ಮೇಘನಾ ಹೆಸರು ಬದಲಾಯಿಸಿಕೊಂಡಿದ್ದಾರೆ. ಅವರು ಹೆಸರು ಬದಲಾಯಿಸಿಕೊಂಡು ಕೇವಲ ಒಂದು ತಿಂಗಳಷ್ಟೇ ಆಗಿದೆಯಂತೆ. ಇನ್ನು ಮುಂದೆ ಅವರನ್ನು ಮೇಘನಾ ಎಂದು ಕರೆದರೆ, ತಿರುಗಿ ನೋಡುತ್ತಾರೋ ಇಲ್ಲವೋ ಗೊತ್ತಿಲ್ಲ. ಸಾಕ್ಷಿ ಅಂತ ಕರೆದರೆ, ಥಟ್ಟನೆ ತಿರುಗಬಹುದು. ಎಲ್ಲಾ ಸರಿ, ಮೇಘನಾ ಹೆಸರು ಬದಲಾಯಿಸಿಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಬರಬಹುದು. ಚಿತ್ರರಂಗ ಅಂದಮೇಲೆ ನೇಮಾಲಜಿ, ನ್ಯೂಮರಾಲಜಿ ಅಂತೆಲ್ಲಾ ಬಹಳ ಸಹಜ. ಅದೇ ನೆಪದಲ್ಲಿ ಮೇಘನಾ ಅವರು ತಮ್ಮ ಹೆಸರನ್ನು ಸಾಕ್ಷಿ ಅಂತ ಬದಲಾಯಿಸಿಕೊಂಡಿರಬಹುದು.
ಮೇಘನಾ, ಸಾಕ್ಷಿಯಾದ ವಿಚಾರವೇನೋ ಗೊತ್ತಾದಂತಾಯಿತು. ಆದರೆ, ಈ ಮೇಘನಾ ಯಾರು, ಯಾವ ಚಿತ್ರದಲ್ಲಿ ನಟಿಸಿದ್ದಾರೆ ಎಂಬ ಪ್ರಶ್ನೆಗಳು ಬಂದರೆ ಅದು ತೀರಾ ಸಹಜ. ಏಕೆಂದರೆ, ಸಾಕ್ಷಿ ಅಲಿಯಾಸ್ ಮೇಘನಾ ಅಭಿನಯದ ಯಾವುದೇ ಚಿತ್ರ ಬಿಡುಗಡೆಯಾಗಿಲ್ಲ. ಹಾಗಂತ ಆಕೆ ಹೊಸಬರು ಎಂದುಕೊಂಡರೆ ಅದೂ ತಪ್ಪು. ಮೇಘನಾ ಈಗಾಗಲೇ ಐದು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಆರನೆಯ ಚಿತ್ರವಾಗಿ ಸರ್ವಂ ಶುರುವಾಗಿದೆ. ಈ ಐದರಲ್ಲಿ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲವಾದ್ದರಿಂದ, ಕನ್ನಡಿಗರಿಗೆ ಆಕೆಯ ಪರಿಚಯ ಸ್ವಲ್ಪ ಕಡಿಮೆಯೇ. ಹಾಗಂತ ಪರಿಚಯವೇ ಇಲ್ಲ ಎನ್ನುವುದೂ ತಪ್ಪಾಗುತ್ತದೆ. ಏಕೆಂದರೆ, ಮೇಘನಾ ಕನ್ನಡ ಚಿತ್ರರಂಗಕ್ಕೆ ಬಾಲನಟಿಯಾಗಿ ಬಂದವರು. ಆ ನಂತರ ಜೋಗಯ್ಯ ಸೇರಿದಂತೆ ಹಲವು ಚಿತ್ರಗಳಲ್ಲಿ ಪಾರ್ಟು ಮಾಡಿದವರು. ಆದರೆ, ನಾಯಕಿಯಾಗಿ ಅವರನ್ನಿನ್ನೂ ಕನ್ನಡಿಗರು ನೋಡಬೇಕಿದೆ.
ಸಕಲೇಶಪುರ ಮೂಲದ ಸಾಕ್ಷಿ, ಸರ್ವಂ ಚಿತ್ರಕ್ಕೂ ಮುನ್ನ ಅಲ್ಪವಿರಾಮ, ಬೆಸ್ಟ್ ಫ್ರೆಂಡ್ಸ್, ಈ ಪ್ರೀತಿಯ ಮರೆತು ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಪೈಕಿ ಎಲ್ಲಾ ಚಿತ್ರಗಳು ಬಹುತೇಕ ಮುಗಿದು, ಬಿಡುಗಡೆಗೆ ಅಣಿಯಾಗುತ್ತಿವೆ. ಇದರಲ್ಲಿ ಅಲ್ಪವಿರಾಮ ಎನ್ನುವ ಚಿತ್ರವನ್ನು ಸಾಕ್ಷಿ ಅವರ ತಾಯಿಯೇ ನಿರ್ಮಾಣ ಮಾಡಿರುವುದು ವಿಶೇಷ. ಈ ಚಿತ್ರದಲ್ಲಿ ಸಾಕ್ಷಿ ಜೊತೆಗೆ ಕಿಶೋರ್, ಕೃಷಿ ತಪಂಡ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಒಂದು ಹಾಡು ಹೊರತುಪಡಿಸಿ ಮಿಕ್ಕಂತೆ, ಚಿತ್ರದ ಕೆಲಸಗಳೆಲ್ಲಾ ಮುಗಿದಿವೆಯಂತೆ. ನಟ ಕಿಶೋರ್ ಅವರು ಸ್ವಲ್ಪ ಬಿಝಿ ಇರುವುದರಿಂದ, ಹಾಡಿನ ಚಿತ್ರೀಕರಣ ಬಾಕಿ ಉಳಿದಿದೆ. ಅದೊಂದನ್ನು ಮುಗಿಸಿದರೆ, ಅಲ್ಪವಿರಾಮ ಬಿಡುಗಡೆಯಾಗಬಹುದು. ಇನ್ನು ಬೆಸ್ಟ್ ಫ್ರೆಂಡ್ಸ್ ಕನ್ನಡದ ಮಟ್ಟಿಗೆ ಒಂಥರಾ ಕ್ರಾಂತಿಕಾರಕ ಚಿತ್ರ ಎಂದರೆ ತಪ್ಪಿಲ್ಲ. ಸಲಿಂಗಿಗಳ ಕುರಿತಾದ ಈ ಚಿತ್ರವನ್ನು ಟೇಶಿ ವೆಂಕಟೇಶ್ ನಿರ್ದೇಶಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಸಹ ಮುಗಿದಿದ್ದು, ಬಿಡುಗಡೆಗೆ ಸಜ್ಜಾಗಿದೆ. ಅಲ್ಲಿಗೆ ಈ ವರ್ಷ ಸಾಕ್ಷಿ ಅಭಿನಯದ ಮೂರ್‍ನಾಲ್ಕು ಚಿತ್ರಗಳು ಬ್ಯಾಕ್ ಟು ಬ್ಯಾಕ್ ಬಿಡುಗಡೆ ಯಾದರೆ, ಅದರಲ್ಲಿ ಆಶ್ಚರ್ಯವಿಲ್ಲ.