ಶಿಲ್ಲಾಂಗ್: ಮಹತ್ವದ ವಿದ್ಯಮಾನವೊಂದರಲ್ಲಿ ಮೇಘಾಲಯದ ರಾಜ್ಯಪಾಲ ವಿ ಷಣ್ಮುಗನಾಥನ್ ಅವರು ಗುರುವಾರ ರಾತ್ರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ರಾಜ ಭವನದಲ್ಲಿ ಮಹಿಳಾ ಉದ್ಯೋಗಿಗಳೊಂದಿಗೆ ಅನೈತಿಕ ವ್ಯವಹಾರದಲ್ಲಿ ತೊಡಗಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದಾರೆ.
ರಾಜಭವನದ ಘನತೆಯನ್ನು ಕಾಪಾಡುವ ಸಲುವಾಗಿ ಷಣ್ಮುಗನಾಥನ್ ಅವರನ್ನು ಹುದ್ದೆಯಿಂದ ತೆಗೆದು ಹಾಕಬೇಕೆಂದು 100ಕ್ಕೂ ಹೆಚ್ಚು ಉದ್ಯೋಗಿಗಳು ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜ್‌ನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದರು.
ಷಣ್ಮುಗನಾಥನ್ ಅವರು ಪೂರ್ಣ ಸಮಯ ಕರ್ತವ್ಯಕ್ಕೆ ಪುರುಷ ಸಿಬಂದಿಯನ್ನು ತೆಗೆದು ಹಾಕಿ ಹುಡುಗಿಯರನ್ನು ನೇಮಕ ಮಾಡಿಕೊಂಡಿದ್ದಾರೆ ಮತ್ತು ರಾಜಭವನದ ಭದ್ರತಾ ವಿಚಾರಗಳಲ್ಲಿ ರಾಜಿ ಮಾಡಿಕೊಂಡಿದ್ದು ಕೆಲವು ಮಹಿಳೆಯರಿಗೆ ತನ್ನ ಮಲಗುವ ಕೋಣೆಗೂ ಪ್ರವೇಶವನ್ನು ನೀಡಿದ್ದಾರೆ. ಒಂದರ್ಥದಲ್ಲಿ ರಾಜಭವನವನ್ನು ಲೇಡಿಸ್ ಕ್ಲಬ್ ಮಾಡಿಕೊಂಡಿದ್ದಾರೆ ಎಂದು ರಾಜಭವನದ ಉದ್ಯೋಗಿ ಗಳು ಆರೋಪಿಸಿದ್ದಾರೆ.
ಮಹಿಳಾ ಉದ್ಯೋಗಿಗಳು ಮತ್ತು ಸಂಘಟನೆಗಳು ಷಣ್ಮುಗನಾಥನ್ ಅವರ ನಡವಳಿಕೆಯಿಂದ ಬೇಸತ್ತು ಸಹಿ ಸಂಗ್ರಹ ಅಭಿಯಾನ ನಡೆಸಿದ್ದರು. ರಾಜಭವನದ ಉದ್ಯೋಗಕಾಂಕ್ಷಿಗಳಿಗೂ ಲೈಂಗಿಕ ಕ್ರಿಯೆಗೆ ಆಹ್ವಾನಿಸಿದ್ದಾರೆ ಎಂದು ಆರೋಪಿಸಲಾಗಿದೆ.
67 ರ ಹರೆಯದ ಷಣ್ಮುಗನಾಥನ್ ಅವರು 2015 ರಲ್ಲಿ ಮೇಘಾಲಯದ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದರು. ನವೆಂಬರ್‌ನಿಂದ ಅವರು ಹೆಚ್ಚುವರಿಯಾಗಿ ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದರು.