ಇತ್ತೀಚಿನ ದಿನಗಳಲ್ಲಿ ಕಿರುತೆರೆಯಿಂದ ಹಿರಿತೆರೆಗೆ ಅಡಿಯಿಟ್ಟು ಬೇಡಿಕೆ ಪಡೆದುಕೊಳ್ಳುತ್ತಿರುವ ನಟಿಯರಲ್ಲಿ ಮೇಘಾ ಶೆಟ್ಟಿ ಕೂಡ ಒಬ್ಬರು. ಕಿರುತೆರೆಯಲ್ಲಿ “ಜೊತೆ ಜೊತೆಯಲಿ…’ ಧಾರಾವಾಹಿಯ ಸಕ್ಸಸ್ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ತ್ರಿಬಲ್ ರೈಡಿಂಗ್’ ಚಿತ್ರದ ಮೂಲಕ ಬಿಗ್ ಸ್ಕ್ರೀನ್ಗೆ ಎಂಟ್ರಿಯಾಗಿರುವ ಮೇಘಾ ಶೆಟ್ಟಿ, ತಮ್ಮ ಚೊಚ್ಚಲ ಚಿತ್ರ ಬಿಡುಗಡೆಯಾಗುವ ಮೊದಲೇ ಸ್ಯಾಂಡಲ್ವುಡ್ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ತಯಾರಿಯಲ್ಲಿದ್ದಾರೆ.
ಸದ್ಯ “ತ್ರಿಬಲ್ ರೈಡಿಂಗ್’ ಬಳಿಕ ಮೇಘಾ ಶೆಟ್ಟಿ ಮತ್ತೂಂದು ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ “ಜಿಲ್ಕಾ’ ಚಿತ್ರದಲ್ಲಿ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯವಾಗಿದ್ದ ಕವೀಶ್ ಶೆಟ್ಟಿ ಅಭಿನಯದ ಎರಡನೇ ಚಿತ್ರ ಇದಾಗಿದ್ದು, ಇನ್ನು ಹೆಸರಿಡದ ಈ ಚಿತ್ರದಲ್ಲಿ ಮೇಘಾ ಶೆಟ್ಟಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಕನ್ನಡದ ಜೊತೆ ತಮಿಳು, ತೆಲುಗು ಮರಾಠಿ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಗ್ ಬಜೆಟ್ನಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದೆ. ಕನ್ನಡ, ತೆಲುಗು, ತಮಿಳಿನ ಹಲವು ನಿರ್ದೇಶಕರ ಜೊತೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವವಿರುವ ಸಡಗರ ರಾಘವೇಂದ್ರ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಚಿತ್ರದ ಟೈಟಲ್ ಅನೌನ್ಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
“ಕ್ಲಾಸಿಕ್ ಸ್ಟುಡಿಯೋ’ ಮತ್ತು “ಇಂಡಿಯನ್ ಫಿಲ್ಮ್… ಫ್ಯಾಕ್ಟರಿ’ ಬ್ಯಾನರ್ನಲ್ಲಿ ಉಡುಪಿ ಮೂಲದ ವಿಜಯ್ ಕುಮಾರ್ ಶೆಟ್ಟಿ ಹಾಗೂ ರಮೇಶ್ ಕೊಠಾರಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕನ್ನಡ, ಮರಾಠಿ ಮತ್ತು ಇತರ ಭಾಷೆಯ ಕಲಾವಿದರು ಮತ್ತು ತಂತ್ರಜ್ಞರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶೀಘ್ರದಲ್ಲಿ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆ ಇದೆ.