ಹೊಸದಿಲ್ಲಿ: ಆಗಸ್ಟ್‌ನಲ್ಲಿ ರಷ್ಯಾದಲ್ಲಿ ನಡೆಯಲಿರುವ ಬೃಹತ್ ಸೇನಾ ಕವಾಯತು ಇದೀಗ ಏಷ್ಯಾ ದೇಶಗಳಲ್ಲಿನ ಭಯೋತಾದನೆ ನಿಗ್ರಹ ಕಾರ್ಯಾಚರಣೆಯನ್ನೇ ಕೇಂದ್ರೀಕರಿಸಿದೆ. ಭಾರತ, ಪಾಕಿಸ್ಥಾನ ಹಾಗೂ ಇತರ SCO ದೇಶಗಳು ಈ ಕವಾಯತಿನಲ್ಲಿ ಭಾಗವಹಿಸಲಿವೆ. ಭಾರತದಿಂದ ಸುಮಾರು 200 ಭೂ ಸೇನೆ ಮತ್ತು ವಾಯುಪಡೆಯ ಸಿಬಂದಿ ಈ ಭಾಗವಹಿಸಲಿದ್ದು, ರಷ್ಯಾದ ಚೆಲ್ಯಬಿನ್ಸ್‌ಕ್‌ನಲ್ಲಿ ಆಗಸ್ಟ್ 20ರಿಂದ 29ರವರೆಗೆ ನಡೆಯಲಿದೆ.
ಇದು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಪಾಕಿಸ್ಥಾನವು ಉಗ್ರರಿಗೆ ನೆರವು ನೀಡುವುದನ್ನು ನಿಲ್ಲಿಸಬೇಕೆಂದು ಹಿಂದಿನಿಂದಲೂ ಭಾರತ ಒತ್ತಡ ಹೇರುತ್ತಿತ್ತು. ಈ ವೇದಿಕೆಯಲ್ಲಿ ಪಾಕಿಸ್ಥಾನದೊಂದಿಗೆ ಭಾರತ ಯಾವ ರೀತಿ ತನ್ನ ನಿಲುವನ್ನು ಇಲ್ಲಿ ಪ್ರಸ್ತುತಪಡಿಸುತ್ತದೆ ಎಂಬುದು ಅತ್ಯಂತ ಮುಖ್ಯ ಎಂದು ಹೇಳಲಾಗಿದೆ. ಮೂರು ತಿಂಗಳುಗಳ ಹಿಂದಷ್ಟೇ ಈ ದೇಶಗಳ ಸೇನಾ ಮುಖ್ಯಸ್ಥರು ಸಭೆ ಸೇರಿ, ಈ ಭಾಗದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯನ್ನು ವೃದ್ಧಿಸುವುದು ಮತ್ತು ಉಗ್ರರ ಆರ್ಥಿಕ ಹಾಗೂ ಮೂಲಸೌಕರ್ಯ ನೆರವನ್ನು ಸ್ಥಗಿತಗೊಳಿಸುವಲ್ಲಿ ಪರಸ್ಪರ ಸಹಕಾರ ನೀಡುವುದಾಗಿ ನಿರ್ಧರಿಸಿದ್ದರು. ಅಲ್ಲದೆ ಜೂನ್‌ನಲ್ಲಿ ಕಿಂಗಾxವೋನಲ್ಲಿ ನಡೆದ SCO ಸಭೆಯಲ್ಲೂ ಈ ಬಗ್ಗೆ ಇನ್ನಷ್ಟು ಒಕ್ಕೊರಲಿನ ಧ್ವನಿ ವ್ಯಕ್ತವಾಗಿತ್ತು. ಸಮ್ಮೇಳನದ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರನ್ನೂ ಭೇಟಿ ಮಾಡಿದ್ದರು.
ಯಾವ ದೇಶಗಳು ಭಾಗಿ? ರಷ್ಯಾ, ಭಾರತ, ಪಾಕಿಸ್ಥಾನ, ಚೀನ, ಕಿರ್ಗಿಸ್ತಾನ್, ಕಜಕಿಸ್ಥಾನ್, ತಜಕಿಸ್ಥಾನ್ ಮತ್ತು ಉಜ್ಬೆಕಿಸ್ಥಾನ್.
– ಉಗ್ರ ನಿಗ್ರಹವೇ ಪ್ರಥಮ ಆದ್ಯತೆ
– ಮುಂದಿನ ತಿಂಗಳ 20 ರಿಂದ 29ರ ವರೆಗೆ
– ಎಂಟು ದೇಶಗಳು ಭಾಗಿ