ನವದೆಹಲಿ: ಡೊಮಿನಿಕ್ ಗಣರಾಜ್ಯದಲ್ಲಿ ಸಿಕ್ಕಿಬಿದ್ದಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಕರೆ ತರುವ ನಿಟ್ಟಿನಲ್ಲಿ ಮಹಿಳಾ ಐಪಿಎಸ್ ಅಧಿಕಾರಿ ಶಾರದಾ ರಾವತ್ ನೇತೃತ್ವದಲ್ಲಿ 6 ಮಂದಿ ಸದಸ್ಯರ ಸಿಬಿಐ ತಂಡ ಈಗಾಗಲೇ ತೆರಳಿದೆ.
ರಾವುತ್ ಅವರು ಸಿಬಿಐನಲ್ಲಿ ಬ್ಯಾಂಕ್‌ಗಳಿಗೆ ವಂಚನೆ ಎಸಗಿದ ಪ್ರಕರಣಗಳ ತನಿಖೆ ನಡೆಸುವ ವಿಭಾಗದ ಮುಖ್ಯಸ್ಥೆ. ಅವರು 2005ನೇ ಬ್ಯಾಚ್‌ನ ಮಹಾರಾಷ್ಟ್ರ ಕೇಡರ್ ಅಧಿಕಾರಿ. ಚೋಕ್ಸಿಯನ್ನು ಗಡಿಪಾರು ಮಾಡುವ ನಿಟ್ಟಿನಲ್ಲಿ ಎರಡೂ ದೇಶಗಳ ಅಧಿಕಾರಿಗಳು ಹಲವು ಹಂತದ ಮಾತುಕತೆ ನಡೆಸಿದ್ದಾರೆ. ಸಿಬಿಐ ತಂಡವಲ್ಲದೆ, ಜಾರಿ ನಿರ್ದೇಶನಾಲಯದ ತಂಡವೂ ಡೊಮಿನಿಕ್ ಗಣರಾಜ್ಯಕ್ಕೆ ತೆರಳಿದೆ.
ಇದೇ ವೇಳೆ “ಬ್ಯುಸಿನೆಸ್ ಸ್ಟಾಂಡರ್ಡ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೆಹುಲ್ ಚೋಕ್ಸಿ ಪತ್ನಿ ಪ್ರೀತಿ ಚೋಕ್ಸಿ “ಮೇ 23 ರಂದು ಪತಿ ರಾತ್ರಿಯ ಊಟಕ್ಕಾಗಿ ತೆರಳಿದ್ದವರು ಮತ್ತೆ ವಾಪಸಾಗಲಿಲ್ಲ. ಜತೆಗೆ ಅವರಿಗೆ ಪರಿಚಿತಳಾಗಿದ್ದ ಮಹಿಳೆ ಅಪಾಯಕಾರಿ ಅಲ್ಲ. ಪತಿ ನಾಪತ್ತೆಯಾದ ಕೂಡಲೇ ಡೊಮಿನಿಕ್ ಗಣರಾಜ್ಯದಲ್ಲಿರುವ ಭಾರತದ ದೂತಾವಾಸಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಯೋಗಿ ಆದಿತ್ಯನಾಥ್ ಬಿಜೆಪಿಯ ಪ್ರಶ್ನಾತೀತ ನಾಯಕ : ಬಿ.ಎಲ್.ಸಂತೋಷ್
ಇನ್ನೊಂದು ಕುತೂಹಲಕಾರಿ ಬೆಳವಣಿಗೆಯಲ್ಲಿ ಚೋಕ್ಸಿ ಸಹೋದರ, ಚೇತನ್ ಚಿನುಭಾಯ್ ಚೋಕ್ಸಿ, ಡೊಮಿನಿಕ್‌ನ ಪ್ರತಿಪಕ್ಷ ನಾಯಕ ಲೆನಾಕ್ಸ್ ಲಿಂಟನ್‌ಗೆ ಸುಳ್ಳು ಸುದ್ದಿ ಹರಡಲು ಹಣಪಾವತಿ ಮಾಡಿದ್ದಾರೆಂದು “ಎಸೋಸಿಯೇಟ್ಸ್ ಟೈಮ್ಸ್’ ವರದಿ ಮಾಡಿದೆ. ಆದರೆ, ಚೇತನ್ ಯಾರು ಎಂಬುದೇ ಗೊತ್ತಿಲ್ಲ. ಸುಳ್ಳು ಸುದ್ದಿ ಹರಡಲು ಹಣಪಾವತಿ ಆರೋಪವೂ ಸುಳ್ಳು ಎಂದು ಲಿಂಟನ್ ತಿಳಿಸಿದ್ದಾರೆ.