ನಟಿ ಮೇಘನಾರಾಜ್ ಅವರು ಮೊನ್ನೆಯಷ್ಟೇ ನಟ ಚಿರಂಜೀವಿ ಸರ್ಜಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈಗ ಇಬ್ಬರೂ ಹೊಸ ಚಿತ್ರಗಳಲ್ಲಿ ನಟಿಸಲು ಶುರುಮಾಡಿದ್ದಾರೆ. ಅತ್ತ, ಚಿರಂಜೀವಿ ಸರ್ಜಾ “ಆ ದಿನಗಳು’ ಚೇತನ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಲು ಸಜ್ಜಾದರೆ, ಇತ್ತ, ಮೇಘನಾರಾಜ್ ಕಾಂತ ಕನ್ನಲ್ಲಿ ನಿರ್ದೇಶನದ “ಇರುವುದೆಲ್ಲವ ಬಿಟ್ಟು’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ನಿರ್ದೇಶಕ ಕಾಂತ ಕನ್ನಲ್ಲಿ ಅವರು “ಜಲ್ಸಾ’ ಬಳಿಕ ನಿರ್ದೇಶಿಸುತ್ತಿರುವ ಎರಡನೇ ಸಿನಿಮಾ ಇದು. ಈ ಚಿತ್ರಕ್ಕೆ ಶ್ರೀ ನಾಯಕರಾಗಿದ್ದಾರೆ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ನೀಲಿ’ ಧಾರಾವಾಹಿಯ ನಾಯಕನಾಗಿರುವ ಶ್ರೀ ಅವರಿಗೆ ಇದು ಮೊದಲ ಚಿತ್ರ. ಡ್ರಾಮಾ ಜೂನಿಯರ್ನ ಅಭಿಷೇಕ್ ರಾಯಣ್ಣ ಸೇರಿದಂತೆ ಚಿತ್ರದಲ್ಲಿ ಅನೇಕ ಕಲಾವಿದರು ನಟಿಸುತ್ತಿದ್ದಾರೆ.
ಸದ್ಯಕ್ಕೆ ತಿಲಕ್ ಅವರನ್ನು ಸಂಪರ್ಕಿಸಿದ್ದು, ಅವರೂ ಸಹ ಕಥೆ, ಪಾತ್ರ ಕೇಳಿ ನಟಿಸುವುದಾಗಿ ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರವನ್ನು ದೇವರಾಜ್ ದಾವಣಗೆರೆ ನಿರ್ಮಾಣ ಮಾಡುತ್ತಿದ್ದಾರೆ. ಇವರಿಗೂ ಇದು ಮೊದಲ ಸಿನಿಮಾ. ಈಗಾಗಲೇ ಚಿತ್ರಕ್ಕೆ ಪೂಜೆ ನಡೆದಿದ್ದು, ನವೆಂಬರ್ 2 ರಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.
ನ.7 ರಿಂದ ನಾಯಕಿ ಮೇಘನಾರಾಜ್ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಅವರಿಲ್ಲಿ ಕಾರ್ಪೋರೇಟ್ ಜಗತ್ತಿನಲ್ಲಿ ಕೆಲಸ ಮಾಡುವ ಪಾತ್ರ ನಿರ್ವಹಿಸುತ್ತಿದ್ದಾರೆ. ಸಾಫ್ಟ್ವೇರ್ ರಂಗದಲ್ಲಿ ದೊಡ್ಡ ಹೆಸರು ಮಾಡಬೇಕು ಎಂಬ ಆಸೆ ಹೊತ್ತು ಬಂದಿರುವ ಪಾತ್ರವದು. ಇಲ್ಲಿ ನಾಯಕ ಅನಾಥನಾಗಿದ್ದು, ಸಂಬಂಧಗಳೇ ಗೊತ್ತಿಲ್ಲದ ಅವನಿಗೆ, ಸುಂದರ ಕುಟುಂಬ ಕಟ್ಟಿಕೊಂಡು ಅಲ್ಲೇ ಪ್ರೀತಿ ಕಾಣುವ ಹಂಬಲ ವ್ಯಕ್ತಪಡಿಸುವಂತಹ ವ್ಯಕ್ತಿತ್ವದವನು.
ಈ ಮಧ್ಯೆ ಏನೇನೆಲ್ಲಾ ಆಗಿಹೋಗುತ್ತೆ ಎಂಬುದನ್ನಿಲ್ಲಿ ತೋರಿಸುವ ಪ್ರಯತ್ನ ಮಾಡಲಿದ್ದಾರಂತೆ ನಿರ್ದೇಶಕರು. “ಇರುವುದೆಲ್ಲವ ಬಿಟ್ಟು’ ಈ ಶೀರ್ಷಿಕೆಗೆ “ಇರುವೆ ಬಿಟ್ಟುಕೊಳ್ಳುವುದೇ ಜೀವನ’ ಎಂಬ ಅಡಿಬರಹ ಕೂಡ ಇದೆ. ಅಂದಹಾಗೆ, ಇದೊಂದು ವಾಸ್ತವತೆಯ ಸಿನಿಮಾ ಎನ್ನುವ ನಿರ್ದೇಶಕರು, “ನಮ್ಮದೆಲ್ಲವನ್ನೂ ಬಿಟ್ಟು ಹೊಸ ಬದುಕು ಕಟ್ಟಿಕೊಳ್ಳಲು ಹೊರಟಾಗ, ಆಗುವ ಸಮಸ್ಯೆಗಳು, ಅನುಭವಿಸುವ ನೋವುಗಳು ಚಿತ್ರದ ಹೈಲೈಟ್.
ಈಗಿನ ಶೋಕಿ ಜೀವನ ಅಳವಡಿಸಿಕೊಳ್ಳಲು ಹೋಗಿ, ತಮ್ಮ ಸಂಬಂಧಗಳನ್ನು ಹೇಗೆ ಕಳೆದುಕೊಂಡು, ನೋವು ಪಡುತ್ತಾರೆ, ತಮ್ಮ ಮುಂದಿನ ಗುರಿ, ಭವಿಷ್ಯದ ಕನಸು ಕಟ್ಟಿಕೊಂಡು ಹೋಗುವ ಮಂದಿ, ಪೋಷಕರ ಹಿತ ಕಾಯುತ್ತಾರಾ, ಅವರ ಸಂತಸಕ್ಕೆ ಕಾರಣರಾಗುತ್ತಾರಾ ಅಥವಾ ಪಶ್ಚಾತ್ತಾಪ ಪಡುತ್ತಾರಾ ಎಂಬ ಸೂಕ್ಷ್ಮ ಅಂಶಗಳು ಚಿತ್ರದಲ್ಲಿವೆ ಎನ್ನುತ್ತಾರೆ ನಿರ್ದೇಶಕರು.
ಚಿತ್ರಕ್ಕೆ ಶ್ರೀಧರ್ ವಿ.ಸಂಭ್ರಮ್ ಸಂಗೀತ ನೀಡುತ್ತಿದ್ದಾರೆ. “ರಂಗಿತರಂಗ’ ಖ್ಯಾತಿಯ ಛಾಯಾಗ್ರಾಹಕ ವಿಲಯಮ್ ಡೇವಿಡ್ ಈ ಚಿತ್ರಕ್ಕೆ ಕ್ಯಾಮೆರಾ ಹಿಡಿಯುತ್ತಿದ್ದಾರೆ. ಕೆ.ಎಂ.ಪ್ರಕಾಶ್ ಕತ್ತರಿ ಪ್ರಯೋಗಿಸುತ್ತಿದ್ದಾರೆ. ಸುಮಾರು 45 ದಿನಗಳ ಕಾಲ ಬೆಂಗಳೂರು ಸೇರಿದಂತೆ ಹೊಸ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.