Advertisement

ಮೇಕೆದಾಟು ಯಾತ್ರೆಯಲ್ಲ, ಪಶ್ಚಾತಾಪದ ಯಾತ್ರೆ : ಅಶ್ವತ್ಥನಾರಾಯಣ ಲೇವಡಿ

04:42 PM Jan 10, 2022 | Team Udayavani |

ಬೆಂಗಳೂರು:ಸಾಮಾನ್ಯ ಜನರು ಸಂಕಷ್ಟ ಅನುಭವಿಸಿದರೂ ಪರವಾಗಿಲ್ಲ, ತಮಗೆ ಪ್ರಚಾರ ಸಿಕ್ಕಿದರೆ ಸಾಕು ಎನ್ನುವ ದುರುದ್ದೇಶದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಕೆದಾಟು ಯೋಜನೆಯ ಹೆಸರು ಹೇಳಿಕೊಂಡು ಪಾದಯಾತ್ರೆಯ ನಾಟಕವಾಡುತ್ತಿದ್ದಾರೆ. ಆದರೆ, ಇದು ಪಶ್ಚಾತ್ತಾಪದ ಯಾತ್ರೆಯಾಗಿದೆ ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಕಟಕಿಯಾಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, `ಕೋವಿಡ್ ನಿಯಮಾವಳಿಯನ್ನು ಉಲ್ಲಂಘಿಸಿರುವ ಕಾಂಗ್ರೆಸ್ಸಿನ 30ಕ್ಕೂ ಹೆಚ್ಚು ನಾಯಕರ ಮೇಲೆ ಗೃಹ ಇಲಾಖೆಯು ಈಗಾಗಲೇ ಎಫ್ಐಆರ್ ದಾಖಲಿಸಿದೆ. ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಗಳ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದರು.

`ಮೇಕೆದಾಟು ಯೋಜನೆಗೆ 2013ರಲ್ಲೇ ಹಸಿರು ನಿಶಾನೆ ಸಿಕ್ಕಿತ್ತು. ಆಗ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವೇ ಅಧಿಕಾರದಲ್ಲಿತ್ತು. ಅಂದಿನ ಸರಕಾರದಲ್ಲಿ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಈ ಯೋಜನೆಯ ಬಗ್ಗೆ ಆಸಕ್ತಿ ವಹಿಸಿದ್ದರು. ಆದರೆ, 2019ರವರೆಗೂ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ನಿಟ್ಟಿನಲ್ಲಿ ಒಂದೇ ಒಂದು ಹೆಜ್ಜೆಯನ್ನೂ ಮುಂದಿಡಲಿಲ್ಲ. ಆಗ ಸಚಿವರಾಗಿದ್ದ ಶಿವಕುಮಾರ್ ಏಕೆ ಜಾಣ ಮೌನ ವಹಿಸಿದ್ದರು?’ ಎಂದು ಸಚಿವರು ಪ್ರಶ್ನಿಸಿದರು.

ಶಿವಕುಮಾರ್ ಅವರು ಸದನದಲ್ಲಿ ಒಂದು ಬಾರಿಯೂ ಮೇಕೆದಾಟು ಯೋಜನೆಯ ಬಗ್ಗೆ ಮಾತನಾಡಿಲ್ಲ. ಹಿಂದಿನ ಸರಕಾರದಲ್ಲಿ ತ್ರಿಮೂರ್ತಿಗಳಾಗಿದ್ದ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಎಂ.ಬಿ.ಪಾಟೀಲರ ಅಸಲಿ ಬಣ್ಣ ಎಲ್ಲರಿಗೂ ಗೊತ್ತಿದೆ. ಈಗ ಕೆಪಿಸಿಸಿ ಅಧ್ಯಕ್ಷರ ಬಯಲಾಟವನ್ನು ನೋಡುವ ಸ್ಥಿತಿಗೆ ಕಾಂಗ್ರೆಸ್ ಬಂದಿರುವುದು ನಗೆಪಾಟಲಿನ ವಿಷಯ ಎಂದು ಸಚಿವರು ವ್ಯಂಗ್ಯವಾಡಿದರು.

ಶಿವಕುಮಾರ್ ತಮ್ಮನ್ನು ತಾವು ಪ್ರತಿಷ್ಠಾಪಿಸಿಕೊಳ್ಳುವ ಸ್ವಾರ್ಥದಿಂದ ಪಾದಯಾತ್ರೆಯನ್ನು ಹಿಡಿದುಕೊಂಡಿದ್ದಾರೆ. ಆದರೆ, ಇದರಿಂದ ಕೊರೋನಾ ವೇಗವಾಗಿ ಹಬ್ಬಬಹುದೇ ವಿನಾ ಮೇಕೆದಾಟು ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಹೀಗೆ ರಾಜಕೀಯ ಬಣ್ಣ ಬಳಿಯುವುದರಿಂದ ಆಗುವ ಪರಿಣಾಮಗಳನ್ನು ಅವರು ಅರ್ಥ ಮಾಡಿಕೊಳ್ಳಬೇಕಿತ್ತು. ಆದರೆ, ಅವರಿಗೆ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂತು ಬಿಡಬೇಕೆಂಬ ಭ್ರಮೆ ಹತ್ತಿದೆ ಎಂದು ಅಶ್ವತ್ಥನಾರಾಯಣ ವಾಗ್ದಾಳಿ ಮಾಡಿದರು.

Advertisement

ಏಳು ಬಾರಿ ಶಾಸಕರಾಗಿರುವ ಶಿವಕುಮಾರ್ ಅವರಿಗೆ ಇಡೀ ರಾಮನಗರ ಜಿಲ್ಲೆಯಲ್ಲಿ ಒಂದು ನೀರಾವರಿ ಯೋಜನೆಯನ್ನು ಜಾರಿಗೊಳಿಸಲು ಆಗಿಲ್ಲ. ಈಗ ಬುಡ ಅಲ್ಲಾಡುತ್ತಿರುವುದರಿಂದ ವ್ಯರ್ಥ ಕಸರತ್ತಿಗೆ ಇಳಿದಿದ್ದಾರೆ. ಈ ಮೂಲಕ ಅವರು ಜನರ ಮುಂದೆ ಬೆತ್ತಲಾಗಿದ್ದಾರೆ ಎಂದು ಅವರು ಕುಟುಕಿದರು.

Advertisement

Udayavani is now on Telegram. Click here to join our channel and stay updated with the latest news.

Next