆ ಆಗಮಿಸಿದ್ದಾರೆ. ಸ್ವಾಮೀಜಿಗಳ ಪಾದಗಳಿಗೆ ನಮ್ಮ ನಮನಗಳು. ಮಾದಾರ ಚನ್ನಯ್ಯ ಸ್ವಾಮೀಜಿಗಳು, ಮಡಿವಾಳ ಶ್ರೀಗಳು, ಗಂಗಾವತಿ ಶ್ರೀಗಳು, ಹಾವೇರಿ ಶ್ರೀಗಳು, ಹರಿಹರ ಶ್ರೀಗಳು ಸೇರಿದಂತೆ ಎಲ್ಲರೂ ಈ ಐತಿಹಾಸಿಕ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಲು ಬಂದಿದ್ದಾರೆ.ಕುಡಿಯುವ ನೀರಿಗಾಗಿ ಸ್ವಾಮೀಜಿಗಳು ನಮ್ಮ ಕಾರ್ಯಕರ್ತರು ಹಾಗೂ ನಾಯಕರ ಜತೆ ಹೆಜ್ಜೆ ಹಾಕುತ್ತಿದ್ದಾರೆ. ಮುರುಘಾ ಮಠದ ಶ್ರೀಗಳ ನೇತೃತ್ವ ರಾಜ್ಯದ ಇತಿಹಾಸ ಪುಟಕ್ಕೆ ಸೇರಲಿದೆ. ಎಲ್ಲ ಧರ್ಮ ಪೀಠಗಳನ್ನು ಸ್ಥಾಪಿಸಿದ ಏಕೈಕ ಶ್ರೀಗಳು ಎಂದರೆ ಅದು ನಮ್ಮ ಮುರುಘಾ ಮಠದ ಶ್ರೀಗಳು ಎಂದರು.

ಈ ಯಾತ್ರೆ ಯಾವ ಶುಭ ಗಳಿಗೆಯಲ್ಲಿ ಆರಂಭವಾಗಿದೆ ಎಂದರೆ ಬುದ್ಧ ಬಸವನು ಮನೆಬಿಟ್ಟ ಗಳಿಗೆಯಲ್ಲಿ, ಏಸು ಕ್ರಿಸ್ತ ಶಿಲುಬೆಗೆ ಏರಿದ ಗಳಿಗೆಯಲ್ಲಿ, ಪ್ರವಾದಿ ಪೈಗಂಬರ್ ದಿವ್ಯವಾಣಿ ಕೇಳಿದ ಗಳಿಗೆಯಲ್ಲಿ, ಮಹಾತ್ಮಾಗಾಂಧಿ ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆಯಲ್ಲಿ, ಭೀಮಾಭಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮ ಕೊಟ್ಟ ಗಳಿಗೆಯಲ್ಲಿ, ಕೆಂಗಲ್ ಹನುಮಂತಯ್ಯನವರು ವಿಧಾನಸೌಧ ಕಟ್ಟಿದ ಗಳಿಗೆಯಲ್ಲಿ ಶ್ರೀಮತಿ ಸೋನಿಯಾ ಗಾಂಧಿ ಅವರು ಪ್ರಧಾನಮಂತ್ರಿ ಸ್ಥಾನ ತ್ಯಾಗ ಮಾಡಿ ಅದನ್ನು ಮನಮೋಹನ್ ಸಿಂಗ್ ಅವರಿಗೆ ಕೊಟ್ಟ ಗಳಿಗೆಯಲ್ಲಿ ಈ ಪಾದಯಾತ್ರೆ ಆರಂಭವಾಗಿದೆ. ಇಂತಹ ಶುಭ ಗಳಿಗೆಯಲ್ಲಿ ಮುರುಘಾ ಮಠ ಶ್ರೀಗಳು ಬಂದು ನಮಗೆ ಆಶೀರ್ವಾದ ಮಾಡಿದ್ದಾರೆ ಎಂದರು.

ಇದು ನಮ್ಮ ಹೋರಾಟವಲ್ಲ, ನಿಮ್ಮ ಹೋರಾಟ. ಈ ಹೋರಾಟಕ್ಕೆ ಶ್ರೀಗಳನ್ನು ನಾನು ಸ್ವಾಗತ ಮಾಡುತ್ತೇನೆ’ ಎಂದರು.

Advertisement

ನೀರಿಗಾಗಿ ಹೋರಾಟ  ಈ ಕಾಲಘಟ್ಟದ ಅನಿವಾರ್ಯ

ಮುರುಘಾಮಠದ ಶ್ರೀಗಳು ಮಾತನಾಡಿ, ‘ರಾಜ್ಯದಲ್ಲಿ ವಿವಿಧ ನೀರಾವರಿ ಹೋರಾಟಗಳು ನಡೆಯುತ್ತಿವೆ. ಇಲ್ಲಿ ಮೇಕೆದಾಟು ಯೋಜನೆ, ಉತ್ತರ ಕರ್ನಾಟಕದಲ್ಲಿ ಮಹದಾಯಿ ಯೋಜನೆಗಾಗಿ ಹೋರಾಟ ನಡೆಯುತ್ತಿವೆ. ನೀರಿಗಾಗಿ ಹೋರಾಟ ಮಾಡಬೇಕಾಗಿರುವುದು ಈ ಕಾಲಘಟ್ಟದ ಅನಿವಾರ್ಯ. ನೀರು ನಮ್ಮ ಹಕ್ಕು. ಆ ದಿಸೆಯಲ್ಲಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಯಶಸ್ವಿ ಹೋರಾಟ ನಡೆಯುತ್ತಿದೆ. ಇಲ್ಲಿ ನಾವು ಅವರ ಶಕ್ತಿ, ಯುಕ್ತಿ ಹಾಗೂ ಭಕ್ತಿಯನ್ನು ನೋಡಬಹುದು. ನಮಗೂ ಈ ಹೋರಾಟದಲ್ಲಿ ಭಾಗವಹಿಸಬೇಕು ಎಂಬ ಅಪೇಕ್ಷೆ, ಒತ್ತಾಯ ಎಲ್ಲವೂ ಇದೆ.ಸ್ವಾಮಿಗಳಾಗಿ ನಮ್ಮ ಮೊದಲ ಕರ್ತವ್ಯ ಎಂದರೆ ಸಮಾಜದಲ್ಲಿ ಸಾಮರಸ್ಯ ಹಾಗೂ ಶಾಂತಿ ಕಾಪಾಡುವುದು. ನೊಂದವರಿಗೆ ಸಾಂತ್ವನ ಹೇಳುವುದು, ಸತ್ಕಾರ್ಯಕ್ಕೆ ಬೆಂಬಲ ನೀಡುವುದು.ಇಲ್ಲಿ ಸತ್ಕಾರ್ಯ ನಡೆಯುತ್ತಿದೆ. ಅದು ಮೇಕೆದಾಟು ಯೋಜನೆ ಆಗಲೇಬೇಕು ಎಂಬ ಹೋರಾಟ. ಇದಕ್ಕೆ ನಾವುಗಳು ಬೆಂಬಲ ನೀಡುತ್ತಿದ್ದೇವೆ. ನಮಗೆ ಯಾವುದೇ ಪ್ರಾದೇಶಿಕ ಭಾವನೆ ಇಲ್ಲ. ಈ ಭಾಗದ ಜನರ ಹಿತಕ್ಕೆ ಮೇಕೆದಾಟು ಯೋಜನೆ ಆಗಲಿ ಎಂದು ಆಗ್ರಹಿಸಿ, ನಿಮ್ಮ ಹೋರಾಟಕ್ಕೆ ಜಯ ಸಿಗಲಿ ಎಂದು ಹಾರೈಸುತ್ತೇವೆ ಎಂದರು.

ಹವಾನಿಯಂತ್ರಿತ ಕೊಠಡಿಯಲ್ಲಿ ನೆಮ್ಮದಿಯಾಗಿ ಕಾಲ ಕಳೆಯಬಹುದಾಗಿದ್ದರೂ ಜನರ ಹಿತಕ್ಕಾಗಿ ಉರಿ ಬಿಸಿಲಿನಲ್ಲಿ ಶಿವಕುಮಾರ್ ಅವರು ಪಾದಯಾತ್ರೆ ಮಾಡುತ್ತಿದ್ದಾರೆ. ಅವರ ಈ ಹೋರಾಟ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದೆ. ಅವರ ಈ ಹೋರಾಟಕ್ಕೆ ನಮ್ಮ ಸಂಪೂರ್ಣ ಸಹಕಾರ ಇದೆ. ನಮ್ಮ ನೀರು ನಮ್ಮ ಹಕ್ಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next