ಶ್ರೀನಗರ್; “ತನ್ನನ್ನು ಮತ್ತೆ ಅಕ್ರಮವಾಗಿ ವಶಕ್ಕೆ ಪಡೆದಿದ್ದು, ತನ್ನ ಮಗಳು ಇಲ್ಟಿಜಾಳನ್ನು ಗೃಹಬಂಧನದಲ್ಲಿ ಇರಿಸಿರುವುದಾಗಿ ಪೀಪಲ್ಸ್ ಡೆಮಾಕ್ರ್ಯಾಟಿಕ್ ಪಕ್ಷ(ಪಿಡಿಪಿ)ದ ನಾಯಕಿ, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.
ಪಿಡಿಪಿ ಯುವ ಘಟಕದ ಅಧ್ಯಕ್ಷ ವಾಹೀದ್ ಉರ್ ರೆಹಮಾನ್ ಕುಟುಂಬ ಸದಸ್ಯರನ್ನು ಭೇಟಿಯಾಗಲು ತನಗೆ ಅವಕಾಶ ಕೊಡುತ್ತಿಲ್ಲ ಎಂದು ಮುಫ್ತಿ ದೂರಿದ್ದಾರೆ. ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ನಾವೀದ್ ಬಾಬು ಜತೆ ಸಂಪರ್ಕ ಇರುವ ಆರೋಪದಡಿ ವಾಹೀದ್ ನನ್ನು ಬುಧವಾರ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿತ್ತು.
ವಾಹೀದ್ ಉರ್ ರಹಮಾನ್ ಪಿಡಿಪಿ ವರಿಷ್ಠೆ ಮೆಹಬೂಬಾ ಮುಫ್ತಿಗೆ ನಿಕಟವಾಗಿರುವುದಾಗಿ ವರದಿ ವಿವರಿಸಿದೆ. ನನ್ನನ್ನು(ಮುಫ್ತಿ) ಮತ್ತೆ ಕಳೆದ ಎರಡು ದಿನಗಳಿಂದ ಅಕ್ರಮವಾಗಿ ವಶಕ್ಕೆ ಪಡೆದಿದ್ದಾರೆ. ಪುಲ್ವಾಮಾದಲ್ಲಿರುವ ವಾಹೀದ್ ಕುಟುಂಬ ಸದಸ್ಯರನ್ನು ಭೇಟಿಯಾಗಲು ಜಮ್ಮು-ಕಾಶ್ಮೀರ ಆಡಳಿತ ಅನುಮತಿ ನೀಡಲು ನಿರಾಕರಿಸುತ್ತಿದೆ ಎಂದು ಮುಫ್ತಿ ತಿಳಿಸಿದ್ದಾರೆ.
ಇದನ್ನೂ ಓದಿ:ಸಂಪುಟ ಸಂಕಷ್ಟ ಮತ್ತೆ ಮುಂದುವರಿಕೆ: ಶಾ ಭೇಟಿಯಾಗಿ ‘ವಿಶೇಷ ತೀರ್ಮಾನ’ ಮಾಡುತ್ತೇನೆ ಎಂದ BSY
ಬಿಜೆಪಿಯ ಸಚಿವರು ಮತ್ತು ಅವರ ಕೈಗೊಂಬೆಗಳು ಕಾಶ್ಮೀರದ ಪ್ರತಿಯೊಂದು ಮೂಲೆ, ಮೂಲೆಗೂ ಭೇಟಿ ನೀಡುತ್ತಿದ್ದಾರೆ. ಆದರೆ ನನ್ನ ವಿಚಾರದಲ್ಲಿ ಮಾತ್ರ ಭದ್ರತೆಯ ಸಮಸ್ಯೆ ಇದೆ ಎಂದು ಹೇಳುತ್ತಿರುವುದಾಗಿ ಮುಫ್ತಿ ದೂರಿದ್ದಾರೆ.
ಉಗ್ರರ ಉಪಟಳ ಹೆಚ್ಚಿರುವ ಪುಲ್ವಾಮಾದಲ್ಲಿ ವಾಹೀದ್ ನವೆಂಬರ್ 28ರಂದು ನಡೆಯಲಿರುವ ಮೊದಲ ಹಂತದ ಡಿಡಿಸಿ(ಡಿಸ್ಟ್ರಿಕ್ಟ್ ಡೆವಲಪ್ ಮೆಂಟ್ ಕೌನ್ಸಿಲ್) ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.