Advertisement

ಮೇಘಶ್ರೀ ರಾಗ

06:00 AM Apr 29, 2018 | Team Udayavani |

ಮೇಘಶ್ರೀ ಎಂಬ ನಟಿ ಇದಕ್ಕೂ ಮುನ್ನ ಮಾರ್ಚ್‌ 22 ಎಂಬ ಚಿತ್ರದಲ್ಲಿ ನಟಿಸಿದ್ದರೂ, ಆಕೆಯ ಹೆಸರು ಅಷ್ಟೇನೂ ಜನಪ್ರಿಯವಾಗಿರಲಿಲ್ಲ. ಯಾವಾಗ ಕೃಷ್ಣ ತುಳಸಿ ಚಿತ್ರ ಬಿಡುಗಡೆಯಾಯಿತೋ, ಮೇಘಶ್ರೀ ಎಂಬ ಹೆಸರು ಸಾಕಷ್ಟು ಸುದ್ದಿ ಮಾಡುತ್ತಿದೆ. ಅದಕ್ಕೆ ಕಾರಣ ಆಕೆಯ ಅಭಿನಯ. ಕೃಷ್ಣ ತುಳಸಿ ಚಿತ್ರದಲ್ಲಿ ಮೇಘಶ್ರೀ ಅಂಧೆಯಾಗಿ ಕಾಣಿಸಿಕೊಂಡಿದ್ದು, ಎಲ್ಲೆಡೆಯಿಂದ ಆಕೆಯ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ.

Advertisement

ಕೃಷ್ಣ ತುಳಸಿ ಚಿತ್ರವು ಮೇಘಶ್ರೀಗೆ ಒಳ್ಳೆಯ ಹೆಸರು ತಂದುಕೊಡುತ್ತಿದ್ದರೂ, ಆ ಚಿತ್ರದಲ್ಲಿ ನಟಿಸುವುದಕ್ಕೆ ಮುನ್ನ ಮೇಘಶ್ರೀ ಹಿಂದೇಟು ಹಾಕಿದ್ದರಂತೆ. ಕಾರಣ ಆ ಚಿತ್ರದಲ್ಲಿ ಅಂಧೆಯಾಗಿ ನಟಿಸುವುದರ ಜೊತೆಗೆ, ಡಿಗ್ಲಾಮರ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ನಾಯಕಿಯರು ಎಂದರೆ ಗ್ಲಾಮರಸ್‌ ಪಾತ್ರ ಎಂಬಂತಾಗಿದೆ. ಅದರಲ್ಲೂ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳಲು ಬಹುತೇಕ ನಟಿಯರು ಬಯಸುತ್ತಾರೆ. ಹಾಗಾಗಿ ಡಿಗ್ಲಾಮರ್‌ ಪಾತ್ರವೊಂದು ಸಿಕ್ಕಾಗ ಮೇಘಶ್ರೀ ಸಹಜವಾಗಿಯೇ ಎರಡು ಬಾರಿ ಯೋಚಿಸಿದ್ದರಂತೆ.

“”ನಾವು ಮೊದಲ ಚಿತ್ರದಲ್ಲಿ ಹೇಗೆ ಲಾಂಚ್‌ ಆಗುತ್ತೇವೆ ಎಂಬುದು ಕೂಡಾ ಮುಖ್ಯವಾಗುತ್ತದೆ. ಕೃಷ್ಣ ತುಳಸಿ ಚಿತ್ರದಲ್ಲಿ ನನ್ನದು ಡಿಗ್ಲಾಮರ್‌ ಪಾತ್ರ. ಮೊದಲ ಚಿತ್ರದಲ್ಲೇ ಈ ತರಹದ ಪಾತ್ರ ಮಾಡಿದರೆ ಮುಂದೆ ನನ್ನ ಕೆರಿಯರ್‌ಗೆ ಹೊಡೆತ ಬೀಳಬಹುದು ಎಂಬ ಭಯ ಕಾಡಿದ್ದು ಸುಳ್ಳಲ್ಲ. ಕೊನೆಗ ಒಪ್ಪಿಕೊಂಡೆ. ಗ್ಲಾಮರಸ್‌ ಪಾತ್ರಗಳನ್ನು ಮುಂದೆಯೂ ಮಾಡಬಹುದು. ಆದರೆ, ಈ ತರಹದ ಅಪರೂಪ ಪಾತ್ರವನ್ನು ಕೈಬಿಟ್ಟು ನಾಳೆ ಕೊರಗಬಾರದು ಎಂದು ಒಪ್ಪಿಕೊಂಡೆ” ಎಂದೆನ್ನುತ್ತಾರೆ ಮೇಘಶ್ರೀ.

ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡ ಮೇಲೂ ಮೇಘಶ್ರೀ, ಟೆನ್ಶನ್‌ನಿಂದ ಸಿನೆಮಾ ಮಾಡುವುದಿಲ್ಲ ಎಂದು ಹೇಳಿದ್ದರಂತೆ. “”ನಿರ್ದೇಶಕ ಸುಕೇಶ್‌ ನನ್ನ ಮೇಲೆ ವಿಶ್ವಾಸವಿಟ್ಟು ಆಡಿಷನ್‌ ಮಾಡದೇ ಅವಕಾಶ ಕೊಟ್ಟರು. ಇಡೀ ತಂಡ ಚಿತ್ರೀಕರಣಕ್ಕೆಂದು ಮೈಸೂರಿಗೆ ಶಿಫ್ಟ್ ಆಗಿತ್ತು. ಚಿತ್ರೀಕರಣ ಪ್ರಾರಂಭವಾಗುವ ಹಿಂದಿನ ದಿನ ರಾತ್ರಿ ಸಹಾಯಕ ನಿರ್ದೇಶಕರು ಸೀನ್‌ ಪೇಪರ್‌ ಕೊಟ್ಟರು. ಎಷ್ಟೇ ಪ್ರಯತ್ನ ಮಾಡಿದರೂ, ತುಳಸಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಲು ಸಾಧ್ಯವೇ ಆಗಲಿಲ್ಲ. ಅಂಥ ಸಂದರ್ಭದಲ್ಲಿ ನಾನು ಚಿತ್ರ ಮಾಡುವುದಿಲ್ಲ ಎಂದು ಹೇಳಿದ್ದು ಕೇಳಿ ಎಲ್ಲರಿಗೂ ಅಚ್ಚರಿಯಾಯಿತು. ಕೊನೆಗೆ ಎಲ್ಲರೂ ಧೈರ್ಯ ತುಂಬಿದರು. ಮೊದಲೆರಡು ದಿನ ಸುಲಭವಾದ ದೃಶ್ಯಗಳನ್ನು ಚಿತ್ರೀಕರಣ ಮಾಡಿ ಆತ್ಮವಿಶ್ವಾಸ ತುಂಬಿದರು. ಆ ನಂತರ ಸ್ವಲ್ಪ ಸುಲಭವಾಯಿತು” ಎಂದು ಚಿತ್ರದಲ್ಲಿನ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ ಮೇಘಶ್ರೀ. 

ಮೊದಲ ಸಿನೆಮಾದಲ್ಲಿ ಗ್ಲಾಮರ್‌ ಇಲ್ಲದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೇಘಶ್ರೀ ಮುಂದೆ ಗ್ಲಾಮರಸ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರಂತೆ. ಈಗಾಗಲೇ ಕದ್ದುಮುಚ್ಚಿ ಎಂಬ ಸಿನೆಮಾದಲ್ಲಿ ಅವರು ನಟಿಸಿದ್ದಾರೆ. ಆ ಚಿತ್ರದಲ್ಲಿ ಅವರ ಪಾತ್ರ ಗ್ಲಾಮರಸ್‌ ಆಗಿದೆಯಂತೆ. ಅದಲ್ಲದೆ, ರವಿಚಂದ್ರನ್‌ ಅಭಿನಯದ ದಶರಥ, ಚಿರಂಜೀವಿ ಸರ್ಜಾ ಅಭಿನಯದ ರಾಜಮಾರ್ತಾಂಡ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ.

Advertisement

“ನನಗೆ ಮುಂದೆ ಒಳ್ಳೆಯ, ನಟನೆಗೆ ಅವಕಾಶವಿರುವ ಪಾತ್ರಗಳ ಮೂಲಕ ಗುರುತಿಸಿಕೊಳ್ಳ ಬೇಕೆಂಬ ಆಸೆ ಬಹಳ ಇದೆ. ಅದರಲ್ಲೂ ರವಿಚಂದ್ರನ್‌ ಅವರ “ಸಿಪಾಯಿ’ ಸಿನಿಮಾದಲ್ಲಿ ಸೌಂದರ್ಯ ಅವರು ಮಾಡಿರುವಂತಹ ಪಾತ್ರ ಮಾಡಲು ನನಗಿಷ್ಟ’ ಎನ್ನುತ್ತಾರೆ ಮೇಘಶ್ರೀ.

Advertisement

Udayavani is now on Telegram. Click here to join our channel and stay updated with the latest news.

Next