ಮೇಘನಾ ರಾಜ್ ಸದ್ದಿಲ್ಲದೇ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಇದು ಮದುವೆ ಬಳಿಕ ಮೇಘನಾ ಒಪ್ಪಿರುವ ಮೊದಲ ಸಿನಿಮಾ. ಸೃಜನ್ ಲೋಕೇಶ್ ನಾಯಕರಾಗಿರುವ ಈ ಚಿತ್ರಕ್ಕೆ ಬುಧವಾರ ಮುಹೂರ್ತ ನಡೆದಿದೆ. ಮಧುಚಂದ್ರ ಈ ಚಿತ್ರದ ನಿರ್ದೇಶಕರು. ಇತ್ತೀಚೆಗಷ್ಟೇ ಮಧುಚಂದ್ರ ನಿರ್ದೇಶನದ “ರವಿ ಹಿಸ್ಟರಿ’ ಚಿತ್ರ ತೆರೆಕಂಡಿತ್ತು.
ಅದರ ಬೆನ್ನಲ್ಲೇ ಮಧುಚಂದ್ರ ಹೊಸ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಇನ್ನು, ಚಿತ್ರಕ್ಕೆ ಶೀರ್ಷಿಕೆ ಇನ್ನಷ್ಟೇ ಅಂತಿಮವಾಗಬೇಕಿದೆ. ಈ ಚಿತ್ರದಲ್ಲಿ ಅತಿಯಾಗಿ ಮೊಬೈಲ್ ಬಳಸುವುದರಿಂದಾಗುವ ಪಾಸಿಟಿವ್ ಹಾಗೂ ನೆಗೆಟಿವ್ ಅಂಶಗಳನ್ನು ಹೇಳಲು ಚಿತ್ರತಂಡ ಹೊರಟಿದೆ. ಹಾಗಂತ ಗಂಭೀರವಾಗಿಯಲ್ಲ. ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಹೇಳಲಿದೆಯಂತೆ.
ಚಿತ್ರದ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಮೇಘನಾ ರಾಜ್, “ನನ್ನ ಪಾತ್ರ ತುಂಬಾ ಚೆನ್ನಾಗಿದೆ. ಇವತ್ತು ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳು ಅನಿವಾರ್ಯವಾಗಿ ಮೊಬೈಲ್ ಬಳಸಲೇಬೇಕು. ಅತಿಯಾದ ಮೊಬೈಲ್ ಬಳಕೆಯಾದರೆ ಅದರಿಂದ ಏನೆಲ್ಲಾ ತೊಂದರೆಗಳಾಗುತ್ತವೆ ಎಂಬ ಅಂಶವನ್ನು ತುಂಬಾ ಫನ್ನಿಯಾಗಿ,
ಜನರಿಗೆ ಬೇಗನೇ ತಲುಪುವ ರೀತಿಯಲ್ಲಿ ಹೇಳಲು ಹೊರಟಿದ್ದಾರೆ ನಿರ್ದೇಶಕರು’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ಮೇಘನಾರಾಜ್. ಚಿತ್ರದ ಚಿತ್ರೀಕರಣ ಏಪ್ರಿಲ್ 24 ರಿಂದ ಆರಂಭವಾಗಲಿದೆ. ಇನ್ನು, ತಮ್ಮ ಕಥೆಯ ಆಯ್ಕೆ ಬಗ್ಗೆ ಮಾತನಾಡುವ ಮೇಘನಾ ರಾಜ್, “ಈ ಹಿಂದೆಯೂ ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ಕೇಳುತ್ತಿದ್ದೆವು.
ಈಗಲೂ ಅದು ಮುಂದುವರೆದಿದೆ. ಈಗ ಚಿರು ಕೂಡಾ ಜೊತೆಗಿರುತ್ತಾರೆ. ನಮ್ಮ ಕುಟುಂಬದಲ್ಲಿ ಯಾರೇ ಸಿನಿಮಾ ಒಪ್ಪಿಕೊಳ್ಳುವುದಾದರೂ ಎಲ್ಲರೂ ಒಟ್ಟಾಗಿ ಕಥೆ ಕೇಳುತ್ತೇವೆ’ ಎನ್ನುತ್ತಾರೆ ಮೇಘನಾ. ಮೇಘನಾ ರಾಜ್ ಮತ್ತೂಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಚುನಾವಣೆ ಬಳಿಕ ಅದು ಆರಂಭವಾಗಲಿದೆಯಂತೆ.