ಚಿರಂಜೀವಿ ಸರ್ಜಾ ಅಭಿನಯದ “ಸಿಂಗ’ ಚಿತ್ರದಲ್ಲಿ ಹಾಡೊಂದನ್ನು ಹಾಡಿದ್ದ ನಟಿ ಮೇಘನಾರಾಜ್ ಇದೀಗ ಮತ್ತೂಂದು ಹಾಡು ಹಾಡುವ ಮೂಲಕ ತಾನೊಬ್ಬ ಪಕ್ಕಾ ಗಾಯಕಿ ಎನಿಸಿಕೊಂಡಿದ್ದಾರೆ. ಹಾಗಂತ, ಬೇರೆ ಯಾವುದೋ ಚಿತ್ರಕ್ಕೆ ಅವರು ಹಾಡಿಲ್ಲ. ಪತಿ ಚಿರಂಜೀವಿ ಸರ್ಜಾ ಅಭಿನಯದ “ಶಿವಾರ್ಜುನ’ ಚಿತ್ರದಲ್ಲಿ ಅವರು ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಹೌದು, ಇತ್ತೀಚೆಗೆ ಅವರು ಸಾಧುಕೋಕಿಲ ಸ್ಟುಡಿಯೋದಲ್ಲಿ ಹಾಡನ್ನು ಹಾಡಿದ್ದಾರೆ.
ಅಂದಹಾಗೆ, ಕವಿರಾಜ್ ಅವರು ಬರೆದಿರುವ “ಅಲ್ಲೊಂದು ನೀಲಿ ಬಾನು…’ ಎಂಬ ರೊಮ್ಯಾಂಟಿಕ್ ಹಾಡಿಗೆ ಧ್ವನಿಯಾಗಿದ್ದಾರೆ. ಅದೊಂದು ವೆಸ್ಟ್ರನ್ ಇಂಡಿಯನ್ ಶೈಲಿಯಲ್ಲಿ ಮೂಡಿಬಂದಿರುವ ಹಾಡಾಗಿದ್ದು, ಸಾಧುಕೋಕಿಲ ಅವರ ಪುತ್ರ ಸುರಾಗ್ ಕೋಕಿಲ ಅವರ ಸಂಗೀತ ಸಂಯೋಜನೆಯಲ್ಲಿ ಆ ಹಾಡು ಮೂಡಿಬಂದಿದೆ. ಈ ಕುರಿತು ಹೇಳುವ ನಿರ್ದೇಶಕ ಶಿವತೇಜಸ್, “ಚಿತ್ರದಲ್ಲಿ ರೊಮ್ಯಾಂಟಿಕ್ ಸಾಂಗ್‌ವೊಂದಿತ್ತು.
ಅದನ್ನು ಸಂಚಿತ್‌ಹೆಗ್ಡೆ ಅವರಿಂದ ಹಾಡಿಸಬೇಕು ಎಂಬ ನಿರ್ಧಾರ ಆಗಿತ್ತು. ಫೀಮೇಲ್ ವಾಯ್ಸ್ ಯಾರದಿದ್ದರೆ ಚೆನ್ನಾಗಿರುತ್ತೆ ಎಂಬ ಚರ್ಚೆ ನಡೆಯಿತು. ಕೊನೆಗೆ, ಮೇಘನಾರಾಜ್ ಅವರಿಂದ ಹಾಡಿಸಿದರೆ ಹೇಗೆ ಎಂಬ ಯೋಚನೆಯೂ ಬಂತು. ಅವರು “ಸಿಂಗ’ ಚಿತ್ರದಲ್ಲಿ ಹಾಡಿದ್ದ ಹಾಡನ್ನು ಕೇಳಿದ ಬಳಿಕ ಯಾಕೆ ಮೇಘನಾರಾಜ್ ಅವರಿಂದಲೇ ಈ ರೊಮ್ಯಾಂಟಿಕ್ ಹಾಡನ್ನು ಹಾಡಿಸಬಾರದು ಅಂತ ನಿರ್ಧರಿಸಿ, ಅವರಿಂದಲೇ ಹಾಡಿಸಿದ್ದೇವೆ.
ಇದು ಮೇಘನಾರಾಜ್ ಅವರು ಚಿರಂಜೀವಿ ಸರ್ಜಾ ಅವರ ಎರಡನೇ ಚಿತ್ರಕ್ಕೆ ಹಾಡಿರುವ ಹಾಡು ಎಂಬುದು ವಿಶೇಷ ಎನ್ನುವ ಶಿವತೇಜಸ್, ಕೇವಲ ಒಂದುವರೆ ತಾಸಿನಲ್ಲೇ ಪ್ರೊಫೆಷನಲ್ ಗಾಯಕಿಯರು ಹಾಡುವಂತೆಹಾಡಿದ್ದಾರೆ. ಆ ಸಾಂಗ್‌ನಲ್ಲಿ ಒಂದು ರೀತಿಯ ಮಾದಕತೆ ಇದೆ. ಇಷ್ಟರಲ್ಲೇ ಹಾಡನ್ನು ಮಾಧ್ಯಮದ ಮುಂದೆ ಪ್ರದರ್ಶಿಸಲಾಗುವುದು’ ಎಂದು ವಿವರ ಕೊಡುತ್ತಾರೆ ಶಿವತೇಜಸ್.
ಇನ್ನು, ಚಿತ್ರದ ಮತ್ತೂಂದು ವಿಶೇಷವೆಂದರೆ, ತಾರಾ ಅವರ ಪುತ್ರ ಕೃಷ್ಣ ಕೂಡ ಮೊದಲ ಸಲ ನಟಿಸಿದ್ದು, ಅವನ ಪಾತ್ರಕ್ಕೇ ಅವನೇ ಡಬ್ಬಿಂಗ್ ಕೂಡ ಮಾಡಿದ್ದಾನೆ. ಮಾರ್ಚ್ 12 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರವನ್ನು ಶಿವಾರ್ಜುನ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅಮೃತಾ ಅಯ್ಯಂಗಾರ್, ಅಕ್ಷತಾ ಶ್ರೀನಿವಾಸ್, ಅಕ್ಷತಾ ಬೋಪಯ್ಯ ನಾಯಕಿಯರು. ಹಾಸ್ಯ ನಟ ಶಿವರಾಜ್ ಕೆ.ಆರ್.ಪೇಟೆ ಕೂಡ ಕಾಣಿಸಿಕೊಂಡಿದ್ದಾರೆ.