ಮದರಂಗಿ… ಭಾರತೀಯ ಸಂಪ್ರದಾಯದಲ್ಲಿ ಶುಭವನ್ನು ಸೂಚಿಸುತ್ತದೆ. ಅದರಲ್ಲೂ ಹೆಣ್ಮಕ್ಕಳಿಗೆ ಮದರಂಗಿ ಅಂದರೆ, ಮೈ ಮನಸ್ಸು ರಂಗೇರುವುದು ಸಹಜ. ಲಿಥ್ರೇಸಿ ಕುಟುಂಬಕ್ಕೆ ಸೇರಿದ ಗೋರಂಟಿ ಸಸ್ಯದಿಂದ, ಮದರಂಗಿಯನ್ನು ತಯಾರಿಸಲಾಗುತ್ತದೆ. ಗೋರಂಟಿಯ ಸೊಪ್ಪನ್ನು ಅರೆದು, ಕೈ ಕಾಲುಗಳಿಗೆ ಚಿತ್ತಾರವಾಗಿ ಬಳಸುತ್ತಾರೆ. ಬಿಳಿ ಕೂದಲಿಗೆ ಬಣ್ಣವಾಗಿ ಮದರಂಗಿಯನ್ನು ಹಚ್ಚುವುದು ರೂಢಿ. ಮದರಂಗಿಯನ್ನು ಕೇವಲ ಬಣ್ಣವಾಗಷ್ಟೇ ಅಲ್ಲ, ಔಷಧವಾಗಿಯೂ ಬಳಸಬಹುದು. ಗೋರಂಟಿ ಎಲೆಗಳ ಔಷಧೀಯ ಬಳಕೆಗಳು ಹೀಗಿವೆ…
-ಒಂದು ಹಿಡಿ ಹಸಿ ಗೋರಂಟಿ ಕಾಯಿ ಗಳನ್ನು ನುಣ್ಣಗೆ ಅರೆದು, ಒಂದು ಲೀಟರ್ ನೀರಿಗೆ ಹಾಕಿ ಚೆನ್ನಾಗಿ ಕಾಯಿಸಿ, ಕಷಾಯ ತಯಾರಿಸಿ. ನೀಲಿ ದ್ರಾಕ್ಷಿ ಹಣ್ಣನ್ನು, ನುಣ್ಣಗೆ ರುಬ್ಬಿ ಆ ಕಷಾಯಕ್ಕೆ ಸೇರಿಸಬೇಕು. ನಂತರ, ಒಂದು ಬಟ್ಟಲು ಕಷಾಯಕ್ಕೆ ಸ್ವಲ್ಪ ನೀರು ಸೇರಿಸಿ ಕೂದಲಿಗೆ ಹಚ್ಚಿ. ಎರಡ್ಮೂರು ಗಂಟೆಗಳ ನಂತರ, ಸೀಗೆಕಾಯಿ ಹಾಕಿ ಕೂದಲನ್ನು ತೊಳೆಯಿರಿ.
-ಒಂದು ಹಿಡಿ ಹಸಿ ಗೋರಂಟಿ ಎಲೆಗಳನ್ನು ಚೆನ್ನಾಗಿ ಕುಟ್ಟಿ, ಶುಭ್ರವಾದ ಬಟ್ಟೆಯಲ್ಲಿ ಸೋಸಿ ರಸ ತೆಗೆದು, ಆ ರಸವನ್ನು ಬೆವರುಗುಳ್ಳೆಗಳಿಗೆ ಹಚ್ಚಬೇಕು.
-ಹಸಿ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು, ಸ್ವಲ್ಪ ಲಿಂಬೆ ರಸ ಸೇರಿಸಿ ಹಚ್ಚಿದರೆ ಅಂಗೈ ಅಂಗಾಲು ಉರಿ, ಅಂಗಾಲು ಒಡೆಯುವುದು ಕಡಿಮೆಯಾಗುತ್ತದೆ.
-ಹಸಿ ಅಥವಾ ಒಣಗಿದ ಗೋರಂಟಿ ಸೊಪ್ಪನ್ನು ನುಣ್ಣಗೆ ಅರೆದು, ಸ್ವಲ್ಪ ಕರ್ಪೂರವನ್ನು ಸೇರಿಸಿ, ತಲೆಗೆ ಹಚ್ಚಿದರೆ ಹೇನು-ಸೀರುಗಳು ನಾಶವಾಗುತ್ತವೆ.
-ಮದರಂಗಿ ರಸವನ್ನು ಹಚ್ಚಿದರೆ ಉಗುರು ಸುತ್ತು ವಾಸಿಯಾಗುತ್ತದೆ.
-ಗೋರಂಟಿ ಸೊಪ್ಪನ್ನು ಅರೆದು ತಲೆಗೆ ಹಚ್ಚಿದರೆ, ತಲೆಹೊಟ್ಟು ಹೋಗುತ್ತದೆ.