ಚನ್ನಪಟ್ಟಣ: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಿಪಡಿಸಬಾರದು. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಈ ವಿಚಾರದಲ್ಲಿ ಪ್ರಬುದ್ಧತೆ ಮೆರೆಯಬೇಕು ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಆಗ್ರಹಿಸಿದರು.
ಪಟ್ಟಣದ ಗುರುವಪ್ಪ ವೃತ್ತದಲ್ಲಿ ಮೇಕೆದಾಟು ಯೋಜನೆಗೆ ನಮ್ಮ ಮನವಿ ಎಂಬ ವಿನೂತನ ಪ್ರತಿಭಟನೆ ನಡೆಸಿ ಮಾತನಾಡಿ, ತಮಿಳುನಾಡು ಮತ್ತು ನಮ್ಮ ರಾಜ್ಯದ ನಡುವೆ ಈ ಹಿಂದಿನಿಂದಲೂ ನೀರು ಹಾಗೂ ಗಡಿವಿವಾದಕ್ಕೆ ಸಂಬಂಧಿಸಿದಂತೆ ವ್ಯಾಜ್ಯಗಳು ನಡೆಯುತ್ತಿದೆ. ಜಯಲಲಿತಾ ಮತ್ತು ಕರುಣಾನಿಧಿಯ ತನಕ ಎರಡು ರಾಜ್ಯಗಳ ನಡುವೆ ಬಾಂಧವ್ಯವೇ ವೃದ್ಧಿಯಾಗಲಿಲ್ಲ. ಮುಂದಾದರೂ ಎರಡು ರಾಜ್ಯಗಳನಡುವಿನ ದ್ವೇಷಮಯ ವಾತಾವರಣ ತಿಳಿಯಾಗ ಬೇಕಿದೆ. ಇದಕ್ಕೆ ಮೇಕೆದಾಟು ಯೋಜನೆ ನಾಂದಿಯಾಗಬೇಕಿದೆ ಎಂದು ಹೇಳಿದರು.
ಕಾವೇರಿ ಹೋರಾಟದಿಂದ ನಷ್ಟ: ಕಾವೇರಿ ಹೋರಾಟದಿಂದ ಉಂಟಾದ ನಷ್ಟ, ಸಾವುನೋವುಗಳು ನಮ್ಮ ಕಣ್ಣ ಮುಂದಿವೆ. ಯುವ ಉತ್ಸಾಹಿ ನಾಯಕರಾಗಿರುವತಮಿಳುನಾಡಿನ ಸಿಎಂ ಸ್ಟಾಲಿನ್ ಮೇಕೆದಾಟು ಯೋಜನೆಗೆ ಅಡ್ಡಿಯುಂಟು ಮಾಡುವ ಕೆಲಸಕ್ಕೆ ಕೈಹಾಕಬಾ ರದು. ಎರಡು ರಾಜ್ಯಗಳ ನಡುವೆ ಮುಂದಿನ ದಿನಗಳಲ್ಲಾದರೂ, ಭಾಂದವ್ಯ ವೃದ್ಧಿಯಾಗಲು ಅವರು ಶ್ರಮಿಸಬೇಕು ಎಂದು ಮನವಿ ಮಾಡಿದರು.
2 ರಾಜ್ಯಕ್ಕೆ ಉಪಯೋಗ: ಮೇಕೆದಾಟು ಯೋಜನೆ ಆರಂಭವಾದರೆ ಇದು ಕೇವಲ ನಮ್ಮ ರಾಜ್ಯಕ್ಕೆ ಮಾತ್ರ ಉಪಯೋಗವಾಗುವುದಿಲ್ಲ. ತಮಿಳುನಾಡಿಗೂ ಇದು ಸಾಕಷ್ಟು ಅನುಕೂಲವಾಗಲಿದೆ. ಕೇವಲ ರಾಜಕೀಯ ಕಾರಣಕ್ಕಾಗಿ ಬಹುಪಯೋಗಿ ಈ ಯೋಜನೆಗೆ ಯಾವುದೇ ಅಡ್ಡಿ ಮಾಡಬಾರದು. ಈ ಯೋಜನೆಯನ್ನು ಶೀಘ್ರವಾಗಿ ಆರಂಭಿಸಬೇಕು ಎಂದು ಆಗ್ರಹಿಸಿದರು. ಯೋಜನೆಅನುಷ್ಠಾನವಾಗಲಿ:ಯೋಜನೆ ಶೀಘ್ರವಾಗಿಅನುಷ್ಠಾನವಾಗಲೇಬೇಕು. ಈ ಯೋಜನೆಯ ಬಗ್ಗೆ ತಮಿಳುನಾಡು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಅವಶ್ಯಕತೆಯಿದೆ. ಈ ಕಾರಣಕ್ಕಾಗಿ ನಮ್ಮ ರಾಜ್ಯದ ಮುತ್ಸದ್ದಿ ರಾಜಕಾರಣಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾರ್ಗದರ್ಶನದಲ್ಲಿ ಎಲ್ಲಾಪಕ್ಷಗಳ ನಾಯಕರು ಹಾಗೂ ಸಂಘಟನೆಗಳ ಮುಖಂಡರು ಹಾಗೂ ರೈತರ ನಿಯೋಗ ಕೇಂದ್ರ ಸರ್ಕಾರವನ್ನು ಭೇಟಿ ಮಾಡಬೇಕು. ಡಿಸಿಎಂ ಡಾ. ಅಶ್ವಥ್‌ನಾರಾಯಣ್, ಎಚ್‌ಡಿಕೆ ಹಾಗೂ ಡಿಕೆಶಿ ಈ ವಿಚಾರವಾಗಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ವೇದಿಕೆಯ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್ ಗೌಡ, ಮುಖಂಡರಾದ ಎಂಟಿಆರ್ ತಿಮ್ಮರಾಜು, ಮುದಗೆರೆ ಜಯಕುಮಾರ್(ಜೆಕೆ), ಸುಣ್ಣಘಟ್ಟ ಅಶ್ವಥ್, ಬಾಬ್‌ಜಾನ್, ರಮೇಶ್, ಪುನೀತ್, ಸುರೇಶ್ (ರ್‍ಯಾಂಬೋ) ಉಪಸ್ಥಿತರಿದ್ದರು.