ಕಳೆದ ಬಾರಿ ಕನ್ನಡ “ಬಿಗ್‌ಬಾಸ್’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾಗಿದ್ದ ಪ್ರಗತಿಪರ ಕೃಷಿಕ ಶಶಿಕುಮಾರ್, ಈಗ ಹೀರೋ ಆಗಿ ಬೆಳ್ಳಿತೆರೆಗೆ ಎಂಟ್ರಿಯಾಗುತ್ತಿದ್ದಾರೆ. ಹೌದು, ಶಶಿಕುಮಾರ್ ನಾಯಕರಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ “ಮೆಹಬೂಬಾ’ ಬುಧವಾರ ಚಾಲನೆ ಕಂಡಿದೆ. ಮಾಜಿ ಸಚಿವ ವಿ. ಸೋಮಣ್ಣ ಕ್ಯಾಮರಾ ಸ್ವಿಚ್ ಆನ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ.
ಈ ಹಿಂದೆ “ಕಥಾ ವಿಚಿತ್ರ’ ಚಿತ್ರ ನಿರ್ದೇಶಿಸಿದ್ದ ಅನೂಪ್ ಅಂಟೋನಿ, “ಮೆಹಬೂಬಾ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ಸ್ಕಂದ ಎಂಟರ್‌ಟೈನ್ಮೆಂಟ್’ ಬ್ಯಾನರ್‌ನಲ್ಲಿ ಪ್ರಸನ್ನ ಶ್ರೀನಿವಾಸ್ ನಿರ್ಮಿಸುತ್ತಿದ್ದಾರೆ. ಕೆಲ ವರ್ಷಗಳ ಹಿಂದೆ ನಡೆದ ನೈಜ ಘಟನೆ ಆಧರಿಸಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಶಶಿಕುಮಾರ್ ಅವರಿಗೆ ನಾಯಕಿಯಾಗಿ ಪಾವನಾ ಜೋಡಿಯಾಗುತ್ತಿದ್ದಾರೆ. ಉಳಿದಂತೆ ಜೈ ಜಗದೀಶ್,ಬುಲೆಟ್ ಪ್ರಕಾಶ್, ಕಲ್ಯಾಣಿ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
“ಮೆಹಬೂಬಾ’ ಚಿತ್ರಕ್ಕೆ ಕಿರಣ್ ಹಂಪಾಪೂರ್ ಛಾಯಾಗ್ರಹಣ, ಕೆ. ಎಂ ಪ್ರಕಾಶ್ ಸಂಕಲನವಿದೆ. ಚಿತ್ರದ ನಾಲ್ಕು ಹಾಡುಗಳಿಗೆ ಮ್ಯಾಥ್ಯೂ ಮನು ಸಂಗೀತ ಸಂಯೋಜಿಸುತ್ತಿದ್ದಾರೆ. ರಘು ಶಾಸ್ತ್ರಿ ಚಿತ್ರಕ್ಕೆ ಸಾಹಿತ್ಯ ಮತ್ತು ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದ ಬಹುಭಾಗ ಚಿತ್ರೀಕರಣ ಮೈಸೂರು ಹಿನ್ನೆಲೆಯಾಗಿಟ್ಟುಕೊಂಡು ನಡೆಯಲಿದ್ದು, ಕೆಲ ಸನ್ನಿವೇಶಗಳನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ. “ಮೆಹಬೂಬಾ’ ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ಚಿತ್ರತಂಡ, ಈ ಚಿತ್ರದಲ್ಲಿ ಜಾತಿ-ಧರ್ಮ, ಮತ-ಪಂಥ ಮೀರಿದ ಪ್ರೇಮಕಥೆಯೊಂದನ್ನು ಹೇಳುತ್ತಿದ್ದೇವೆ.
ಒಬ್ಬ ಹಿಂದೂ ಹುಡುಗ, ಮುಸ್ಲಿಂ ಹುಡುಗಿಯ ನಡುವಿನ ಪ್ರೇಮಕಥೆ ಚಿತ್ರದಲ್ಲಿದೆ. ಹಾಗಂತ, ಇಲ್ಲಿ ಯಾವುದೇ ಧರ್ಮ, ಜಾತಿ ಮತ್ತಿತರ ವಿಷಯಗಳನ್ನು ಹೇಳುತ್ತಿಲ್ಲ. ಪ್ರೀತಿ ಎಲ್ಲಾದಕ್ಕೂ ಮಿಗಿಲಾದದ್ದು ಎಂಬ ಸಂದೇಶವಿದೆ. ಲವ್, ಸೆಂಟಿಮೆಂಟ್, ಕಾಮಿಡಿ ಎಲ್ಲವೂ ಈ ಚಿತ್ರದಲ್ಲಿದೆ’ ಎಂಬುದು ಚಿತ್ರತಂಡದ ವಿವರ. ಸದ್ಯ ಮುಹೂರ್ತ ಮುಗಿಸಿ ಚಿತ್ರೀಕರಣಕ್ಕೆ ಅಣಿಯಾಗಿರುವ ಚಿತ್ರತಂಡ, ಮುಂದಿನ ವರ್ಷದ ಮಧ್ಯಭಾಗ “ಮೆಹಬೂಬಾ’ ಪ್ರೇಮ್ ಕಹಾನಿಯನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.